ಮಧುಗಿರಿ :
ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ವಿರೋಧ ಪಕ್ಷದಲ್ಲಿರಲಿದೆ. ಹಣ ನೀಡದೆ ಕೇವಲ ಖಾಲಿ ಬಜೆಟ್ ಬಗ್ಗೆ ಘೋಷಣೆ ಮಾಡಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಹಣವಿಲ್ಲದ ಸುಳ್ಳಿನ ಬಜೆಟ್ ಘೋಷಣೆ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳಿನ ಸರದಾರ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ಪುರವರ ಹೋಬಳಿಯ ಹನುಮಂತಪುರದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನಲ್ಲಿ 10 ಜನ ಸಿಎಂ ರೇಸ್‌ನಲ್ಲಿದ್ದಾರೆ. ಅದರಲ್ಲಿ ನಾನೂ ಕೂಡ ಒಬ್ಬ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಿದ್ದು, ನಂತರ ದಲಿತ ಸಿಎಂ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಹಣ ನೀಡಿ ಘೋಷಣೆ ಮಾಡಿದರೆ ನಮ್ಮ ತಕರಾರು ಇಲ್ಲ. ಆದರೆ ಕೇವಲ ಚುನಾವಣೆ ದೃಷ್ಟಿಯಿಂದ ಈ ಘೋಷಣೆಯನ್ನು ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಆಯ್ಕೆ ಸಮಿತಿಯು ಈ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಜಾತಿ ನೋಡಿ ಮುಖ್ಯಮಂತ್ರಿ ಮಾಡುವುದಿಲ್ಲ. ಬದಲಾಗಿ ಅರ್ಹತೆ ನೋಡಿ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತೆ ಎಂದರು.
ಹೊಸ ಪಕ್ಷಗಳಿಗೆ ನೆಲೆಯಿಲ್ಲ :
ರಾಜ್ಯದಲ್ಲಿ ಹೊಸದಾಗಿ ಹುಟ್ಟಿಕೊಂಡ ಆಪ್, ರೆಡ್ಡಿ ಪಾರ್ಟಿ, ಎಂಐಎA, ಕೆಆರ್‌ಎಸ್ ಹಾಗೂ ಇತರೆ ಪಕ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗಲ್ಲ. ಕೆಲವು ಕಡೆ ಪ್ರಮುಖ ಮೂರು ಪಕ್ಷಗಳ ಮತಗಳನ್ನು ಸ್ವಲ್ಪ ಪಡೆಯಬಹುದಷ್ಟೆ. ಆದರೆ ಒಂದೂ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಜೆಡಿಎಸ್ 123 ಸ್ಥಾನಗಳನ್ನು ಪಡೆಯುವ ಬಗ್ಗೆ ಪ್ರತಿಕ್ರಿಯಿಸಿದ ಪರಂ, ಅದು ಒಂದು ಪ್ರಾದೇಶಿಕ ಪಕ್ಷವಾಗಿದ್ದು, ಅವರದ್ದೇ ಆದ ರಿಪೋರ್ಟ್ ಇರುತ್ತದೆ. ಮೊದಲು ಅದು 224 ಕ್ಷೇತ್ರದಲ್ಲೂ ಟಿಕೆಟ್ ನೀಡಿದರೆ, ಉಳಿದದ್ದು ನೋಡಬಹುದು. ಆದರೆ ಕಾಂಗ್ರೆಸ್ 224 ಕ್ಷೇತ್ರದಲ್ಲೂ ಸ್ಪರ್ಧಿಸಲಿದ್ದು ಅಧಿಕಾರಕ್ಕೆ ಏರುವುದು ಖಚಿತ ಎಂದರು.
ಲೆಕ್ಕ ಕೊಡ್ತೀನಿ ಮತ ನೀಡಿ :
ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ ಕಳೆದ 5 ವರ್ಷದಲ್ಲಿ 2500 ಕೋಟಿ ರೂ. ಅನುದಾನ ತಂದಿದ್ದು, ಎಲ್ಲ ಗ್ರಾಮಗಳ ಅಭಿವೃದ್ಧಿಯ ಲೆಕ್ಕ ಕೊಡುತ್ತಿದ್ದು, ಕೆಲಸ ಮಾಡಿದ ನನಗೆ ಜನತೆ ಮತ ನೀಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೆ 10 ಕೆ.ಜಿ.ಅಕ್ಕಿ, ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಗೂ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮ ಕಾಂಗ್ರೆಸ್‌ದ್ದಾಗಿದೆ. ನಾನು ಲೆಕ್ಕ ಕೊಟ್ಟು ಮತ ಕೇಳುತ್ತಿದ್ದೇನೆ. ಶಾಲೆ, ಆಸ್ಪತ್ರೆ, ರಸ್ತೆ, ಚರಂಡಿ, ಅಂಗನವಾಡಿ, ದೇವಸ್ಥಾನಗಳ ಅಭಿವೃದ್ಧಿಯ ಜೊತೆಗೆ 20 ಸಾವಿರ ಮನೆಗಳನ್ನು ಕ್ಷೇತ್ರಕ್ಕೆ ತಂದಿದ್ದು ತಮ್ಮ ಕೆಲಸ ನೋಡಿ ಮತ ಹಾಕುವಂತೆ ಮನವಿ ಮಾಡಿದರು.
ತಾಲ್ಲೂಕು ಪೀಕಾರ್ಡ ಉಪಾಧ್ಯಕ್ಷ ಭೈರಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಇಲ್ಲಿನ ಜನರು ಬಹುಮತ ನೀಡದಿದ್ದರೂ ಸಹ ಹನುಮಂತಪುರ ಗ್ರಾಮಕ್ಕೆ 85 ಲಕ್ಷ ರೂ. ಅನುದಾನ ನೀಡಿದ್ದಾರೆ. ಮಾಜಿ ಶಾಸಕರು ಕೆಲಸ ಮಾಡದೆ ಮತ ಕೇಳುತ್ತಿದ್ದು, ಈ ಬಾರಿ ಗ್ರಾಮದ 350 ಮತಗಳಲ್ಲಿ 320 ಮತ ನೀಡಿದರೆ ಮಾತ್ರ ನಾನು ರಾಜಕೀಯ ಮಾಡ್ತೀನಿ. ಅವರಿಂದಲೇ ಗಾರ್ಮೆಂಟ್ಸ್ ಮಾಡಿಸಿ, ನೂರಾರು ಜನರಿಗೆ ಕೆಲಸ ನೀಡಿದ್ದು, ಮತ ನೀಡಿದರೆ ಮಾತ್ರ ರಾಜಕೀಯ, ಇಲ್ಲವಾದರೆ ಜನ ಸೇವೆಯಿಂದ ದೂರ ಉಳಿಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಹಾಲಿ ಉಪಾಧ್ಯಕ್ಷ ರಾಜಕುಮಾರ್, ಅಶ್ವತ್ಥ್, ಬ್ಯಾಲ್ಯ ಗ್ರಾ.ಪಂ. ಅಧ್ಯಕ್ಷೆ ಗಂಗರತ್ನಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಜೊತೆಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ