ನವದೆಹಲಿ:
ನರೇಂದ್ರ ಮೋದಿ ಸರ್ಕಾರ ಸುಲಿಗೆ ಮತ್ತು ಆರ್ಥಿಕ ಭಯೋತ್ಪಾದನೆಯ ಮೂಲಕ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ ಎಂದು ಗುರುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯಂತಹ ತನಿಖಾ ಸಂಸ್ಥೆಗಳ ದಾಳಿಯ ನಂತರ ಕನಿಷ್ಠ 30 ಸಂಸ್ಥೆಗಳು ಬಿಜೆಪಿಗೆ ಭಾರಿ ಮೊತ್ತದ ದೇಣಿಗೆ ನೀಡಿವೆ ಎಂದು ಆರೋಪಿಸಿದೆ.
ತನಿಖಾ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡ ನಂತರ 30 ಸಂಸ್ಥೆಗಳು ಬಿಜೆಪಿಗೆ 335 ಕೋಟಿ ರೂಪಾಯಿ ದೇಣಿಗೆ ನೀಡಿವೆ ಎಂದು ಕಾಂಗ್ರೆಸ್ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ಆರೋಪಿಸಿದೆ. ಪೈಕಿ 23 ಕಂಪನಿಗಳು 2014ರಿಂದ ದಾಳಿ ನಡೆದ ವರ್ಷದವರೆಗೆ ಬಿಜೆಪಿಗೆ ಯಾವುದೇ ದೇಣಿಗೆ ನೀಡಿಲ್ಲ ಎಂದು ವರದಿ ಹೇಳಿದೆ.
ಸುಲಿಗೆ ಮತ್ತು ಆರ್ಥಿಕ ಭಯೋತ್ಪಾದನೆಯ ಮೂಲಕ ನಿರಂಕುಶಾಧಿಕಾರದ ಮೋದಿ ಸರ್ಕಾರ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ), ಜಾರಿ ನಿರ್ದೇಶನಾಲಯ(ಇಡಿ) ಮತ್ತು ಐಟಿ ಇಲಾಖೆ ದಾಳಿ ನಡೆಸಿದ ನಂತರ ಕೆಲವೇ ತಿಂಗಳುಗಳಲ್ಲಿ ಈ ಸಂಸ್ಥೆಗಳು ಬಿಜೆಪಿಗೆ ಹೆಚ್ಚಿನ ಮೊತ್ತವನ್ನು ನೀಡಿರುವುದಾಗಿ ವರದಿಗಳು ತೋರಿಸುತ್ತಿವೆ ಎಂದು ಖರ್ಗೆ ತಿಳಿಸಿದ್ದಾರೆ.
“ಒಂದೆಡೆ ಮೋದಿ ಸರ್ಕಾರವು ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ ಜನರ ದುಡಿಮೆಯ ಹಣವನ್ನು ಕದಿಯಲು ಬಯಸುತ್ತಿದೆ ಮತ್ತು ಇನ್ನೊಂದೆಡೆ ಇಡಿ, ಸಿಬಿಐ, ಐ-ಟಿ ಇತ್ಯಾದಿಗಳ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಗೆ ಬೆದರಿಕೆ ಹಾಕುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ನರೇಂದ್ರ ಮೋದಿ ಸರ್ಕಾರ, ಆದಾಯ ತೆರಿಗೆ ಇಲಾಖೆ ಮತ್ತು ಇತರ ಏಜೆನ್ಸಿಗಳ ಮೂಲಕ 30 ಕಂಪನಿಗಳ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿಗೆ 335 ಕೋಟಿ ರೂ. ದೇಣಿಗೆ ನೀಡುವಂತೆ ಒತ್ತಾಯಿಸಿದೆ ಎಂದು ಆರೋಪಿಸಿದ್ದಾರೆ.
“ಪ್ರತಿಪಕ್ಷಗಳ ಲೂಟಿ ಮತ್ತು ಬಿಜೆಪಿಯ ಬೊಕ್ಕಸವನ್ನು ತುಂಬಲು ದಾನಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವುದು ನಮ್ಮ ಪ್ರಜಾಪ್ರಭುತ್ವದ ಕರಾಳ ಘಟ್ಟ! ನಾವು ಇದರ ವಿರುದ್ಧ ನ್ಯಾಯಾಲಯದಲ್ಲಿ ಮತ್ತು ಜನರ ನ್ಯಾಯಾಲಯದಲ್ಲಿ ಹೋರಾಡುತ್ತೇವೆ” ಎಂದು ಎಐಸಿಸಿ ಅಧ್ಯಕ್ಷರು ತಿಳಿಸಿದ್ದಾರೆ.