ಮುಸ್ಲಿ ಬಾಂಧವರಿಂದ ಕೊರೋನಾ ಸೋಂಕಿತರ ಅಂತ್ಯಸಂಸ್ಕಾರ

 ತುರುವೇಕೆರೆ : 

ದಂಡಿನಶಿವರದಲ್ಲಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವಸಂಸ್ಕಾರ ನಡೆಸುತ್ತಿರುವ ಮುಸ್ಲಿಂ ಭಾಂದವರು.

       ತಾಲ್ಲೂಕಿನ ಕೆಲ ಮುಸ್ಲಿಂ ಭಾಂದವರು ತಮ್ಮ ರಂಜಾನ್ ಹಬ್ಬ ಆಚರಣೆ ಸಂಧರ್ಭದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕೊರೋನಾದಿಂದ ಮೃತಪಟ್ಟ ಯಾವುದೇ ಜನಾಂಗದ ವ್ಯಕ್ತಿಯನ್ನು ಅವರವರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

      ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಪ್ರಕರಣಗಳು ದಿನೇ ದಿನೇ ಮೇರೆ ಮೀರುತ್ತಿದ್ದು ಜನರಲ್ಲಿ ಆತಂಕದ ಛಾಯೆ ಆವರಿಸತೊಡಗಿದೆ. ಅತಿಯಾದ ಪ್ರಕರಣಗಳ ಕಾರಣಕ್ಕೆ ಆಸ್ಪತ್ರೆ, ಆರೋಗ್ಯ ವ್ಯವಸ್ಥೆ ಸರ್ಕಾರದ ಮೇಲೆ ಹೆಚ್ಚು ಒತ್ತಡ ಸೃಷ್ಠಿಯಾಗುತ್ತಿದೆ. ಈಗಾಗಲೇ ಲಕ್ಷಾಂತರ ಜನರನ್ನು ಕೊರೋನಾ ಬಲಿ ತೆಗೆದುಕೊಂಡಿದೆ. ಪ್ರತಿದಿನ ರಾಜ್ಯದಲ್ಲಿ ನೂರಾರು ಜನ ಕೊರೋನಾದಿಂದ ಸಾಯುತ್ತಿದ್ದಾರೆ. ‘ಪ್ರತಿ ದಿನ ಸಾಯುವವರಿಗೆ ಅಳುವವರಾರು’ ಎಂಬಂತೆ ಪ್ರತಿದಿನ ಕೊರೋನಾದಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದ್ದು ಅವರ ಅಂತ್ಯಕ್ರಿಯೆ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿದಿನ ಚಿತಾಗಾರಗಳ ಮುಂದೆ ಶವಸಂಸ್ಕಾರಕ್ಕೆಂದು ಸತ್ತ ವ್ಯಕ್ತಿಯನ್ನು ಹೊತ್ತು ತಂದ ಆಂಬುಲೆನ್ಸ್‍ಗಳು ಸಾಲು ಸಾಲು ನಿಲ್ಲುತ್ತಿವೆ. ಹೆಣ ಸುಡಲು ಕಟ್ಟಿಗೆಗಳ ಅಭಾವ ಸೃಷ್ಠಿಯಾಗಿದೆ.

      ಕೊರೋನಾದಿಂದ ಮೃತಪಟ್ಟ ಕೆಲ ಕುಟುಂಬದವರು ಆಸ್ಪತ್ರೆಗೆ ಹಣ ಕಟ್ಟಲಾಗದೆ ಹಾಗೆಯೇ ಬಿಟ್ಟು ಹೋದ ಉದಾಹರಣೆ ಉಂಟು. ಅಷ್ಟೇ ಏಕೆ ಸತ್ತ ವ್ಯಕ್ತಿ ಕುಟುಂಬಸ್ಥರೆ ಅವರ ಹತ್ತಿರಕ್ಕೆ ಸುಳಿಯಲು ಹೆದರುತ್ತಾರೆ. ಇಂತಹ ಸಂಧರ್ಭದಲ್ಲಿ ಇನ್ನು ಅಂತ್ಯ ಸಂಸ್ಕಾರ ಹೇಗೆ ತಾನೆ ಮಾಡಿಯಾರು.

ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರ ನೆರವೇರಿಸುವ ಮುಸ್ಲಿಂ ತಂಡವನ್ನು ಶಾಸಕ ಮಸಾಲ ಜಯರಾಮ್ ಅಭಿನಂದಿಸುತ್ತಿರುವುದು.

      ಕೊರೋನಾದಿಂದ ಸತ್ತ ವ್ಯಕ್ತಿಯ ಕುಟುಂಬದವರೇ ಅಂತ್ಯ ಸಂಸ್ಕಾರ ಮಾಡಲು ಹಿಂಜರಿಯುವ ಇಂತಹ ಸಂಧರ್ಭದಲ್ಲಿ ತಾಲ್ಲೂಕಿನ ಮುಸ್ಲಿಂ ಭಾಂದವರಾದ ಆಶಿಫ್ ಮತ್ತು ತಂಡದವರು ಜಾತಿ, ಧರ್ಮ, ಭೇಧವಿಲ್ಲದೆ ಮಾನವೀಯತೆ ದೃಷ್ಠಿಯಿಂದ ತಾಲ್ಲೂಕಿನಲ್ಲಿ ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಆ ಕುಟುಂಬದ ಧಾರ್ಮಿಕ ಆಚರಣೆಯೊಂದಿಗೆ ಯಥಾವತ್ತಾಗಿ ಮಾಡುತ್ತಿರುವುದು ನಿಜವಾಗಿಯೂ ಮಾನವೀಯತೆಗೆ ಶೋಭೆ ತರುತ್ತಿದೆ ಎಂದರೆ ತಪ್ಪಾಗಲಾರದು. ತಾಲ್ಲೂಕು ರೈತಸಂಘದ ಗೌರವಾಧ್ಯಕ್ಷ ಅಸ್ಲಾಂಪಾಷ ಅವರ ಸಹೋದರ ಆರೀಫ್, ನಯಾಜ್, ಫೈರೋಜ್, ನಸ್ರುಲ್ಲಾ, ಅಫ್ಜಲ್, ಶಿಫಯಾತ್, ಸಮೀಉಲ್ಲಾ ಸೇರಿದಂತೆ 15 ಜನರ ಮುಸ್ಲಿಂ ತಂಡ ರಂಜಾನ್ ಆಚರಣೆ ಸಂಧರ್ಭದಲ್ಲಿ ಸೇವೆ ಮಾಡುವ ನಿಟ್ಟಿನಲ್ಲಿ ತಾಲ್ಲೂಕಿನ ಯಾವುದೇ ಜನಾಂಗದ ವ್ಯಕ್ತಿಯಾಗಿರಲಿ. ಕೊರೋನಾದಿಂದ ಮೃತಪಟ್ಟಲ್ಲಿ ಈ ತಂಡ ಸ್ಥಳಕ್ಕೆ ಹಾಜರಾಗುತ್ತಾರೆ. ಪಿಪಿಇ ಕಿಟ್ ಧರಿಸಿ ಯಾವುದೇ ಜಾತಿ ಧರ್ಮದವರಾದರೂ ಸರಿಯೇ ಅವರವರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಕುಟುಂಬಸ್ಥರ ತಲೆಭಾರ ಕಡಿಮೆ ಮಾಡುತ್ತಾರೆ. ಈಗಾಗಲೇ ತಾಲ್ಲೂಕಿನ ದಂಡಿನಶಿವರ, ಗಾಂಧಿಗ್ರಾಮ, ಶ್ರೀರಾಂಪುರ, ಕಾಳಪ್ಪನಪಾಳ್ಯ, ಬಾಣಸಂದ್ರ, ಮಾಯಸಂದ್ರ, ಸಿ.ಎಸ್.ಪುರ ಮುಂತಾದೆಡೆ ಶವಸಂಸ್ಕಾರ ನೆರವೇರಿಸಿದ್ದು ಜನಮನ್ನಣೆಗೆ ಪಾತ್ರರಾಗಿದ್ದಾರೆ.

      ಕೊರೋನಾ ಭಯದಿಂದ ಕೆಂಗಟ್ಟಿರುವ ಇಂತಹ ಸಂಧರ್ಭದಲ್ಲಿ ಯಾವುದೇ ಪ್ರತಿಫಲ ಬಯಸದೆ ಕೊರೋನದಿಂದ ಸತ್ತ ವ್ಯಕ್ತಿಗಳ ಶವಸಂಸ್ಕಾರ ನೆರವೇರಿಸುತ್ತಿರುವ ಮುಸ್ಲಿಂ ತಂಡವನ್ನು ತಾಲ್ಲೂಕು ಆಡಳಿತ ಮಾನವೀಯ ದೃಷ್ಠಿಯಿಂದ ಗುರ್ತಿಸಿ ಗೌರವ ಸೂಚಿಸುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯ ಮಾಡುವಂತೆ ಇವರನ್ನು ಪ್ರೇರೆಪಿಸಬೇಕಾಗಿದೆ.

“ಹಿಂದು ಮುಸ್ಲಿಂ ಒಂದೆ ಎಂಬ ಭಾವನೆಯಿಟ್ಟು ನಾವೆಲ್ಲಾ ಸಹಬಾಳ್ವೆ ನಡೆಸುತ್ತಿದ್ದು ರಂಜಾನ್ ಹಬ್ಬ ಆಚರಣೆ ಸಂಧರ್ಭದಲ್ಲಿ ಅಲ್ಲಾನ ಪ್ರೇರಣೆಯಂತೆ ಇಂತಹ ಪುಣ್ಯ ಕಾರ್ಯಗಳನ್ನು ಮಾಡುತ್ತಿರುವುದಲ್ಲದೆ ಯಾವುದೇ ಫಲಾಫೇಕ್ಷೆ ಬಯಸದೆ ಸ್ವಂತ ಖರ್ಚಿನಿಂದ ನಮ್ಮಗಳ ಕೆಲಸ ಬದಿಗೊತ್ತಿ ಇಂತಹ ಕೆಲಸ ಮಾಡುತ್ತಿರುವುದಲ್ಲದೆ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕಿನ ಜನತೆ ನಮ್ಮೊಂದಿಗೆ ಕೈಜೋಡಿಸಿ ಪ್ರೋತ್ಸಾಹ ನೀಡುತ್ತಿರುವುದು ಇಂತಹ ಕೆಲಸ ಮಾಡಲು ನಮಗೆ ಪ್ರೇರೆಪಣೆಯಾಗಿದೆ.

– ಆರೀಫ್ ಮುಸ್ಲಿಂ ಮುಖಂಡ

“ನಮ್ಮ ತಾಲ್ಲೂಕಿನಲ್ಲಿ ಮುಸ್ಲಿಂ ಭಾಂದವರು ಜಾತಿ, ಧರ್ಮ, ಭೇದವೆಣಿಸದೆ ಕೊರೋನಾದಿಂದ ಸತ್ತ ವ್ಯಕ್ತಿಗಳ ಶವಸಂಸ್ಕಾರದಂತಹ ಪುಣ್ಯ ಕಾರ್ಯವನ್ನು ಯಾವುದೇ ಫಲಾಫೇಕ್ಷೆ ಬಯಸದೆ ಮಾಡುತ್ತಿರುವುದಕ್ಕೆ ಅವರ ತಂಡವನ್ನು ಅಭಿನಂದಿಸುತ್ತೇನೆ. ಇವರು ಮಾಡುವ ಇಂತಹ ಪುಣ್ಯ ಕಾರ್ಯಕ್ಕೆ ನಾನು ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ”.

– ಮಸಾಲ ಜಯರಾಮ್, ಶಾಸಕ
 

Recent Articles

spot_img

Related Stories

Share via
Copy link