ತುಮಕೂರು : 70 ಕೋಟಿ ರೂ. ವೆಚ್ಚದ ಕಾರ್ಡಿಯಾಲಜಿ ಕೇಂದ್ರ : ಗೃಹ ಸಚಿವ

ತುಮಕೂರು:

    ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಭಾಗವಾಗಿ ಜಿಲ್ಲೆಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಕಾರ್ಡಿಯಾಲಜಿ ಕೇಂದ್ರ ನಿರ್ಮಿಸಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

    ನಗರದ ಅಮಾನಿಕೆರೆ ಕೋಡಿ ನೀರು ಹರಿಯುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲೋಕೋಪಯೋಗಿ ಇಲಾಖೆ, ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ರೂ. 6.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯನ್ನು
ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಲು ಕನಿಷ್ಟ ಎರಡು ತಾಸು ಬೇಕಾಗುತ್ತಿದೆ. ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಕೇಂದ್ರ ನಿರ್ಮಿಸುವುದರಿಂದ ಜಿಲ್ಲೆಯ ಜನರಿಗೆ ಮಾತ್ರವಲ್ಲದೇ ಶಿವಮೊಗ್ಗ, ಹಾಸನ, ಚಿತ್ರದುರ್ಗ ಮುಂತಾದ ಜಿಲ್ಲೆಗಳ‌ ಜನರಿಗೂ ಅನುಕೂಲವಾಗಲಿದೆ ಎಂದರಲ್ಲದೆ ಜಿಲ್ಲಾಸ್ಪತ್ರೆಯು ಹಳೇ ಕಲ್ಲಿನ ಕಟ್ಟಡವಾಗಿದೆ. ರೂ. 130 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.

ವಸತಿ ನಿಲಯ: 

    ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಚೆಗೆ ಜಿಲ್ಲೆಗೆ ಬಂದಿದ್ದಾಗ, ಕೊಡುಗೆ ನೀಡುವಂತೆ ಹೇಳಿದ್ದೆ. ಜಿಲ್ಲೆಯಲ್ಲಿ ಕಾರ್ಯನಿರತ ಮಹಿಳೆಯರಿಗಾಗಿ ರೂ. 50 ಕೋಟಿ ವಸತಿ ನಿಲಯ ನಿರ್ಮಿಸಲು ಒಪ್ಪಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯ ಆವರಣದೊಳಗೆ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು‌.

ನೂತನ ಹಾಸ್ಟೆಲ್:

    ತುಮಕೂರು ಶೈಕ್ಷಿಣಿಕ ನಗರವಾಗಿದೆ. ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪೂರಕವಾದ ಹಾಸ್ಟೆಲ್‌ ವ್ಯವಸ್ಥೆಗಳಿಲ್ಲ. ಈಗಿರುವ ಹಾಸ್ಟೆಲ್‌ಗಳು ಸಾಲುತ್ತಿಲ್ಲ. ಜಿಲ್ಲೆಯಲ್ಲಿ ರೂ. 50 ಕೋಟಿ ವೆಚ್ಚದಲ್ಲಿ 12 ನೂತನ ಹಾಸ್ಟೆಲ್ ನಿರ್ಮಿಸುತ್ತಿದ್ದೇವೆ. ಇದಕ್ಕೆ ಶೀಘ್ರದಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದರು.

    ತುಮಕೂರು ಮಹಾನಗರ ಪಾಲಿಕೆಯ ಕೇವಲ 6 ವಾರ್ಡ್‌ಗಳಿಗೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ನೀಡಲಾಗಿದೆ. 29 ವಾರ್ಡ್ ಬಾಕಿ ಉಳಿದಿವೆ. ಈ ವಾರ್ಡ್‌ಗಳಲ್ಲಿ ಏನೆಲ್ಲ ಕೆಲಸಗಳಾಗಬೇಕಿದೆ ಎಂಬುದನ್ನು ಗುರುತಿಸಿ, ಅಂದಾಜು ರೂ. 100 ಕೋಟಿ ಖರ್ಚು‌ ಮಾಡಲಾಗುತ್ತಿದೆ. ಗುಬ್ಬಿ ರಸ್ತೆಯಲ್ಲಿರುವ ಭೀಮಸಂದ್ರದ ಸೇತುವೆಯನ್ನು ಸಹ ಅಗಲೀಕರಣಗೊಳಿಸುವ ಕಾಮಗಾರಿಯನ್ನು ಸದ್ಯದಲ್ಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು‌.