ಬೆಂಗಳೂರು:
ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಮತ್ತು ಅದರ ಅನುಷ್ಠಾನದಲ್ಲಿನ ವಿಳಂಬದ ಬಗ್ಗೆ ಪ್ರತಿಪಕ್ಷ ಬಿಜೆಪಿ ಬುಧವಾರ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿತು. ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರು ಈ ವಿಷಯದ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ಶಾಸಕ ಆರ್ ಅಶೋಕ್, ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸುವುದಿಲ್ಲ. ಅವರಿಗೆ ಸದನದಲ್ಲಿ ಕುಳಿತುಕೊಳ್ಳಲು ಯಾವುದೇ ಹಕ್ಕಿಲ್ಲ. ಗ್ಯಾರಂಟಿಗಳಿಗೆ ಷರತ್ತು ಹಾಕುತ್ತಿರುವುದು ರಾಜ್ಯದಲ್ಲಿ ಗೊಂದಲ ಮತ್ತು ಅವ್ಯವಸ್ಥೆ ಸೃಷ್ಟಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಬಸ್ಸುಗಳು ಸದಾ ಜನಜಂಗುಳಿಯಿಂದ ಕೂಡಿದ್ದು, ಬಾಗಿಲು, ಕಿಟಕಿಗಳು ಹಾಳಾಗಿರುವ ನಿದರ್ಶನಗಳಿವೆ. ಶಕ್ತಿ ಯೋಜನೆಯು ಆಟೋರಿಕ್ಷಾ ಚಾಲಕರ ಜೀವನೋಪಾಯದ ಮೇಲೂ ಪರಿಣಾಮ ಬೀರಿದೆ. ಯೋಜನೆಯನ್ನು ಘೋಷಿಸುವ ಮುನ್ನ ಸರ್ಕಾರವು ಪರಿಣಾಮಗಳ ಬಗ್ಗೆ ಏಕೆ ಯೋಚಿಸಲಿಲ್ಲ? ಎಂದು ಪ್ರಶ್ನಿಸಿದರು.
ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2,000 ರೂ.ಗಳನ್ನು ನೀಡುವ ಗೃಹ ಲಕ್ಷ್ಮಿ ಯೋಜನೆಯಲ್ಲಿ ಸೊಸೆಯರ ವಿರುದ್ಧ ಅತ್ತೆಯರನ್ನು ಎತ್ತಿಕಟ್ಟುತ್ತಿದ್ದಾರೆ ಫಲಾನುಭವಿಗಳ ಸಂಖ್ಯೆಯನ್ನು ಮಿತಿಗೊಳಿಸಲು ಸರ್ಕಾರ ಷರತ್ತುಗಳನ್ನು ಹಾಕುತ್ತಿದೆ ಎಂದು ಈಗ, ಸಿಎಂ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಪ್ರತಿ ವರ್ಷ 60,000 ಕೋಟಿ ರೂಪಾಯಿ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವಿಕ ವೆಚ್ಚವು 1 ಲಕ್ಷ ಕೋಟಿ ದಾಟಬಹುದು. 60,000 ಕೋಟಿ ರೂ.ಗಳನ್ನು ಸರಕಾರ ಖರ್ಚು ಮಾಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.