ತುಮಕೂರು : ಹಳ್ಳಿ ಹಳ್ಳಿಗಳಲ್ಲೂ ತಾಂಡವವಾಡುತ್ತಿದೆ ಕೊರೊನಾ

ತುಮಕೂರು:

      ಮೇ ತಿಂಗಳಿಂದೀಚೆಗೆ ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ತಾಂಡವವಾಡುತ್ತಿದೆ. ಯಾವುದೋ ಒಂದು ಮನೆಯ ಒಬ್ಬರಿಗೆ ಪಾಸಿಟಿವ್ ಬಂದರೆ ಹೌಹಾರುತ್ತಿದ್ದ ಹಳ್ಳಿಗಳಲ್ಲಿ ಈಗ ಕೊರೊನಾ ಎಂಬುದು ಹಾಸುಹೊಕ್ಕಾಗಿದೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತಿರುವ ದೈನಂದಿನ ವರದಿಯಲ್ಲಿ ಪಾಸಿಟೀವ್ ಪ್ರಕರಣಗಳು ಇಳಿಕೆಯಾಗುತ್ತಿರುವುದು ಹೇಗೆ..?

      ನಗರ ಪ್ರದೇಶಗಳಲ್ಲಿ ಮಾತ್ರವೇ ಹೆಚ್ಚಿದ್ದ ಸೋಂಕು ಇದೀಗ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಮನೆ ಮಂದಿಯೆಲ್ಲ ಸೋಂಕಿಗೆ ತುತ್ತಾಗುತ್ತಿರುವ ಉದಾಹರಣೆಗಳಿವೆ. ಮನೆ ಐಸೋಲೇಷನ್‍ನಲ್ಲಿ ಕೆಲವರು ಇದ್ದರೆ, ಇನ್ನು ಕೆಲವರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಇದ್ದಾರೆ. ಕೋವಿಡ್ ಆಸ್ಪತ್ರೆಗಳ ಎಲ್ಲ ಹಾಸಿಗೆಗಳು ಭರ್ತಿಯಾಗಿವೆ. ಕಡಿಮೆಯಾಗುವ ಯಾವ ಸೂಚನೆಗಳೂ ಇಲ್ಲ. ತಾಲ್ಲೂಕುಗಳಿಂದ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ರಾತ್ರೋರಾತ್ರಿ ರೋಗಿಗಳನ್ನು ಕರೆ ತರುವ ಉದಾಹರಣೆಗಳು ಪ್ರತಿನಿತ್ಯ ವರದಿಯಾಗುತ್ತಿವೆ.

ಅಂದರೆ ತಾಲ್ಲೂಕು ಮಟ್ಟದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಆಕ್ಸಿಜನ್ ಬೆಡ್ ವ್ಯವಸ್ಥೆಗಳಿಲ್ಲ, ವೆಂಟಿಲೇಟರ್‍ಗಳಿಲ್ಲ, ಮೂಲಭೂತ ಸೌಕರ್ಯಗಳ ಕೊರತೆ, ಪರಿಣಿತರ ಕೊರತೆ ಇತ್ಯಾದಿಗಳು ಸಾಲು ಸಾಲಾಗಿ ಸಮಸ್ಯೆಗಳ ಸರಮಾಲೆಯೆ ಮುಂದೆ ನಿಲ್ಲುತ್ತವೆ. ಹೀಗಾಗಿ ರೋಗಲಕ್ಷಣ ಮೀರಿದವರನ್ನು ಉಳಿಸಿಕೊಳ್ಳಲಿಕ್ಕಾಗಿ ಜಿಲ್ಲಾಸ್ಪತ್ರೆಗೆ ಅಥವಾ ತುಮಕೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುವವರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಲೆ ಇದೆ. ಪರಿಸ್ಥಿತಿ ಹೀಗೆ ಇದ್ದರೂ ಪ್ರಕರಣ ದಾಖಲೆಗಳಲ್ಲಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದರೆ ಎಲ್ಲೊ ಒಂದು ಕಡೆ ಪರೀಕ್ಷಾ ಸಂಖ್ಯೆಯನ್ನು ಕಡಿಮೆಗೊಳಿಸಿರುವುದು ಅನುಮಾನಕ್ಕೆ ಆಸ್ಪದವಾಗಿದೆ.

ಕರ್ನಾಟಕದಲ್ಲಿ ಪಾಸಿಟೀವ್ ಪ್ರಕರಣಗಳಲ್ಲಿ ತುಮಕೂರು ಅಗ್ರಗಣ್ಯ ಸ್ಥಾನದಲ್ಲಿದೆ. ಆರಂಭದಲ್ಲಿಯೇ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ. ಆಗ ಮೌನವಾಗಿದ್ದು, ಈಗ ಕೈ ಚೆಲ್ಲುವಂತಹ ಪರಿಸ್ಥಿತಿಗೆ ತಂದುಕೊಂಡಿರುವ ಅಧಿಕಾರಿಗಳ ಹೊಣೆಗೇಡಿತನಕ್ಕೆ ಏನನ್ನಬೇಕು? ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಜನಸಾಮಾನ್ಯರು ಇಲ್ಲಿನ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಕಂಡು ಕಿಡಿ ಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

      ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 2000 ಆಸುಪಾಸಿನಲ್ಲಿ ಸೋಂಕು ಪ್ರಕರಣಗಳು ಕಂಡುಬರುತ್ತಿವೆ. ಕೆಲವೊಮ್ಮೆ 2500 ಗಡಿ ದಾಟಿವೆ. ಮೇ ತಿಂಗಳಿನಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸೋಂಕು ಹಳ್ಳಿ ಹಳ್ಳಿಯ ಮನೆಗಳಿಗೆ ವ್ಯಾಪಿಸಿದ್ದು, ಇದರ ನಿಯಂತ್ರಣಕ್ಕೆ ಆರಂಭದಲ್ಲಿಯೇ ಕ್ರಮ ವಹಿಸಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತಿರಲಿಲ್ಲ. ತಾಲ್ಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳನ್ನು ಚುರುಕುಗೊಳಿಸಿ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಕೊಂಚ ಮಟ್ಟಿಗಾದರೂ ನಿಯಂತ್ರಣಕ್ಕೆ ತರಬಹುದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap