ತುಮಕೂರು:
ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಬಂದ್ ಆಗಿದ್ದ ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಕೇಂದ್ರಗಳು ಪುನರಾರಂಭಗೊಂಡಿವೆ. ಅನ್‍ಲಾಕ್ -4ರ ಸಂದರ್ಭದಲ್ಲಿ ಇವುಗಳಿಗೆ ಅವಕಾಶ ನೀಡಿತಾದರೂ ಒಂದಷ್ಟು ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಲಾಗಿತ್ತು. ಆದರೆ ಕ್ರಮೇಣ ಸರ್ಕಾರದ ಎಲ್ಲ ನೀತಿ ನಿಬಂಧನೆಗಳನ್ನು ಗಾಳಿಗೆ ತೂರುತ್ತಿದ್ದು, ಯಥಾಸ್ಥಿತಿ ಎಲ್ಲ ಕಡೆ ಕಾಣುವಂತಾಗಿದೆ.
ಕೊರೊನಾ ಸೋಂಕು ಈಗಷ್ಟೇ ಸೀಮಿತ ಅವಧಿಯಲ್ಲಿ ಕಡಿಮೆಯಾಗಿರಬಹುದು. ಆದರೆ ಇನ್ನೂ ಹೆಚ್ಚಳವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕೊರೊನಾ ಸೋಂಕು ಸಮುದಾಯದಲ್ಲಿ ಇನ್ನೂ ಜೀವಂತವಾಗಿರುವ ಕಾರಣ ಸಂಪೂರ್ಣ ಹತೋಟಿಗೆ ಬರುವ ತನಕ ಮುಂಜಾಗ್ರತಾ ಕ್ರಮಗಳಿಗೆ ಒತ್ತು ಕೊಡಬೇಕಾಗಿರುವುದು ಎಲ್ಲರ ಜವಾಬ್ದಾರಿ. ಸರ್ಕಾರವು ನೀತಿ ನಿಬಂಧನೆಗಳನ್ನು ಇನ್ನೂ ಸಂಪೂರ್ಣವಾಗಿ ಸಡಿಲಿಕೆ ಮಾಡಿಲ್ಲ. ಕೆಲವು ಆಚರಣೆಗಳಿಗೆ ಇಂದಿಗೂ ನಿಬಂಧನೆಗಳಿವೆ. ಧಾರ್ಮಿಕ ಸ್ಥಳ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಕೆಲವು ಕಡೆ ಬಂದ್ ಮಾಡಲಾಗಿದೆ. ಮತ್ತೆ ಕೆಲವು ಕಡೆ ನಿರ್ಬಂಧ ಸಡಿಲಿಸಲಾಗಿದೆ. ಎಲ್ಲೆಲ್ಲಿ ವೀಕ್ಷಣೆಗೆ ಅವಕಾಶವಿದೆಯೋ ಅಂತಹ ಕಡೆಗಳಿಗೆಲ್ಲ ಜನರ ನೂಕುನುಗ್ಗಲು ಹೆಚ್ಚಾಗತೊಡಗಿದೆ.
ಪ್ರವಾಸಿ ತಾಣಗಳಂತೂ ಜನರಿಂದ ಕಿಕ್ಕಿರಿದು ತುಂಬತೊಡಗಿವೆ. ತುಮಕೂರು ಜಿಲ್ಲೆಯ ದೇವರಾಯನದುರ್ಗ, ನಾಮದ ಚಿಲುಮೆ, ಮಲ್ಲಾಘಟ್ಟ ಕೆರೆ, ಮಾರ್ಕೋನಹಳ್ಳಿ ಡ್ಯಾಂ ಮತ್ತಿತರ ಪ್ರದೇಶಗಳಿಗೆ ಹೋಗಿ ಬರುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿಬರುವವರು ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನು ಉಲ್ಲಂಘಿಸುತ್ತಿರುವುದು ಸ್ಪಷ್ಟವಾಗಿದೆ. ಬಹಳಷ್ಟು ಮಂದಿ ಮಾಸ್ಕ್ ಧರಿಸುತ್ತಿಲ್ಲ. ಗುಂಪು ಗುಂಪಾಗಿ ವಾಹನಗಳನ್ನು ಮಾಡಿಕೊಂಡು ಹೋಗಿಬರುವವರು ಯಾವುದೇ ನಿಯಮಗಳನ್ನು ಪಾಲಿಸದೆ ಇರುವುದು ಆತಂಕಕ್ಕೆ ಕಾರಣವಾಗಿದೆ.
ದೇವರಾಯನದುರ್ಗವಂತೂ ಲಾಕ್‍ಡೌನ್ ನಂತರದ ದಿನಗಳಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ತುಮಕೂರು ಮಾತ್ರವಲ್ಲದೆ, ಇತರೆ ಜಿಲ್ಲೆಗಳಿಂದಲೂ ಈ ಬೆಟ್ಟಕ್ಕೆ ಬರತೊಡಗಿದ್ದಾರೆ. ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಈ ಬೆಟ್ಟ ಹೆಚ್ಚು ಜನಸಂದಣಿಯಿಂದ ತುಂಬಿರುತ್ತದೆ. ಬೆಂಗಳೂರು ಮಾರ್ಗ ಮತ್ತು ತುಮಕೂರು ಮಾರ್ಗದ ರಸ್ತೆಗಳಲ್ಲಿ ವಾಹನಗಳು ಭರ್ಜರಿಯಾಗಿ ಓಡಾಡುತ್ತವೆ. ಬೆಟ್ಟಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದರೂ ಅವರ್ಯಾರೂ ನಿಯಮ ನಿಬಂಧನೆಗಳ ಕಡೆಗೆ ಗಮನ ಹರಿಸುತ್ತಿಲ್ಲ. ಬಹಳಷ್ಟು ಮಂದಿ ಮಾಸ್ಕ್ ಇಲ್ಲದೆಯೇ ಬಂದು ಹೋಗುತ್ತಿದ್ದಾರೆ. ಇವರಲ್ಲಿ ಅದೆಷ್ಟು ಮಂದಿಗೆ ಸೋಂಕು ಇದೆಯೋ? ಎಷ್ಟು ಮಂದಿಗೆ ಅಂಟಿಸಿ ಬಿಡುವರೋ ಎಂಬ ಭಯವಂತೂ ಇದ್ದೇ ಇದೆ.
ಜನತೆ ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬರುವುದನ್ನು ಗಮನಿಸಿಯೇ ರಾಜ್ಯದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಮತ್ತೆ ನಿರ್ಬಂಧಗೊಳಿಸಲಾಗಿದೆ. ಕೆಲವು ಪ್ರಮುಖ ದೇವಾಲಯಗಳಿಗೂ ಸುಲಭ ಪ್ರವೇಶವಿಲ್ಲ. ಇದೇ ಪ್ರಥಮ ಬಾರಿಗೆ ಹಾಸನಾಂಬೆ ದೇವಿಯ ದರ್ಶನವನ್ನು ಸಾರ್ವಜನಿಕರಿಗೆ ಈ ಹಿಂದಿನಂತೆ ಮುಕ್ತಗೊಳಿಸಲು ಸಾಧ್ಯವಾಗಲಿಲ್ಲ. ಅವಧಿಗೆ ಮುನ್ನವೆ ದೇವಾಲಯದ ಬಾಗಿಲು ಬಂದ್ ಮಾಡಲಾಯಿತು. ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸುವುದೇ ಇದರ ಮುಖ್ಯ ಉದ್ದೇಶ.
ವಯಸ್ಸಾದವರು, ಮಕ್ಕಳು ಹೆಚ್ಚು ಪ್ರಯಾಣಿಸಬಾರದು, ಕಿಡ್ನಿ ಸಮಸ್ಯೆ, ಮಧುಮೇಹ ಮತ್ತಿತರ ಕಾಯಿಲೆಗಳು ಇರುವವರು ಹೆಚ್ಚು ಹೊರಗೆ ಓಡಾಡಬಾರದು ಎಂದೆಲ್ಲಾ ನಿರ್ಬಂಧಗಳಿವೆ. ಆದರೆ ಎಷ್ಟು ಜನ ಇದನ್ನು ಪಾಲನೆ ಮಾಡುತ್ತಿದ್ದಾರೆ? ಎಲ್ಲವನ್ನು ಸರ್ಕಾರವೇ ಮಾಡಬೇಕೆ? ಆರಂಭದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರು. ಕ್ರಮೇಣ ಅವರೂ ಕೈಚೆಲ್ಲಿದರು. ಕಾನೂನು ಸುವ್ಯವಸ್ಥೆಯ ಕಡೆಗೆ ಗಮನ ಹರಿಸಬೇಕಿರುವುದರಿಂದ ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ಕೊಡಲಾದೀತೆ? ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಓಡಾಡಿದರೆ ದಂಡ ಹಾಕುವ ಅವಕಾಶಗಳಿವೆ. ಇದನ್ನು ಸಂಬಂಧಪಟ್ಟ ಇಲಾಖೆಯವರು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ದಂಡದ ಭಯದಿಂದಲಾದರೂ ಮಾಸ್ಕ್ ಧರಿಸುವುದನ್ನು ಪಾಲಿಸುತ್ತಾರೆ.
ದೇವಾಲಯಗಳಲ್ಲಿ: ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ದೇವಾಲಯಗಳೆಲ್ಲಾ ಬಂದ್ ಆಗಿಬಿಟ್ಟವು. ಕ್ರಮೇಣ ದೇವಾಲಯಗಳು ಆರಂಭವಾದರೂ ಸಹ ಭಕ್ತರ ಸಂಖ್ಯೆ ಕ್ಷೀಣಿಸಿತ್ತು. ದಾರ್ಮಿಕ ಕಾರ್ಯಗಳು ಹೆಚ್ಚಿದಂತೆಲ್ಲಾ ದೇವಾಲಯಗಳಿಗೆ ಹೋಗಿಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇವರ ದರ್ಶನ ಮಾಡುವವರು ಮಾಸ್ಕ್ ಧರಿಸಬೇಕು, ಅಂತರ ಕಾಪಾಡಬೇಕು ಎಂಬ ನಿಯಮಗಳಿವೆ. ಆದರೆ ಎಲ್ಲಿಯೂ ಈ ನಿರ್ಬಂಧಗಳ ಪಾಲನೆ ಆಗುತ್ತಿಲ್ಲ.
ಕೊರೊನಾ ಸಂಪೂರ್ಣ ನಿವಾರಣೆಯಾಗುವವರೆಗೆ ಸಾಮಾಜಿಕ ಜಾಗೃತಿ ಎಲ್ಲರಲ್ಲಿಯೂ ಇರಬೇಕು. ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸ್ವಚ್ಛತೆ ಕಡೆಗೆ ಗಮನ ಹರಿಸುವುದು ಮುಖ್ಯವಾಗಬೇಕು. ಮಾಸ್ಕ್ ಕಡ್ಡಾಯಗೊಳಿಸಿದ ಪರಿಣಾಮವಾಗಿಯೇ ಎಷ್ಟೋ ಸೋಂಕು ಪ್ರಕರಣ ಕಡಿಮೆಯಾಗಲು ಸಾಧ್ಯವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಮುಂದಿನ ತಿಂಗಳು ಅಥವಾ ಮಾರ್ಚ್ ವೇಳೆಗೆ ಸೋಂಕಿನ ಎರಡನೇ ಅಲೆ ಏಳಲೂಬಹುದು ಎಂಬ ಎಚ್ಚರಿಕೆಯ ಕರೆಗಂಟೆ ನಮ್ಮ ಮುಂದೆ ಇರುವ ಕಾರಣ ಪ್ರತಿಯೊಬ್ಬರೂ ಕೊರೊನಾ ವಿಷಯದಲ್ಲಿ ಮುಂಜಾಗ್ರತೆ ವಹಿಸುವ ಅಗತ್ಯವಿದೆ.
ನಂದಿ ಬೆಟ್ಟ ಸೇರಿದಂತೆ ಇತರೆ ಕಡೆಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ನಿನ್ನೆ ನಂದಿಬೆಟ್ಟದಿಂದ ವಾಪಸ್ ಬರುವಾಗ ಅತಿವೇಗವಾಗಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಮರಣ ಹೊಂದಿದ್ದಾರೆ. ಹೀಗೆ ದಿನೆ ದಿನೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕೊರೊನಾ ಸಂಕಷ್ಟದಲ್ಲಿ ಆಸ್ಪತ್ರೆಗಳ ಖರ್ಚು, ಕಾಯಿಲೆ ನಿರ್ವಹಣೆ ಇತ್ಯಾದಿಗಳೆಲ್ಲವೂ ದುಬಾರಿಯಾಗುತ್ತಿದ್ದು, ಎಚ್ಚರಿಕೆ ವಹಿಸುವ ಅಗತ್ಯವಿದೆ.
ಜನರ ಮನೋಭಾವವನ್ನೇ ಬಂಡವಾಳ ಮಾಡಿಕೊಂಡಂತಿರುವ ಕೆಲವು ಜ್ಯೋತಿಷಿಗಳು ಸಲಹೆಯ ರೂಪದಲ್ಲಿ ಭಯವನ್ನು ಹುಟ್ಟಿಸುತ್ತಾರೆ. ವಿವಿಧ ಧಾರ್ಮಿಕ ಕೇಂದ್ರಗಳ ಭೇಟಿಗೆ ಸೂಚಿಸುತ್ತಾರೆ. ಜ್ಯೋತಿಷಿಗಳು ಹೇಳುವುದನ್ನು ಅಕ್ಷರಶಃ ಪಾಲಿಸುವ ಜನ ವಿವಿಧ ಧಾರ್ಮಿಕ ಕೇಂದ್ರಗಳಿಗೆ, ದೇವಾಲಯಗಳಿಗೆ, ಪುಣ್ಯಕ್ಷೇತ್ರಗಳಿಗೆ ಹೋಗಿಬರಲು ಆರಂಭಿಸಿರುವುದರಿಂದ ಸಹಜವಾಗಿ ಮತ್ತಷ್ಟು ದಟ್ಟಣೆ ಹೆಚ್ಚತೊಡಗಿದೆ. ಕೊರೊನಾ ಸಮಯದಲ್ಲಿ ಮನೆಯೊಳಗೆ ಇದ್ದವರು ಇತ್ತೀಚೆಗಷ್ಟೇ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿಬರಲಾರಂಭಿಸಿರುವುದರಿಂದ ದಿನೆ ದಿನೆ ಜನರ ದಟ್ಟಣೆ ಹೆಚ್ಚುತ್ತಿದೆ. ಇಂತಹ ಕಡೆಗಳಲ್ಲಿ ಅಂತರ ಕಾಪಾಡಿಕೊಳ್ಳುವ, ಮಾಸ್ಕ್ ಧರಿಸುವ ಲಕ್ಷಣಗಳೇ ಕಂಡುಬರುತ್ತಿಲ್ಲ.
ಕೊರೊನಾ ಎರಡನೇ ಅಲೆ ಆರಂಭವಾಗುವ ಆತಂಕದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸೋಂಕಿನಿಂದ ಗುಣಮುಖರಾಗಿದ್ದ ಹಲವರಿಗೆ ಮತ್ತೆ ಕೊರೊನಾ ವೈರಸ್ ಒಕ್ಕರಿಸಿರುವುದು ವರದಿಯಾಗಿದೆ. ಬೆಂಗಳೂರಿನ 7 ಆಸ್ಪತ್ರೆಗಳಲ್ಲಿ 35 ಮಂದಿ ಕೊರೊನಾ ಮರು ಸೋಂಕಿತರಾಗಿರುವುದಾಗಿ ಶುಕ್ರವಾರದ ವರದಿ ತಿಳಿಸಿದೆ. ಎರಡನೇ ಬಾರಿ ಸೋಂಕು ತಗುಲಿದವರಲ್ಲಿ ಹೊಸ ಲಕ್ಷಣಗಳು ಪತ್ತೆಯಾಗಿವೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಸೋಂಕು ಮತ್ತೆ ಮರುಕಳಿಸಿದರೂ ಅಚ್ಚರಿಯಿಲ್ಲ. ಜವಾಬ್ದಾರಿಯಿಂದ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದೊಂದೆ ನಮ್ಮ ಮುಂದೆ ಇರುವ ಏಕೈಕ ಮಾರ್ಗ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ