ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಉಚಿತ ಅಕ್ಕಿ, ವಿದ್ಯುತ್ ಕೊಡೊಲ್ಲ :ಎಂಟಿಬಿ

ಹೊಸಕೋಟೆ

     ಕಾಂಗ್ರೆಸ್ ಪಕ್ಷ 2023ಕ್ಕೆ ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿಗೆ 2 ಸಾವಿರ, 10 ಕೆಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆಯೊಂದಿಗೆ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಉಚಿತವಾಗಿ ಏನನ್ನೂ ಕೊಡೊಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

    ನಂದಗುಡಿ ಹೋಬಳಿಯ ಹೆತ್ತಕ್ಕಿ ಗ್ರಾಪಂ. ವ್ಯಾಪ್ತಿಯ ಬಾಣಮಾಕನಹಳ್ಳಿ, ಅಗಸರಹಳ್ಳಿ, ಮಾರಸಂಡಹಳ್ಳಿ, ಬೀರಹಳ್ಳಿ ಹಾಗೂ ಬಂಡಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಶೇಷ ಅನುದಾನ ಯೋಜನೆ 5054 ಅನುದಾನದಡಿ ಒಟ್ಟು 50 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಕಳೆದ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ವಿಪಕ್ಷ ನಾಯಕರುಗಳು ಬಡವರಿಗೆ ನಿವೇಶನ ನೀಡುವುದಾಗಿ ನಕಲಿ ಹಕ್ಕುಪತ್ರ ನೀಡಿ ಮತದಾರರನ್ನು ಯಮಾರಿಸಿರುವ ನಿದರ್ಶನಗಳು ಕಣ್ಣ ಮುಂದೆ ಇದೆ. ಇನ್ನು ಈಗ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ವಿತರಣೆ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆಗಳನ್ನು ಜನ ನಂಬಬಾರದು ಎಂದರು.

ಅಭಿವೃದ್ದಿಗೆ ಒತ್ತು :

    ಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿ ಹೊಂದಬೇಕಾದರೆ ಗುಣಮಟ್ಟದ ರಸ್ತೆಗಳಿಂದ ಮಾತ್ರ ಸಾಧ್ಯ. ಬಿಜೆಪಿ ನೇತೃತ್ವದ ಸರಕಾರ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಟ್ಟು, ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಮತ್ತಷ್ಟು ಅಭಿವೃದ್ದಿಗೆ ನಿರಂತರ ಶ್ರಮಿಸುತ್ತೇನೆ. ಆದ್ದರಿಂದ ಉಪ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮತದಾರರು 2023ರ ಚುನಾವಣೆಯಲ್ಲಿ ಮಾಡಬಾರದು ಎಂದರು.

    ಕಾರ್ಯಕ್ರಮದಲ್ಲಿ ಜಿಪಂನ ಮಾಜಿ ಸದಸ್ಯ ಸಿ. ನಾಗರಾಜ್, ಬಿಎಂಆರ್‌ಡಿಎ ಅಧ್ಯಕ್ಷ ಶಂಕರೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ್, ಕುರುಬರ ಸಂಘದ ಕಾರ್ಯದರ್ಶಿ ಲಿಂಗಾಪುರ ಮಂಜುನಾಥ್, ಗ್ರಾಪಂ ಸದಸ್ಯ ರಾಮೇಗೌಡ,  ಮಾಜಿ ಸದಸ್ಯರಾದ ಕುಳ್ಳ ರಾಜಪ್ಪ, ಮಂಜುನಾಥ್, ಮುಖಂಡರಾದ ಮಂಜುನಾಥ್, ಶ್ರೀನಿವಾಸ್, ದಿಲೀಪ್, ಲೋಕೇಶ್, ವೆಂಕಟೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap