ತುಮಕೂರು :
ಕರಾಳ ಕೊರೊನಾದ ಕಾರಣದಿಂದಾಗಿ 2020ನೇ ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಕಹಿ ಅನುಭವವೇ ಹೆಚ್ಚಾಗಿ ಕಂಡುಬಂದಿದೆ. ಕೊರೊನಾ ಲಾಕ್‍ಡೌನ್‍ನಲ್ಲಿ ಸ್ಥಗಿತಗೊಂಡ ಆರ್ಥಿಕ ಚಟುವಟಿಕೆ ವರ್ಷ ಮುಗಿದರೂ ಚೇತರಿಕೆ ಕಾಣಲು ಸಾಧ್ಯವಾಗಿಲ್ಲ. ಇದರ ನಡುವೆ ಜಿಲ್ಲೆಯಲ್ಲಿ ಮಳೆ-ಬೆಳೆ ತಕ್ಕಮಟ್ಟಿಗೆ ಸಮಾಧಾನಕರವಾಗಿ ಆಗಿದೆ. ಸೋಂಕಿನ ಭಯದಲ್ಲೂ ಶಿರಾ ಉಪ ಚುನಾವಣೆ, ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಾಗೂ ವರ್ಷದ ಕೊನೆಯಲ್ಲಿ ಬಂದ ಗ್ರಾಮ ಪಂಚಾಯ್ತಿ ಚುನಾವಣೆಗಳು ನಿರಾತಂಕವಾಗಿ ಮುಗಿದವು.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ 2020 ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದಾಗಿನಿಂದ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಆರ್ಥಿಕ ಚಟುವಟಿಕೆ ಅಸ್ತವ್ಯಸ್ತವಾದವು. ಅಗತ್ಯ ವಸ್ತುಗಳ ಮಾರಾಟ ಹಾಗೂ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆದವು. ಸಾರ್ವಜನಿಕ ಸಾರಿಗೆ, ಸರಕು ಸಾಗಾಣಿಕೆ ಸಂಚಾರ ಸ್ಥಗಿತಗೊಂಡಿತ್ತು. ಜನ ಸೇರುವಂತಹ ಸಂತೆ, ಜಾತ್ರೆ, ಮದುವೆ, ಸಭೆ, ಸಮಾರಂಭಗಳನ್ನು ನಿರ್ಬಂಧಿಸಲಾಯಿತು. ಲಾಕ್‍ಡೌನ್‍ನಲ್ಲಿ ಜನ ಸಂಚಾರ ಬಂದ್ ಆಗಿ, ಜನ ಮನೆಯಲ್ಲಿ ಇರಲಾಗದೆ, ಹೊರಗೆ ಬರಲಾಗದೆ ಪರಿತಪಿಸುವಂತಾಯಿತು. ಪರಿಸ್ಥಿತಿ ಹೀಗೇ ಮುಂದುವೆದರೆ ಬದುಕು, ಭವಿಷ್ಯ ಹೇಗೆ ಎಂಬ ಆತಂಕ ಕಾಡಿತ್ತು. ಅಂದಿನ ದುಡಿಮೆಯಿಂದ ಅಂದು ಬದುಕು ಸಾಗಿಸುತ್ತಿದ್ದವರು ಕೂಲಿ, ಕಾರ್ಯ ಕಳೆದುಕೊಂಡು ಕಂಗಾಲಾದರು.
ಸಾಲದ್ದಕ್ಕೆ ದಿನದಿನಕ್ಕೂ ಕೊರೊನಾ ಸೋಂಕಿತರು ಹಾಗೂ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆಯೂ ಏರಿಕೆಯಾಗುತ್ತಾ ಆತಂಕ ಹೆಚ್ಚಾಗಿತ್ತು. ಏಪ್ರಿಲ್‍ನಲ್ಲಿ ಶಿರಾದ ವ್ಯಕ್ತಿಯೊಬ್ಬರ ಸಾವಿನೊಂದಿಗೆ ಆರಂಭವಾಗಿ ಕೊರೊನಾ ಸಾವಿನ ಪ್ರಕರಣ ಬರುಬರುತ್ತಾ ಏರಿಕೆಯಾಗಿ, ನಿಯಂತ್ರಣ ಕಷ್ಟವೇನೋ ಎನ್ನುವಷ್ಟು ಆತಂಕ ಉಂಟು ಮಾಡಿತ್ತು.
ಮಾರ್ಚ್‍ನಲ್ಲಿ ಬೆರಳೆಣಿಕೆಯಷ್ಟು ಸೋಂಕು ಪ್ರಕರಣ ವರದಿಯಾಗುತ್ತಿದ್ದವು, ಬರುಬರುತ್ತಾ ಸಂಖ್ಯೆಯಲ್ಲಿ ಹೆಚ್ಚಳವಾಗಿ, ಜಿಲ್ಲೆಯಲ್ಲೇ ದಿನಕ್ಕೆ 300ರಿಂದ 400 ಜನರಿಗೆ ಸೋಂಕು ಹರಡುವ ಮಟ್ಟಕ್ಕೆ ಸೋಂಕು ವ್ಯಾಪಕವಾಯಿತು. ಪರಿಸ್ಥಿತಿ ನಿಭಾಯಿಸಲು ನಗರದ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ, ಸಾಲದಕ್ಕೆ ಸೋಂಕಿತರ ಆರೈಕೆಗೆ ಇನ್ನಷ್ಟು ಕಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ಜಿಲ್ಲಾಡಳಿತ ತೆರೆಯಬೇಕಾಯಿತು. ಇದೇ ಅಲ್ಲದೆ, ಅನೇಕ ಖಾಸಗಿ ಆಸ್ಪತ್ರೆಗಳೂ ಕೋವಿಡ್ ಆಸ್ಪತ್ರೆಗಳಾಗಿ ರೂಪುಗೊಂಡು ಸೋಂಕಿತರಿಗೆ ಚಿಕಿತ್ಸೆ ನೀಡತೊಡಗಿದವು.
ಮಾರ್ಚ್‍ನಿಂದ ಇದೂವರೆಗೆ (30.12.20) ಜಿಲ್ಲೆಯಲ್ಲಿ 23,196 ಕೋವಿಡ್-19 ಸೋಂಕು ಪ್ರಕರಣ ವರದಿಯಾಗಿವೆ. ಈ ಪೈಕಿ 22,470 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ 262 ಹಾಗೂ ಸೋಂಕು ತಗುಲಿ ಅನ್ಯ ಕಾರಣದಿಂದ 179 ಜನ ಸೇರಿ ಜಿಲ್ಲೆಯಲ್ಲಿ 441 ಜನ ಮೃತಪಟ್ಟಿದ್ದಾರೆ.
ಸಾಮೂಹಿಕ ದಾಸೋಹ :
ಲಾಕ್‍ಡೌನ್ ವಿಧಿಸಿದ ಸಂದರ್ಭದಲ್ಲಿ ದಿನಗೂಲಿ ನಂಬಿದ್ದ ಕೂಲಿ ಕಾರ್ಮಿಕರು, ವ್ಯವಹಾರ ಕಳೆದುಕೊಂಡ ಬೀದಿಬದಿ ವ್ಯಾಪಾರಿಗಳು, ಭಿಕ್ಷುಕರು, ನಿರಾಶ್ರಿತರು ದಿನದ ಊಟಕ್ಕೆ ಪರದಾಡುವಂತಾಯಿತು. ಆದರೆ, ಇಂತಹ ಸಂಕಷ್ಟ ಸಂದರ್ಭದಲ್ಲಿ ನಗರದ ಅನೇಕ ಸಂಘಸಂಸ್ಥೆಗಳು ಲಾಕ್‍ಡೌನ್ ಮುಗಿಯುವವರೆಗೂ ಇಂತಹವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವ ಮೂಲಕ ಜಿಲ್ಲೆಯ ದಾಸೋಹದ ಮಹತ್ವ ಸಾರಿದರು. ಅನೇಕರು ಬಡವರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿ ನೆರವಾಗದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಸಂಸ್ಥೆಯ ರಾಜ್ಯ ಘಟಕ ಸಭಾಪತಿ ಎಸ್.ನಾಗಣ್ಣ ಅವರ ನೇತೃತ್ವದಲ್ಲಿ ನಗರದ ಬಡವರಿಗೆ ದಿನಸಿ, ಅಗತ್ಯವಿರುವವರೆಗೆ ಉಚಿತವಾಗಿ ಔಷಧಿ ವಿತರಣೆ ಮಾಡಿ ನೆರವಾಗದರು. ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಅಭಿಮಾನಿ ಬಳಗ, ತುಮಕೂರು ವೀರಶೈವ ಸಮಾಜ ಸೇವಾ ಸಮಿತಿ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್, ಜಿಲ್ಲಾ ಜೆಡಿಎಸ್ ಘಟಕಗಳು ಸಂಕಷ್ಟದ ಕಾಲದಲ್ಲಿ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದವು.
ಲಾಕ್‍ಡೌನ್ ಸಂದರ್ಭದಲ್ಲಿ ವ್ಯವಹಾರ ಕಳೆದುಕೊಂಡು, ಆದಾಯವಿಲ್ಲದಂತಾಗಿ ಕಂಗಾಲಾಗಿದ್ದ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಬ್ಯಾಂಕ್ ಆಡಳಿತ ಮಂಡಳಿಯವರು ಸಹಾಯಾಸ್ತ ಚಾಚಿದರು. ರಾಜ್ಯದಲ್ಲಿ ಸರ್ಕಾರವಾಗಲಿ, ಯಾವುದೇ ಹಣಕಾಸು ಸಂಸ್ಥೆ ಸಹಾಯಕ್ಕೆ ಬಾರದೇ ಇದ್ದ ಸಮಯದಲ್ಲಿ ಬೀದಿಬದಿ ವ್ಯಾಪಾರಿಗಳು ಲಾಕ್‍ಡೌನ್ ಹಿಂಪಡೆದ ನಂತರ ವ್ಯಾಪಾರ ಆರಂಭಿಸಲು ಮೂಲ ಬಂಡವಾಳವಿಲ್ಲದೆ ಪರಿತಪಿಸಿದ್ದ ಸಂದರ್ಭದಲ್ಲಿ ಕೆ.ಎನ್.ರಾಜಣ್ಣನವರು ಡಿಸಿಸಿ ಬ್ಯಾಂಕ್‍ವತಿಯಂದ ಸುಲಭ ಕಂತುಗಳಲ್ಲಿ ತಲಾ ಹತ್ತು ಸಾವಿರ ರೂ.ವರೆಗೆ ಸಾಲ ಒದಗಿಸಿ, ಅವರು ಪುನ: ಬದುಕು ಕಟ್ಟಿಕೊಳ್ಳಲು ನೆರವಾದರು. ಜಿಲ್ಲೆಯ ಸಾವಿರಾರು ಮಂದಿ ಬಿದಿ ಬದಿ ವ್ಯಾಪಾರಿಗಳು ಡಿಸಿಸಿ ಬ್ಯಾಂಕ್ ಸಾಲದ ಸಹಾಯ ಪಡೆದು ಮತ್ತೆ ವ್ಯಾಪಾರ ಆರಂಭಿಸಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಕಿಸಾನ್ ಸಮ್ಮಾನ್ :
ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನ ಜಮೆ ಮಾಡುವ ರಾಷ್ಟ್ರಮಟ್ಟದ ಕಾರ್ಯಕ್ರಮ ತುಮಕೂರಿನಲ್ಲಿ ವರ್ಷಾರಂಭದಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತ ಫಲಾನುಭವಿಗಳಿಗೆ ಯೋಜನೆ ಹಣ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಪ್ರಧಾನಿಯವರು ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಗಣ್ಯರ ಸಾವು :
ಕೊರೊನಾ ಸಂಕಷ್ಟದ ನಡುವೆ ಅನೇಕ ಗಣ್ಯರನ್ನು 2020ರಲ್ಲಿ ಅಗಲಿದರು. ಚಿಕ್ಕನಾಯಕನಹಳ್ಲಿ ತಾಲ್ಲೂಕು ಗೋಡೆಕೆರೆ ಸಂಸ್ಥಾನ ಮಠದ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ತುಮಕೂರು ತಾಲ್ಲೂಕು ಬೆಳ್ಳಾವಿಯ ರುದ್ರನ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಣ್ಣಪ್ಪನ ಗುಡಿಯ ನನ್ನಯ್ಯ ಸ್ವಾಮೀಜಿ ನಿಧನರಾದರು. ಮಾಜಿ ಸಚಿವ, ಶಿರಾ ಕ್ಷತ್ರದ ಶಾಸಕ ಬಿ.ಸತ್ಯನಾರಾಯಣ ನಿಧನಹೊಂದಿದರು. ತುಮಕೂರು ನಗರ ಪಲಿಕೆಯ ಇಬ್ಬರು ಮಾಜಿ ಮೇಯರ್‍ಗಳು ಈ ವರ್ಷ ಮೃತರಾದರು. ಯಶೋದ ಗಂಗಪ್ಪ ಕೊರೊನಾ ಸೋಂಕಿನಿಂದ ಹಾಗೂ ಸುಧೀಶ್ವರ್ ಅನಾರೋಗ್ಯದಿಂದ ಅಸುನೀಗಿದರು. ಹಿರಿಯ ಸಹಕಾರಿ ಶಿರಾದ ಎಸ್.ಎನ್.ಕೃಷ್ಣಯ್ಯ ಇತ್ತೀಚೆಗೆ ಅಗಲಿದರು. ಜಿಲ್ಲೆಯ ಸಾಂಸ್ಕೃತಿಕ ಸಂಘಟಕರಾಗಿದ್ದ ತುಮಕೂರಿನ ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್ ಕೊರೊನಾ ಸೋಂಕಿನಿಂದ ಮೃತಪಟ್ಟರು.
ಕೊರೊನಾ ಸೊಂಕು ಯಾರನ್ನೂ ಬಿಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಂಕು ತಗುಲಿ ಕೆಲ ಕಾಲ ಕ್ವಾರಂಟೈನ್ ಆಗಬೇಕಾಯಿತು. ಶಿರಾ ಉಪ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಕೂಡಾ ಚುನಾವಣೆ ವೇಳೆ ಕೊರೊನಾ ಸೋಂಕಿನಿಂದ ನರಳಬೇಕಾಯಿತು. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಕುಣಿಗಲ್ ಶಾಸಕ ಡಾ.ರಂಗನಾಥ್ ಅವರಿಗೂ ಕೋವಿಡ್ ಸೋಂಕು ಅಂಟಿ ಚಿಕಿತ್ಸೆ ಪಡೆದರು.
ಅಬ್ಬರದ ಉಪಚುನಾವಣೆ :
ಈ ವರ್ಷದಲ್ಲಿ ರಾಜ್ಯದ ಗಮನ ಸೆಳೆಯುವಂತೆ ಶಿರಾ ವಿಧಾನ ಸಭೆಗೆ ಉಪ ಚುನಾವಣೆ ಸದ್ದು ಮಾಡಿತು. ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆ ರಾಜಕೀಯ ಪಕ್ಷಗಳ ನಡುವೆ ಹಣಾಹಣಿ ಸ್ಪರ್ಧೆವೊಡ್ಡಿತ್ತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಘಟಾನುಗಟಿ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು ತಮ್ಮ ಅಭ್ಯರ್ಥಿ ಗೆಲುವಿಗೆ ಅಬ್ಬರದ ಪ್ರಚಾರ ನಡೆಸಿದ್ದರು. ಕೊನೆಗೆ, ಇದೇ ಪ್ರಥಮ ಬಾರಿಗೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಡೆಯಿತು. ಈ ಪಕ್ಷದ ಡಾ.ರಾಜೇಶ್‍ಗೌಡ ಗೆಲುವು ಸಾಧಿಸಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶಿರಾದವರೇ ಆದ ಬಿಜೆಪಿಯ ಚಿದಾನಂದ ಗೌಡ ಚುನಾಯಿತರಾಗಿ ಬಿಜೆಪಿ ಬಲ ಹೆಚ್ಚಿಸಿದರು. ಶಿರಾ ಉಪಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಭರವಸೆಯಂತೆ ಜಿಲ್ಲೆಯ ಐದು ಮಂದಿ ಬಿಜೆಪಿ ಮುಖಂಡರಿಗೆ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಪ್ರಾಪ್ತವಾಯಿತು.
ಶಾಸಕ ಬಿ.ಸಿ.ನಾಗೇಶ್‍ಗೆ ಕಾರ್ಮಿಕ ಕಲ್ಯಾಣ ಮಂಡಳಿ, ಶಾಸಕ ಮಸಾಲೆ ಜಯರಾಮ್ ಅವರಿಗೆ ಸಾಂಬಾರು ಅಭಿವೃದ್ಧಿ ಮಂಡಳಿ, ಎಸ್.ಆರ್.ಗೌಡರಿಗೆ ರೇಷ್ಮೇ ಅಭಿವೃದ್ಧಿ ಮಂಡಳಿ, ಕೆ.ಎಸ್.ಕಿರಣ್‍ಕುಮಾರ್ ಅವರಿಗೆ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬಿ.ಕೆ.ಮಂಜುನಾಥ್ ಅವರಿಗೆ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಒಲಿದುಬಂದಿತು.
ಜಿಲ್ಲೆಯ ಹಿರಿಯ ಸಹಕಾರಿ ತಿಪಟೂರಿನ ಮಾಜಿ ಶಾಸಕ ಕೆ.ಷಡಕ್ಷರಿ ಅವರು ಈ ವರ್ಷ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದರು. ಶಿರಾ ತಾಲ್ಲೂಕು ಕರಿರಾಮನಹಳ್ಳಿಯ ಭಾಗವತ ಹನುಮಂತರಾಯಪ್ಪ ಅವರಿಗೆ ಮೂಡಲಪಾಯ ಯಕ್ಷಗಾನ ಸೇವೆಗೆ ಹೆಚ್.ಎಲ್.ನಾಗೇಗೌಡ ಮತ್ತು ಯಕ್ಷಗಾನ ಸಿರಿ ಪ್ರಶಸ್ತಿ ದೊರೆಯಿತು.
2020ರಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯದಿದ್ದರೂ ಮಳೆ ಅಭಾವ ಕಾಡಲಿಲ್ಲ, ಹಾಗೆಂದು ಕೆರೆಕಟ್ಟೆ ತುಂಬುವಂತಹ ಮಳೆ ಬೀಳಲಿಲ್ಲ. ಆದರೂ ಸಕಾಲದಲ್ಲಿ ಮಳೆ ಸುರಿದು ರೈತರ ಕೃಷಿ ಚಟುವಟಿಕೆಗೆ ನೆರವಾಯಿತು. ಈ ವರ್ಷದ ಬೆಳೆ ಕೂಡಾ ಆಶಾದಾಯಕವಾಗಿತ್ತು. ಆದರೆ, ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು. ವಾಹನ ಸಂಚಾರ ಸ್ಥಗಿತಗೊಂಡು ಬೆಳೆದ ಹೂವು, ಹಣ್ಣುನ್ನು ಹೊರ ರಾಜ್ಯ, ಜಿಲ್ಲೆಗಳಲ್ಲಿ ಮಾರಾಟ ಮಾಡಲು ಸಾಗಾಣಿಕೆ ವ್ಯವಸ್ಥೆ ಸಾಧ್ಯವಾಗದೆ ನಷ್ಟ ಅನುಭವಿಸಬೇಕಾಯಿತು.
ಈ ವರ್ಷವೂ ಹಳ್ಳಿಗಳಲ್ಲಿ ವನ್ಯ ಪ್ರಾಣಿಗಳ ಹಾವಳಿ ಮುಂದುವರೆಯಿತು. ಈ ವರ್ಷ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಕಂಡುಬರಲಿಲ್ಲ. ಆದರೆ ಚಿರತೆ ಹಾವಳಿ ಹೆಚ್ಚಾಗಿತ್ತು. ಚಿರತೆ ದಾಳಿಗೆ ಸಿಕ್ಕಿ ಐದು ಜನ ಪ್ರಾಣ ಕಳೆದುಕೊಂಡರು. ಹಾವಳಿ ಇರುವ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟುಬರುವುದು ವರ್ಷವಿಡೀ ನಡೆಯಿತು. ಆದರೂ ಚಿರತೆ ಭೀತಿ ತಪ್ಪಿಲ್ಲ.
ಈ ವರ್ಷ ಹೇಮಾವತಿ ನೀರಿಗಾಗಿ ಗಮನ ಸೆಳೆಯುವ ಹೋರಾಟಗಳು ಕಂಡುಬರಲಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಮಾವತಿ ನೀರನ್ನು ಜಿಲ್ಲೆಗೆ ಹರಿಸಲಾಯಿತು, ಅಲ್ಲದೆ, ಹೆಚ್ಚಿನ ಕೆರೆಗಳಿಗೂ ನೀರು ತುಂಬಿಸಲಾಯಿತು.
ವಿವಿಧ ಬೇಡಿಕೆಗಳಿಗಾಗಿ ಸಂಘಸಂಸ್ಥೆಗಳ ಹೋರಾಟಗಳು ಈ ವರ್ಷವೂ ಮುಂದುವರೆದವು. ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಂಘಟನೆಗಳು ಹಲವು ಹಂತಗಳ ಪ್ರತಿಭಟನೆ ನಡೆಸಿದವು. ದೇಶದ ಗಮನ ಸೆಳೆದ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂಬ ದೇಶವ್ಯಾಪಿ ಹೋರಾಟಕ್ಕೆ ಜಿಲ್ಲೆಯ ರೈತ, ಕಾರ್ಮಿಕ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿವೆ.
ಶೈಕ್ಷಣಿಕ ಚಟುವಟಿಕೆ ಅಸ್ತವ್ಯಸ್ಥ :
ಕೊರೊನಾದಿಂದ ಈ ವರ್ಷದ ಶೈಕ್ಷಣಿಕ ಚಟುವಟಿಕೆ ಅಸ್ತವ್ಯಸ್ಥವಾಯಿತು. ಲಾಕ್‍ಡೌನ್‍ನಲ್ಲಿ ಬಂದ್ ಆಗಿದ್ದ ಶಾಲಾಕಾಲೇಜುಗಳು ಹಾಗೂ ಶಿಕ್ಷಣ ಚಟುವಟಿಕೆಗಳು ವರ್ಷವಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲು ಸಾಧ್ಯವಾಗಿಲ್ಲ.
ತುಮಕೂರು ನಗರದಲ್ಲಿ ಆರಂಭವಾಗಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಬಗ್ಗೆ ನಗರದಲ್ಲಿ ವ್ಯಾಪಕ ಅಪಸ್ವರ ಎದ್ದಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುತ್ತಿಲ್ಲ ಹಾಗೂ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿವೆ. ಕಾಮಗಾರಿ ಆರಂಭಗೊಂಡು ಯಾವುದೂ ಸಮರ್ಪಕಗೊಳ್ಳದೆ ನಗರವಿಡೀ ಧೂಳುಮಯವಾಗಿದೆ.
ಸುಮಾರಿ 35 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಒಡೆದುಹಾಕಲಾಗಿದೆ. ಈ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆಗಿನಿಂದ ಬಸ್ ನಿಲ್ದಾಣವನ್ನು ಸಮೀಪದ ಕೆಎಸ್‍ಆರ್‍ಟಿಸಿ ಡಿಪೋ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ಈಗೀಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ನಿಟ್ಟುಸಿರುಬಿಡುತ್ತಿರುವಾಗಲೇ ಹೊಸ ರೂಪದ ಬ್ರಿಟನ್ ವೈರಸ್‍ನ ಭೀತಿ ಶುರುವಾಗಿದೆ. ಮತ್ತೆ ಕೊರೊನಾ ಕರಿನೆರಳು ಆವರಿಸುವದೇ ಎಂಬ ಕಳವಳ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
