ಗ್ರಾಮಾಂತರಕ್ಕೆ ಕೈ ಹುಡುಕಾಟ : ಅಭ್ಯರ್ಥಿಗಳಿಗೆ ಪರದಾಟ

ತುಮಕೂರು:

    ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಈವರೆಗೂ ಅಭ್ಯರ್ಥಿಯ ಹೆಸರು ಪ್ರಕಟಿಸಿಲ್ಲ. ಹಾಗಂತ ಈ ಕ್ಷೇತ್ರ ಸ್ಪರ್ಧಾಳುಗಳಿಂದ ಕೂಡಿ ಕಗ್ಗಂಟಿನ ಕ್ಷೇತ್ರವಾಗಿ ಪರಿಗಣಿತವಾಗಿದೆ ಎಂದೇನಲ್ಲ. ಸಮಸ್ಯೆ ಎದುರಾಗಿರುವುದು ಯಾರನ್ನು ತಂದು ಇಲ್ಲಿ ನಿಲ್ಲಿಸಬೇಕು ಎಂಬುದು.

     ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಿದೆ. ಟಿಕೆಟ್ ಗಾಗಿ ಪೈಪೋಟಿಗಳೂ ನಡೆದವು. ಕೆಲವು ಕಡೆ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಘಟಾನುಘಟಿ ನಾಯಕರು ಇರುವ ಕಾರಣ ತಮ್ಮ ವಿರೋಧವನ್ನು ಹೋರಾಟದ ರೂಪದಲ್ಲಿ ಪ್ರದರ್ಶಿಸದೆ ಇರಬಹುದು. ಇಂತಹವರೆಲ್ಲ ಮುಂದಿನ ಭವಿಷವನ್ನ್ಯು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷದ ನಿರ್ಧಾರ ಗೌರವಿಸಿ ಮೌನವಹಿಸಿದ್ದಾರೆ.

    ಇನ್ನು ಕೆಲವು ಕಡೆ ಅಸಮಾಧಾನ ಸ್ಪೋಟವಾಗಿ ಅವರನ್ನು ಸಮಾಧಾನಿಸುವ ಪ್ರಯತ್ನಗಳು ನಡೆಯುತ್ತಿವೆ. ಬೇರೆಲ್ಲ ಕಡೆ ಇಂತಹ ವಾತಾವರಣ ಕಂಡು ಬಂದರೆ ತುಮಕೂರು ಗ್ರಾಮಾಂತರದ ಪರಿಸ್ಥಿತಿಯೇ ಬೇರೆ ಇದೆ. ಈ ವೇಳೆಗಾಗಲೇ ತುಮಕೂರು ಗ್ರಾಮಾಂತರದ ಅಭ್ಯರ್ಥಿಯ ಆಯ್ಕೆಯೂ ಪ್ರಕಟವಾಗಬೇಕಿತ್ತು.

   2008 ರಿಂದ ಉದಯವಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತಗಳು ಅನ್ಯ ಪಕ್ಷಗಳ ಪಾಲಾಗುತ್ತಿವೆ. ಕಾಂಗ್ರೆಸ್‌ನಿAದ ಅಭ್ಯರ್ಥಿಗಳು ಸ್ಪರ್ಧಿಸುತ್ತಾ ಬಂದಿದ್ದರೂ ಎರಡನೇ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ಗಮನಿಸಿಯೇ ಈ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಲು ಹಿಂದೇಟು ಹಾಕುತ್ತಿದ್ದಾರೆ. ಒಮ್ಮೆ ಸ್ಪರ್ಧಿಸಿದವರು ಮತ್ತೊಮ್ಮೆ ಇತ್ತ ಬರುತ್ತಿಲ್ಲ.

    ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕ ಹೆಚ್.ನಿಂಗಪ್ಪ ಅವರು ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರ್ಪಡೆಯಾದಾಗ ತುಮಕೂರು ಗ್ರಾಮಾಂತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎಂಬ ವದಂತಿಗಳು ದಟ್ಟವಾಗಿದ್ದವು. ಟಿಕೆಟ್ ಬಯಸಿಯೇ ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಎಚ್.ನಿಂಗಪ್ಪ ಅವರೂ ಸಹ ಈಗ ಪ್ರಬಲ ಆಕಾಂಕ್ಷಿಯಾಗಿ ನಿಂತಿಲ್ಲ. ಆರೋಗ್ಯ ಸಮಸ್ಯೆ ಹೇಳಿಕೊಂಡು ನಿರ್ಲಿಪ್ತರಾಗಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಅರ್ಜಿ ಸಲ್ಲಿಸಿರುವ ಕೆಲವರಲ್ಲಿ ಸೂರ್ಯ ಮುಕುಂದರಾಜ್ ಮತ್ತು ಶ್ರೀನಿವಾಸ್ ಯಾರಾದರೊಬ್ಬರಿಗೆ ಟಿಕೆಟ್ ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

    ಈ ನಡುವೆ ಕಳೆದ ಒಂದು ವಾರದಿಂದ ಕಾಂಗ್ರೆಸ್‌ನೊಳಗೆ ಹೊಸ ಕೆಲವು ಬೆಳವಣಿಗೆಗಳು ನಡೆದಿವೆ.. ತುಮಕೂರು ಗ್ರಾಮಾಂತರಕ್ಕೆ ಗೊಲ್ಲ ಜನಾಂಗದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಬೇಕೆಂಬ ಪ್ರಸ್ತಾವನೆ ಎದುರಾಗಿದೆ. ಶಿರಾದಲ್ಲಿ ಗೊಲ್ಲ ಜನಾಂಗದ ಅಭ್ಯರ್ಥಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದವು. ಸಾಸಲು ಸತೀಶ್ ಅಲ್ಲಿ ಆಕಾಂಕ್ಷಿಯಾಗಿದ್ದರು. ಟಿ.ಬಿ.ಜಯಚಂದ್ರ ಅವರಿಗೆ ಅವಕಾಶ ದೊರಕಿದೆ. ಹಿಂದುಳಿದ ಜಾತಿಗೆ ಟಿಕೆಟ್ ಕೊಡಬೇಕೆಂಬ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಗೊಲ್ಲ ಜನಾಂಗದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯ ಪಾಲನೆ ಮಾಡುವ ಇಮೇಜಿನಲ್ಲಿ ಕೆಲವರು ಚಿಂತನೆ ನಡೆಸಿದ್ದಾರೆ.

     ಈ ಬೆಳವಣಿಗೆಗಳ ಪ್ರಕಾರ ದಿವಂಗತ ಎಲ್.ಟಿ.ಗೋವಿಂದಪ್ಪ (ಗೊಲ್ಲ ಜನಾಂಗದ ಮಾಜಿ ಅಧ್ಯಕ್ಷರು) ಅವರ ಅಳಿಯ ನಿವೃತ್ತ ಇಂಜಿನಿಯರ್ ಷಣ್ಮುಖಪ್ಪ, ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವುಯಾದವ್,ಹಿರಿಯೂರಿನ ಮಾಜಿ ಜಿ.ಪಂ.ಸದಸ್ಯ ಪಾಪಣ್ಣ ಇವರ ಹೆಸರುಗಳು ಕೇಳಿಬರತೊಡಗಿವೆ.

    ಷಣ್ಮುಖಪ್ಪ ಅವರು 2020ರ ಶಿರಾ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು. ಇದಕ್ಕೂ ಹಿಂದೆ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆ.ಸಿ.ಮಾಧುಸ್ವಾಮಿ ಅವರ ಪರ ಕೆಲಸ ಮಾಡಿದ್ದರು. ಇವರೂ ಸೇರಿದಂತೆ ಜನಾಂಗದ ಕೆಲ ಮುಖಂಡರು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸಿದ್ದರು.

    ಆದರೆ ಇವರಲ್ಲಿ ಬಹುತೇಕ ಮಂದಿ ಈಗ ಬಿಜೆಪಿಯಿಂದ ಹೊರ ಬಂದಿದ್ದಾರೆ. ಶಿರಾ ಕ್ಷೇತ್ರದಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಲಿಲ್ಲ ಎಂಬ ಅಸಹನೆ ಈ ಸಮಾಜದಲ್ಲಿ ವ್ಯಕ್ತವಾಗಿದೆ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಚಂಗಾವರ ಮಾರಣ್ಣ ಅವರನ್ನು ನೇಮಿಸಲಾಯಿತಾದರೂ ಆ ಆದೇಶ ದಾಖಲೆಯಲ್ಲಿಯೇ ಉಳಿಯುವಂತಾಯಿತು. ತಾಂತ್ರಿಕ ಅಡಚಣೆಗಳ ಹೆಸರಲ್ಲಿ ಅವರು ಅಧಿಕಾರ ಸ್ವೀಕರಿಸಲು ಬಿಡಲೇ ಇಲ್ಲ.

    ಚುನಾವಣೆ ಹೊಸ್ತಿಲಲ್ಲಿ ಈಗ ಮತ್ತೆ ಆದೇಶ ಬಂದಿದೆ. ನಾಮಕಾವಸ್ಥೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದನ್ನು ಬಿಟ್ಟರೆ ಈವರೆಗೆ ಬೇರೇನೂ ಆಗಿಲ್ಲ.ಸಮುದಾಯದಲ್ಲಿ ಎದುರಾಗಿರುವ ಈ ಅಸಹನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ಹಾಗೂ ಆಕಾಂಕ್ಷಿಗಳ ಒತ್ತಡ ಇಲ್ಲದ ಗ್ರಾಮಾಂತರದಲ್ಲಿ ಈ ಸಮುದಾಯಕ್ಕೆ ಒಂದು ಅವಕಾಶ ಕಲ್ಪಿಸುವುದು. ಈ ಎರಡೂ ದೃಷ್ಟಿಕೋನದಿಂದ ಗೊಲ್ಲ ಸಮುದಾಯಕ್ಕೆ ಒಂದು ಅವಕಾಶ ಕಲ್ಪಿಸಲು ಮುಂದಾಗಿದ್ದು, ಟಿಕೆಟ್ ಹಂಚಿಕೆಯ ಪ್ರಯತ್ನಗಳು ನಡೆದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap