ತಿರುಪತಿ ಲಡ್ಡು ವಿವಾದ: ಸಂಚಲನ ಸೃಷ್ಟಿಸಿದ ನಟ ಪ್ರಕಾಶ್​ ರಾಜ್​ ಹೇಳಿಕೆ!

ಮರಾವತಿ:

   ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿತ್ತೆಂಬ ವಿಚಾರ ಬೆಳಕಿಗೆ ಬಂದಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಪ್ರಮಾದವನ್ನು ಸತ್ಯ ಎಂದು ಗುಜರಾತ್​ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲೆಡೆ ಚರ್ಚೆ ಜೋರಾಗಿ ನಡೆಯುತ್ತಿದೆ.

  ತಿರುಮಲ ಲಡ್ಡು ವಿವಾದದ ಬಗ್ಗೆ ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿಕೆಯನ್ನು ಉಲ್ಲೇಖಿಸಿ ನಟ ಪ್ರಕಾಶ್​ ರಾಜ್ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.​

 ನೀವು ಉಪಮುಖ್ಯಮಂತ್ರಿ ಆಗಿರುವ ರಾಜ್ಯದಲ್ಲೇ ಈ ವಿವಾದ ನಡೆದಿದೆ. ದಯವಿಟ್ಟು ಈ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಿ. ಅದನ್ನು ಬಿಟ್ಟು ನೀವೇಕೆ ಆತಂಕಗಳನ್ನು ಹರಡುತ್ತಿದ್ದೀರಿ ಮತ್ತು ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸುತ್ತಿದ್ದೀರಿ. ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮುಗಲಭೆಗಳಿವೆ ಎಂದಿರುವ ಪ್ರಕಾಶ್​ ರಾಜ್​, ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು ಎನ್ನುವ ಮೂಲಕ ಪ್ರಧಾನಿ ಮೋದಿ ಸರ್ಕಾರದ ಕಾಲೆಳೆದಿದ್ದಾರೆ.

ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಐಟಿ ಸೆಲ್​ ಮಾಡಿರುವ ಎಕ್ಸ್​ ಪೋಸ್ಟ್​ಗೆ ಪವನ್​ ಕಲ್ಯಾಣ್​ ಪ್ರತಿಕ್ರಿಯೆ ನೀಡಿದ್ದರು. ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿ ಕೊಬ್ಬು, ದನದ ಕೊಬ್ಬು) ಬೆರೆಸಿರುವುದು ಬೆಳಕಿಗೆ ಬಂದಿದ್ದು ಎಲ್ಲರ ಭಾವನೆಗಳಿಗೆ ಧಕ್ಕೆ ತಂದಿದೆ. ಹಲವು ಪ್ರಶ್ನೆಗಳಿಗೆ ವೈಎಸ್​ಆರ್​ಸಿಪಿ ಆಡಳಿತಾವಧಿಯಲ್ಲಿ ರಚನೆಯಾದ ಟಿಟಿಡಿ ಮಂಡಳಿಯೇ ಉತ್ತರ ನೀಡಬೇಕಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ ಎಲ್ಲ ದೇವಾಲಯಗಳ ವ್ಯವಹಾರಗಳ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಮಟ್ಟದ ಸನಾತನ ಧರ್ಮರಕ್ಷಣಾ ಮಂಡಳಿಯನ್ನು ಸ್ಥಾಪಿಸುವ ಸಮಯ ಬಂದಿದೆ. ಈ ಬಗ್ಗೆ ಎಲ್ಲ ಸಮುದಾಯಗಳೊಂದಿಗೆ ರಾಷ್ಟ್ರಮಟ್ಟದ ಚರ್ಚೆಯಾಗಬೇಕು. ಸನಾತನ ಧರ್ಮಕ್ಕೆ ಯಾವುದೇ ಧಕ್ಕೆಯಾಗದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪವನ್ ಕಲ್ಯಾಣ್ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು.

ವೈಎಸ್​ಆರ್​ಸಿಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ದೇವಸ್ಥಾನದ ಪ್ರಸಾದದ ಲಡ್ಡುಗಳ ತಯಾರಿಕೆಗೆ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು. ಆ ಮೂಲಕ ದೇವಸ್ಥಾನದ ಪವಿತ್ರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿತ್ತೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಿಡಿಕಾರಿದ ಬಳಿಕ ಈ ವಿವಾದ ಭುಗಿಲೆದ್ದಿತು. ಮಂಗಳಗಿರಿಯಲ್ಲಿ ನಡೆದ ಎನ್​ಡಿಎ ಮೈತ್ರಿಕೂಟದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನಾಯ್ಡು, ಪ್ರಸಾದ ಅಪವಿತ್ರಗೊಳಿಸಿದ ಬಗ್ಗೆ ಹಲವಾರು ಬಾರಿ ದೂರು ನೀಡಲಾಗಿದ್ದರೂ ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಮಾಜಿ ಸಿಎಂ ಜಗನ್​ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ

Recent Articles

spot_img

Related Stories

Share via
Copy link
Powered by Social Snap