ಪಕ್ಷ ದ್ರೋಹಿಗಳಿಗೆ ಪಾಠ ಕಲಿಸಲು ಮುಂದಾಯ್ತ ಕಾಂಗ್ರೆಸ್‌ ಹೈಕಮಾಂಡ್‌ ….!

ಬೆಂಗಳೂರು:

   ಲೋಕಸಭಾ ಚುನಾವಣೆ ಫಲಿತಾಂಶ 2024 ಪ್ರಕಟಗೊಂಡಿದ್ದು, ರಾಜ್ಯ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಕೆಲವೆಡೆ ನಾಯಕರು ಪಕ್ಷಕ್ಕೆ ದ್ರೋಹ ಬಗೆದು ಪ್ರತಿಸ್ಪರ್ಧಿಗಳಿಗೆ ವಿಜಯಕ್ಕೆ ಸಹಾಯ ಮಾಡಿದ ಮಾತುಗಳು ಬರುತ್ತಿದ್ದು, ಇಂತಹವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

   ಪ್ರಸ್ತುತ ಕಾಂಗ್ರೆಸ್ ಹೈಕಮಾಂಡ್ ಇಂಡಿಯಾ ಮೈತ್ರಿಕೂಟದಲ್ಲಿ ಬ್ಯುಸಿಯಾಗಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಯಾದ ಬಳಿಕ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

   ಅಭ್ಯರ್ಥಿಗಳು ತಮ್ಮ ಸೋಲಿಗೆ ಕಾರಣಗಳ ಬಗ್ಗೆ ಶೀಘ್ರದಲ್ಲೇ ಹೈಕಮಾಂಡ್’ಗೆ ವರದಿ ಸಲ್ಲಿಸಲಿದ್ದು, ಎಐಸಿಸಿ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಒಂದು ವಾರದೊಳಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.

   ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಿದ ಬಳಿಕ ಸೋಲಿನ ಪರಾಮರ್ಶೆ ನಡೆಸಲಿದ್ದಾರೆ. ಹೈಕಮಾಂಡ್‌ಗೆ ಶಾಕ್ ನೀಡಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿನ ಡಿಕೆ.ಸುರೇಸ್ ಸೋಲು ಕುರಿತು ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

   ಶಿವಕುಮಾರ್ ಅವರು ಬುಧವಾರ ಮಂಡ್ಯ ಮತ್ತು ಕೋಲಾರ ಜಿಲ್ಲೆಗಳ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದು, ಶೀಘ್ರದಲ್ಲೇ ಸಿದ್ದರಾಮಯ್ಯ ಅವರ ಜೊತೆಗೂ ಸಭೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

   ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯದ ವರದಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ತಲುಪಿದ್ದು, ಹೈಕಮಾಂಡ್ ಈ ಬಗ್ಗೆ ಗಂಭೀರವಾಗಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

  ಡಿಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

   ನಮ್ಮ ಕುಟುಂಬಕ್ಕೆ ಟಿಕೆಟ್‌ ನೀಡಬಾರದು ಎಂದು ಪಟ್ಟು ಹಿಡಿದವರು, ಚುನಾವಣೆಯ ನಾಯಕತ್ವ ವಹಿಸಿದವರು ಕೆ.ಎಚ್‌.ಮುನಿಯಪ್ಪ ಕೋಲಾರ ಚುನಾವಣೆಗೆ ಬರಬಾರದು ಎಂದು ಹಠ ಹಿಡಿದವರು ಚುನಾವಣೆ ಸೋಲಿನ ಹೊಣೆಗಾರಿಕೆಯನ್ನು ಹೊರಬೇಕಿದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. 

    ಹೈಕಮಾಂಡ್‌ ಸೂಚನೆ ನೀಡಿದ ಕಡೆಗಳಲೆಲ್ಲಾ ಪ್ರಚಾರ ಮಾಡಿದ್ದೇನೆ, ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಆದರೆ ಜನರಿಗೆ ಕಾಂಗ್ರೆಸ್‌‍ನ ಎರಡೂ ಬಣಗಳು ಒಟ್ಟಾಗಿವೆ ಎಂದು ಸಂದೇಶ ನೀಡುವಲ್ಲಿ ವಿಫಲವಾದೆವು. ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ರಮೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮತ್ತು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಒಳಜಗಳವೇ ಕಾರಣ ಎಂದು ಆರೋಪಿಸಿದ್ದಾರೆಂದು ತಿಳಿದುಬಂದಿದೆ.

  ಇದೇ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತುಮಕೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಸ್‌ಪಿ ಮುದ್ದಹನುಮೇಗೌಡ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಸೋಲಿನ ಹೊಣೆಯನ್ನು ನಾನು ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೊರಬೇಕಾಗುತ್ತದೆ ಎಂದು ಡಾ.ಪರಮೇಶ್ವರ ಹೇಳಿದರು.

   2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೆಲಸ ಮಾಡಲಿಲ್ಲ. ಆದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪಕ್ಷದ ಮೇಲಧಿಕಾರಿಗಳಿಗೆ ಈ ಬಗ್ಗೆ ವಿವರಣೆ ನೀಡಲಾಗುತ್ತದೆ ಎಂದು ತಿಳಿಸಿದರು.

   ಈ ಬಾರಿ ಸಂಪುಟ ಪುನಾರಚನೆ ಆಗದಿದ್ದರೂ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಕೆಲವು ಸಚಿವರನ್ನು ಯಾವಾಗ ಬೇಕಾದರೂ ಕೈಬಿಡುವ ಸಾಧ್ಯತೆಗಳಿವೆ. ಏಕೆಂದರೆ, ಚಳಿಗಾಲ ಅಧಿವೇಶನ ಹತ್ತಿರ ಬರುತ್ತಿದ್ದು, ಈ ವೇಳೆ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

   ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (ಎಂವಿಎಸ್‌ಟಿಡಿಸಿ) 187.33 ಕೋಟಿ ರೂಪಾಯಿ ದುರುಪಯೋಗದ ಆರೋಪದ ಬಗ್ಗೆ ಸಚಿವ ಬಿ ನಾಗೇಂದ್ರ ಅವರಿಂದಲೇ ಈ ಕಾರ್ಯ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap