ಕೊರೋನಾ ಸಾವು – ನೋವಿನ ನಡುವೆ ಬದುಕು

ಮಧುಗಿರಿ:


 ಕೃಷಿಯಲ್ಲಿ ತೊಡಗಿದ ಯುವಜನತೆ: ಕೆರೆಕಟ್ಟೆಗಳಿಗೆ ನೀರು   

ಕಳೆದ ಎರಡು ವರ್ಷ ತಾಲ್ಲೂಕಿನ ಜನತೆ ಕೊರೋನಾವು ಅನ್ನದ ಬೆಲೆಯನ್ನು ಉಸಿರಾಡುವ ಗಾಳಿ ಶುದ್ಧವಾಗಿರಬೇಕೆಂದು ಮತ್ತು ಕಂಡ ಕಂಡವರ ಸಂಪರ್ಕದಿಂದ ದೂರ ಇರಬೇಕೆಂಬುದನ್ನು ತಿಳಿಸಿಕೊಟ್ಟಿದೆ.

ಮೊದ ಮೊದಲು ಕೊರೋನಾ ಅಲ್ಲಿಗೆ ಬಂತು ಇಲ್ಲಿಗೆ ಬಂತು ಎಂಬ ಮಾತುಗಳನ್ನಾಡುತ್ತಿದ್ದ ಜನ ನಂತರ ದಿನಗಳಲ್ಲಿ ನಮ್ಮ ಗ್ರಾಮಕ್ಕೆ ಬಂದು ವಕ್ಕರಿಸಿಕೊಂಡೆ ಬಿಡ್ತೂ ಎನ್ನುವಾಗ ತಮ್ಮದೆ ಕುಟುಂಬದ ಸದಸ್ಯರು ಕೊರೋನಾಕ್ಕೆ ತುತ್ತಾಗಿ ಮೃತಪಟ್ಟ ನೋವನ್ನು ಅನುಭವಿಸಿದರು.

ಕಣ್ಣಿಗೆ ಕಾಣದ ಸಾಂಕ್ರಾಮಿಕ ರೋಗದ ವೈರಸ್ ಅದೆಷ್ಟೊ ಜನರನ್ನು ಬಲಿ ತೆಗೆದುಕೊಂಡು ಅನೇಕ ಜನರನ್ನು ತಬ್ಬಲಿಗಳನ್ನಾಗಿ ಮಾಡಿದ ಕ್ರೂರ ವ್ಯಂಗ್ಯ ಕಣ್ಣ ಮುಂದೆ ಇದೆ.

ಮೊದ ಮೊದಲು ನಮ್ಮ ತಾಲ್ಲೂಕಿನ ಕೊರೊನಾ ಸೋಂಕಿತರ ಪಟ್ಟಿ ಎರಡಂಕಿ ದಾಟಿಲ್ಲ ಎನ್ನುತ್ತಿದ್ದು, ಮಾರನೆ ದಿನವೇ ಮೂರಂಕಿ ದಾಟಿ, ಜನರನ್ನು ದಿಗ್ಭ್ರಾಂತರನ್ನಾಗಿ ಮಾಡಿತ್ತು.

ಮನೆಯ ಪಕ್ಕದಲ್ಲಿಯೇ ಸೋಂಕಿತರಿದ್ದಾರೆಂದು ಆ ಮನೆಗಳ ಸುತ್ತ ತಗಡಿನ ಶೀಟ್ ಕಟ್ಟಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಿದಾಗ ಸೋಂಕಿತರ ಮನೆಯವರಲ್ಲದೆ ಅಕ್ಕಪಕ್ಕದವರು ತಮ್ಮ ಮನೆಗಳನ್ನು ಬಿಟ್ಟು ಹೊರ ಬರಲಿಲ್ಲ. ನೆರೆ ಹೊರೆಯವರು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದವರು ಶವವಾಗಿ ಬಂದಾಗ ಗ್ರಾಮಗಳ ಜನರು ಶೋಕ ವ್ಯಕ್ತಪಡಿಸಿ, ಆತಂಕಗೊಂಡರು.

ಇನ್ನೂ ಆಗತಾನೇ ಹೆಚ್ಚಾದ ಕೊರೊನಾದಿಂದ ಪಿ.ಪಿ. ಕಿಟ್ ಧರಿಸಿದವರನ್ನು ಯವಧೂತರೇ ನಮ್ಮ ಬಳಿ ಬಂದರೆಂದೂ ಹಾಗೂ ಪ್ರತಿದಿನ ಗೊಣಗುಡುತ್ತಿದ್ದ ಆ್ಯಂಬ್ಯುಲೆನ್ಸ್ ವಾಹನದ ಶಬ್ದ ಕೇಳಿ ಗಾಬರಿ ಬಿದ್ದು ಆತಂಕಗೊಂಡವರು ಕೆಲವರಾದರೆ, ಆ ಸಿಬ್ಬಂದಿ ಬಂದಿದ್ದು ನಮ್ಮ ಆರೋಗ್ಯದ ದೃಷ್ಟಿಯಿಂದ ಎಂದು ಅರಿತುಕೊಂಡವರು ಕೆಲವರು.

ಇನ್ನೂ ಲಾಕ್‍ಡೌನ್, ಸೀಲ್ ಡೌನ್ ಪದಗಳ ಬಳಕೆ ಅಷ್ಟಾಗಿ ಕೇಳದ ಜನರಿಗೆ ದಿನಗಳು ಉರುಳುತ್ತಾ ಸಾಮಾನ್ಯವಾಗಿ ಕೊರೊನಾ ಹೆಮ್ಮಾರಿ ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಕ್ಕೆ ಹೇರಳವಾಗಿ ಪಸರಿಸಿದಾಗ, ಲಾಕ್‍ಡೌನ್ ಅನಿವಾರ್ಯವಾಗಿ ಅದೆಷ್ಟೊ ಬಡವರು ಕೈಗೆ ದುಡಿಮೆ ಇಲ್ಲದೆ ಒಂದೊತ್ತಿನ ಗಂಜಿಗೂ ಇಲ್ಲದೆ ಹೈರಾಣಾಗಿ ಹೋದರು.

ಸರಕಾರ ಜನರ ಆರೋಗ್ಯಕ್ಕಾಗಿ ಕಾಲ ಕಾಲಕ್ಕೆ ಕೊರೊನಾ ನಿಯಂತ್ರಣದ ಮಾರ್ಗಸೂಚಿಗಳನ್ನು ಹೆಚ್ಚಿಸುತ್ತಾ ಬರುತ್ತಿತ್ತು. ಆದರೆ ಈ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದವರು ಆಸ್ಪತ್ರೆ ಸೇರುತ್ತಿದ್ದರು. ಉಚಿತ ಚಿಕಿತ್ಸೆಗಾಗಿ ಎಂದು ಬಂದ ಆಸ್ಪತ್ರೆಯ ಸಿಬ್ಬಂದಿಗಳಿಗೂ ಕೊರೊನಾ ವಕ್ಕರಿಸಿ ಬಿಟ್ಟಿತ್ತು.

ಅದೆಷ್ಟೊ ಮಂದಿ ಶುದ್ದ ಗಾಳಿಗಾಗಿ ಆಸ್ಪತ್ರೆಗೆ ಹೋದರೆ, ಅಲ್ಲಿಯೂ ಬೆಡ್ ಖಾಲಿ ಇರಲಿಲ್ಲ. ಇದ್ದರೂ ಶುದ್ಧ ಗಾಳಿ ಲಭ್ಯವಿಲ್ಲದೆ ಮುಂದೆ ಹೋಗಿ ಎನ್ನುವಷ್ಟರಲ್ಲಿ ಕೆಲವರಿಗೆ ಆಸ್ಪತ್ರೆಯ ಬಾಗಿಲಲ್ಲಿ ವಾಹನಗಳಲ್ಲಿಯೇ ಪ್ರಾಣ ಪಕ್ಷಿ ಹಾರಿ ಹೋದವು ಎಂಬ ಮಾತುಗಳು ಸಹ ಕೇಳಿ ಬಂದವು.

ಕೊರೊನಾಗೂ ಮುನ್ನ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಆಪರೇಷನ್‍ಗಾಗಿ ಬಳಸುತ್ತಿದ್ದ ಮುಖಗವಸು, ಸ್ಯಾನಿಟೈಸರ್ ಕಂಡ ಜನತೆ ಇಂದೂ ಮುಖಗವಸಿನ ಜೊತೆಯಲ್ಲಿ ಪ್ರತಿದಿನ ಕೂಡ ಸ್ಯಾನಿಟೈಜರ್ ಬಳಸುವಂತಾಗಿದ್ದರಿಂದ ಎರಡು ರೂಪಾಯಿಗಿದ್ದ ಸಾಮಾನ್ಯ ಮಾಸ್ಕ್ ಇಪ್ಪತ್ತು ರೂ.ಗೆ, ಸ್ಯಾನಿಟೈಜರ್ ಇನ್ನೂರು ರೂ.ಗೆ ಕಾಳ ಸಂತೆ ಮಾರಾಟದಂತಾಯ್ತು.

ಲಾಕ್ ಡೌನ್ ಸಂದರ್ಭದಲ್ಲಿ ಕೆಲ ಮಾನವೀಯತೆ ಇರುವ ಜನ ನಿರ್ಗತಿಕರಿಗೆಂದು ಅನ್ನ ದಾಸೋಹ ಮಾಡಿದ ಸಂದÀರ್ಭದಲ್ಲಿ ಕೆಲ ಸಾಧಾರಣ ಮಾಧ್ಯಮ ವರ್ಗದ ಜನ, ಕೂಲಿ ಕಾರ್ಮಿಕರು ಸೇರಿದಂತೆ ಹಲವಾರು ಜನ ಅನ್ನಕ್ಕಾಗಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಪ್ರಾಣ ಕಾಪಾಡುವ ಅನ್ನದ ಬೆಲೆಯನ್ನು ತಿಳಿಸಿ ಕೊಟ್ಟಿತು.

ಲಾಕ್‍ಡೌನ್‍ನಿಂದಾಗಿ ಬಾರ್‍ಗಳು ಮುಚ್ಚಿದ್ದವು. ಪ್ರತಿದಿನ ಕುಡಿತದ ಚಟಕ್ಕೆ ಅಂಟಿಕೊಂಡಿದ್ದವರು, ಚಡಪಡಿಸಿದರು. ಲಾಕ್‍ಡೌನ್ ತೆರವಿನ ನಂತರ ಸರತಿ ಸಾಲಿನಲ್ಲಿ ನಿಂತು ಹೆಚ್ಚು ಹೆಚ್ಚು ಹಣ ತೆತ್ತು ಕೆಲವರು ಮದ್ಯವನ್ನು ಕ್ರೋಡೀಕರಿಸಿಕೊಂಡು ಹೆಚ್ಚು ಮೊತ್ತಕ್ಕೆ ಮಾರಿಕೊಂಡರು.

ಸಂಘ ಸಂಸ್ಥೆಗಳು ಯಾವುದೇ ಭೇದ ಭಾವವಿಲ್ಲದೆ ಮಾಸ್ಕ್, ಸ್ಯಾನಿಟೈಜರ್, ಪಿಪಿ ಕಿಟ್, ಆಮ್ಲಜನಕ ವೃದ್ಧಿಸುವಂತಹ ಯಂತ್ರಗಳು, ತುರ್ತುವಾಹನಗಳ ಜೊತೆಗೆ ಅವಶ್ಯಕ ವಸ್ತುಗಳನ್ನು ಒದಗಿಸಿಕೊಟ್ಟರು.

ಕೊರೊನಾ ಸಾಂಕ್ರಾಮಿಕ ರೋಗದಿಂದ ಅನನುಕೂಲ ಆಗಿದ್ದೇ ಹೆಚ್ಚು, ಜತೆಯಲ್ಲಿ ದೂರ ದೂರ ಇರುತ್ತಿದ್ದ ಕುಟುಂಬದ ಸದಸ್ಯರು ಮತ್ತೆ ಒಂದು ಕಡೆ ಸೇರುವಂತಹ ಸನ್ನಿವೇಶ ಒದಗಿಸಿಕೊಟ್ಟಿದ್ದು ಹಾಗೂ ಮಳೆರಾಯನ ಕೃಪಕಟಾಕ್ಷದಿಂದಾಗಿ ಇನ್ನೇನು ನಮಗೆ ಅಪ್ಪ ಹಾಕಿದ ಆಲದ ಮರವೆಂದೂ ಕೃಷಿಯಿಂದ ದೂರವಾಗಿದ್ದ ಕೆಲ ಗ್ರಾಮೀಣರು ಕೃಷಿ, ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ, ಜನರಿಗೆ ಸಣ್ಣ ಪ್ರಮಾಣದ ನೆಮ್ಮದಿಯ ದುಡಿಮೆಯ ಬೆಲೆ ಏನೆಂದೂ ತೋರಿಸಿ ಕೊಟ್ಟಿತು.

ಕೊರೊನಾ ಬಂದಿದೆ. ಮೊದಲ ಡೋಸ್ ಉಚಿತ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಆರೋಗ್ಯ ಇಲಾಖೆ ಜಿಲ್ಲಾಡಳಿತದಿಂದ ಬೊಬ್ಬೆ ಹೊಡೆಯುತ್ತಿದ್ದ ಅಧಿಕಾರಿಗಳಿಗೆ ನಂತರ ದಿನಗಳಲ್ಲಿ ಎಲ್ಲಿಲ್ಲಿದ ಬೇಡಿಕೆ ಬರುವುದರ ಜತೆಗೆ ಎರಡನಡ ಡೋಸ್‍ಗೆ 28, 45, 84 ದಿನಗಳ ಕಾಲ ಕಾಯುವಂತಹ ಪರಿಸ್ಥಿತಿ ಎದುರಾಯಿತು.

ಇನ್ನು ಅಸಡ್ಡೆ ಮನೋಭಾವ ತೋರಿದ್ದ ಕೆಲವರು ಉಚಿತ ವ್ಯಾಕ್ಸಿನ್‍ಗಾಗಿ ಹಣ ತೆತ್ತು ಚುಚ್ಚಿಕೊಳ್ಳುವಂತಹ ಅನಿವಾರ್ಯತೆ ಎದುರಾಯಿತು.

ಅಪರೂಪಕ್ಕೆ ಇಂತಹ ಸಂಕಷ್ಟ ಸಮಯದಲ್ಲಿ ಮಳೆರಾಯನ ಕೃಪಕಟಾಕ್ಷದಿಂದ ನಗರ ಸೇರಿದ ಯುವ ಜನತೆ ಕೃಷಿಯತ್ತ ಮುಖ ಮಾಡಿದರು. ತಮ್ಮ ಜಮೀನುಗಳ ಕೃಷಿಯಲ್ಲಿ ಭಾಗಿಯಾಗಿ, ಮತ್ತೆ ಪಟ್ಟಣಕ್ಕೆ ಹೋಗದೆ ಕೆಲವರು ಇಲ್ಲಿಯೇ ಉಳಿದುಕೊಂಡರು.

ಮಳೆರಾಯನ ಆಗಮನದಿಂದ ಗ್ರಾಮಗಳಲ್ಲಿ ಎನ್‍ಆರ್‍ಜಿಯ ಉದ್ಯೋಗ ಖಾತ್ರಿ ಕೈ ಹಿಡಿಯಿತು. ಮುಚ್ಚಿ ಹೋಗಿದ್ದ ಹಳ್ಳ-ಕೊಳ್ಳ ನೀರು ತುಂಬಿಕೊಂಡು ಮತ್ತೆ ಅಭಿವೃದ್ದಿ ಕಂಡವು.

ಬರೋಬ್ಬರಿ 30 ವರ್ಷಗಳ ನಂತರ ಕೆರೆಗಳು ತುಂಬಿ ಹರಿದು, ಬತ್ತಿ ಹೋಗಿದ್ದ ಅಂತರ್ಜಲ ವೃದ್ದಿಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಕೃಷಿಯ ಆಸೆಯು ಚಿಗರೊಡೆಯತೊಡಗಿದೆ.

ಜನರ ರಕ್ಷಣೆಗಾಗಿ ಹಗಳಿರುಲೆನ್ನದೆ ತಾಲ್ಲೂಕು ಆಡಳಿತ, ವೈದ್ಯಕೀಯ ಸಿಬ್ಬಂದಿ, ಪೆÇೀಲೀಸರು ಜೀವ ಭಯದ ಹಂಗು ತೊರೆದು, ಸಾರ್ವಜನಿಕರ ಹಿತರಕ್ಷಣೆ ಕಾಪಾಡುವಲ್ಲಿ ಯಶಸ್ವಿ ಸೇನಾನಿಗಳಾದರು.

ಆದರೆ ಈಗಲೂ ಕೊರೊನಾ ವೈರಸ್ ನಮ್ಮ ನಮ್ಮಲ್ಲಿಯೇ ಅಗೋಚರವಾಗಿ ಸುತ್ತಾಡುತ್ತಿದೆ. ಸಾರ್ವಜನಿಕರು ಮುನ್ನೆಚ್ಚರಿಕೆಯೆ ಉಪಾಯ, ಎಚ್ಚರಿಕೆ ತಪ್ಪಿದರೆ ಅಪಾಯ ಎಂಬುದನ್ನು ಅರಿತು ಕೊಳ್ಳಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap