ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ವಿಳಂಬ, ಅವ್ಯವಸ್ಥೆಯ ಆಗರ

ಬೆಂಗಳೂರು: 

   ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವುದು ಸಾರ್ವಜನಿಕರಿಗೆ ರೋಮಾಂಚನ ಉಂಟುಮಾಡಬಹುದು. ಆದರೆ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇದು ಒಂದು ಹೋರಾಟ ಆಗಿದೆ.

   ಸ್ಟೇಷನ್ ರಸ್ತೆಯ ಮುಖ್ಯ ದ್ವಾರದಲ್ಲಿ ನವೀಕರಣ ಕಾರ್ಯ ವಿಳಂಬವಾಗುತ್ತಿರುವುದರಿಂದ ಮತ್ತು ಈ ಕಡೆಯಿಂದಲೇ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುವುದರಿಂದ, ಮಧ್ಯಾಹ್ನ ಸಂಪೂರ್ಣ ಅವ್ಯವಸ್ಥೆಯಲ್ಲಿ ಆಗರವಾಗಿರುತ್ತದೆ. ಈ ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ಇಲ್ಲದ ಕಾರಣ, ಆಟೋ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರನ್ನು ದಾರಿ ತಪ್ಪಿಸುವ ಮೂಲಕ ಸುಲಿಗೆ ಮಾಡುತ್ತಿದ್ದಾರೆ.

   ಬೆಂಗಳೂರು ವಿಭಾಗದ ಮೂಲಕ ಚಲಿಸುವ ಏಳು ವಂದೇ ಭಾರತ್ ರೈಲುಗಳಲ್ಲಿ, ಎರಡು ರೈಲುಗಳು ಕಂಟೋನ್ಮೆಂಟ್ ನಿಲ್ದಾಣದಿಂದ ವಾರದಲ್ಲಿ ಆರು ದಿನ ಹೊರಡುತ್ತವೆ – ಒಂದು ಕೊಯಮತ್ತೂರಿಗೆ(ಮಧ್ಯಾಹ್ನ 2.20) ಮತ್ತು ಇನ್ನೊಂದು ತಿರುಚ್ಚಿ ಮೂಲಕ ಮಧುರೈಗೆ (ಮಧ್ಯಾಹ್ನ 1.30) ಹೊರಡುತ್ತದೆ. ಅವು 1B, 1C, 1D ಮತ್ತು 1E ಪ್ಲಾಟ್‌ಫಾರ್ಮ್‌ಗಳಿಂದ ಹೊರಡುತ್ತವೆ. ಈ ಪ್ಲಾಟ್‌ಫಾರ್ಮ್‌ಗಳಿಗೆ ಹೋಗುವ ಸಣ್ಣ ಮಾರ್ಗವು ಮುಚ್ಚಿದ ಮುಖ್ಯ ದ್ವಾರದ ಎಡಕ್ಕೆ 100 ಮೀಟರ್‌ಗಿಂತ ಕಡಿಮೆ ದೂರದಲ್ಲಿದೆ. ಇಲ್ಲಿ ಒಂದು ಸಣ್ಣ ಸೂಚನ ಫಲಕ ಅಂಟಿಸಲಾಗಿದೆ. ಆದಾಗ್ಯೂ, ಅನೇಕ ಪ್ರಯಾಣಿಕರು ಅದನ್ನು ಗಮನಿಸುವುದಿಲ್ಲ.

   ಮಧ್ಯಾಹ್ನ 1 ರಿಂದ 2.30 ರವರೆಗೆ ಸ್ಟೇಷನ್ ರಸ್ತೆಯಲ್ಲಿ ತೀವ್ರ ಗೊಂದಲ ಉಂಟಾಗುತ್ತಿದ್ದು, ವಂದೇ ಭಾರತ್ ರೈಲುಗಳು ಹೊರಟ ನಂತರ ಸುಮಾರು 800 ಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿಗೆ ತಲುಪುತ್ತಾರೆ. ಆದರೆ ಅವರಿಗೆ ಹೊರಗೆ ಯಾವುದೇ ಸಹಾಯ ಲಭ್ಯವಾಗುವುದಿಲ್ಲ.

  ಒಂದು ಸಂದರ್ಭದಲ್ಲಿ, ಒಬ್ಬ ತಾಯಿ, ಆಕೆಯ ಹದಿಹರೆಯದ ಮಗ ಮತ್ತು ಮಗಳು ಮಧ್ಯಾಹ್ನ 1.30 ರ ಸುಮಾರಿಗೆ ಸ್ಟೇಷನ್ ರಸ್ತೆಯಲ್ಲಿ ಕ್ಯಾಬ್‌ನಿಂದ ಇಳಿದು ವಂದೇ ಭಾರತ್ ರೈಲಿನಲ್ಲಿ ಕೊಯಮತ್ತೂರಿಗೆ ತೆರಳಬೇಕಾಗಿತ್ತು. ಆದರೆ ಆಟೋ ಚಾಲಕರು ಅವರ ಸುತ್ತಲೂ ಗುಂಪುಗೂಡಿ, ರೈಲಿನ ಪ್ಲಾಟ್‌ಫಾರ್ಮ್ ಸ್ಥಳದ ಬಗ್ಗೆ ಅವರಿಗೆ ದಾರಿ ತಪ್ಪಿಸಿದರು.

   “ನಮ್ಮಲ್ಲಿ ಒಬ್ಬರು, ನಿಮ್ಮನ್ನು 150 ರೂ.ಗೆ ಡ್ರಾಪ್ ಮಾಡಬಹುದು. ರೈಲು ದೂರದಲ್ಲಿರುವುದರಿಂದ ನೀವು ನಡೆಯಲು ಯತ್ನಿಸಿದರೆ ರೈಲು ತಪ್ಪಿಸಿಕೊಳ್ಳಬಹುದು” ಎಂದು ಒಬ್ಬ ಚಾಲಕ ಸುಳ್ಳು ಹೇಳಿದರು. ಆದರೆ ಸ್ಥಳದಲ್ಲಿದ್ದ ವರದಿಗಾರರೊಬ್ಬರು ಆ ಕುಟುಂಬಕ್ಕೆ ಪ್ಲಾಟ್‌ಫಾರ್ಮ್‌ ಪ್ರವೇಶ ಎಷ್ಟು ಹತ್ತಿರದಲ್ಲಿದೆ ಎಂದು ತೋರಿಸಿದರು. ಪ್ರಯಾಣಿಕರು ಇಳಿಯುತ್ತಿದ್ದಂತೆ, ಆಟೋ ಚಾಲಕರು ಅವರಿಗೆ ತಪ್ಪು ಮಾಹಿತಿ ನೀಡುತ್ತಲೇ ಇದ್ದರು.

   “ಇನ್ನೊಂದು ಪ್ರವೇಶದ್ವಾರದಲ್ಲಿ ದೊಡ್ಡ ಶೋಷಣೆ ನಡೆಯುತ್ತದೆ. ಪ್ರಯಾಣಿಕರನ್ನು ಕರೆದೊಯ್ಯುವ ಅನೇಕ ಆಟೋ ಮತ್ತು ಕ್ಯಾಬ್ ಚಾಲಕರು ಮುಖ್ಯ ರಸ್ತೆಯಲ್ಲಿನ ನಿರ್ಮಾಣ ಕಾರ್ಯದ ಕಾರಣದಿಂದಾಗಿ ರೈಲುಗಳು ಹಿಂದಿನ ಪ್ರವೇಶದಿಂದ(ಮಿಲ್ಲರ್ಸ್ ರಸ್ತೆ ಬದಿ) ಕಾರ್ಯನಿರ್ವಹಿಸುತ್ತವೆ ಎಂದು ಭಾವಿಸಿ ಅವರನ್ನು ಅಲ್ಲಿಯೇ ಇಳಿಸಿ ಹೊರಟು ಹೋಗುತ್ತಾರೆ ಎಂದು ರೈಲ್ವೆ ಮೂಲವೊಂದು TNIE ಗೆ ತಿಳಿಸಿದೆ.

   ನಿಲ್ದಾಣದಲ್ಲಿರುವ ಆಟೋ ಚಾಲಕರು ಸಾರ್ವಜನಿಕರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಇನ್ನೊಂದು ಬದಿಯಿಂದ ಪ್ರಾರಂಭವಾಗುತ್ತದೆ ಎಂದು ಹೇಳುತ್ತಾರೆ. ಅಲ್ಲದೆ ಅವರು ಕೇವಲ 2 ಕಿ.ಮೀ ದೂರದಲ್ಲಿರುವ ಪಿಎಫ್ 1 ಪ್ರವೇಶದ್ವಾರವನ್ನು ತಲುಪಲು 300 ರಿಂದ 500 ರೂ.ಗಳವರೆಗೆ ಶುಲ್ಕ ವಿಧಿಸುತ್ತಾರೆ ಮತ್ತು ಉದ್ದೇಶಪೂರ್ವಕವಾಗಿ ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.

   ಈ ಬಗ್ಗೆ ಟಿಎನ್‌ಐಇಗೆ ಪ್ರತಿಕ್ರಿಯಿಸಿದ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ ಅವರು ತಿಳಿಸಿದರು, “ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಸರಿಯಾದ ಸೂಚನಾ ಫಲಕಗಳ ಕೊರತೆಯಿಂದಾಗಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಅದನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ತಕ್ಷಣವೇ ನಾವು ಸೂಚನಾ ಫಲಕಗಳನ್ನು ಪ್ರಮುಖವಾಗಿ ಪ್ರದರ್ಶಿಸುತ್ತೇವೆ. ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯನ್ನು ತಕ್ಷಣವೇ ಅಲ್ಲಿ ನಿಯೋಜಿಸಲಾಗುವುದು” ಎಂದಿದ್ದಾರೆ.

Recent Articles

spot_img

Related Stories

Share via
Copy link