ತುಮಕೂರು:
ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 389 ಮಕ್ಕಳಿಗೆ, 110 ಶಿಕ್ಷಕರಿಗೆ ಪಾಸಿಟಿವ್
ವೀಕೆಂಡ್ ಕರ್ಫ್ಯೂ ಬಳಿಕ ಶಾಲೆಗಳಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಸೋಮವಾರ ಒಂದೇ ದಿನ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ 389 ಮಕ್ಕಳಲ್ಲಿ, 110 ಶಿಕ್ಷಕರಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಕೋವಿಡ್ 3ನೇ ಅಲೆಯಲ್ಲಿ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 38 ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 1ರಿಂದ 10ನೇ ತರಗತಿಯ 305 ವಿದ್ಯಾರ್ಥಿಗಳು, 87 ಶಿಕ್ಷಕರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಸೋಮವಾರ ಒಂದೇ ದಿನ 182 ವಿದ್ಯಾರ್ಥಿಗಳು, 54 ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದೆ.
ತುಮಕೂರು ತಾಲೂಕಲ್ಲೇ ಅತೀ ಹೆಚ್ಚು:
ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 6 ತಾಲೂಕುಗಳಲ್ಲಿ ಒಟ್ಟು 305 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದ್ದು, ತುಮಕೂರು ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 121 ಬಾಲಕರು, 95 ಬಾಲಕಿಯರು ಸೇರಿ 216 ಮಂದಿ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು,
ಗುಬ್ಬಿಯಲ್ಲಿ 20, ಕುಣಿಗಲ್‍ನಲ್ಲಿ 39, ತಿಪಟೂರಲ್ಲಿ 15, ಚಿ.ನಾ.ಹಳ್ಳಿಯಲ್ಲಿ 7, ತುರುವೇಕೆರೆಯಲ್ಲಿ 8 ಮಂದಿಯಲ್ಲಿ ಸೋಂಕುಕಾಣಿಸಿಕೊಂಡಿದೆ. ಇವರಲ್ಲಿ 165 ಮಂದಿ ಗುಣಮುಖ ರಾಗಿದ್ದಾರೆ. ಅಂತೆಯೇ ಶಿಕ್ಷಕರ ಪೈಕಿ ಈವರೆಗೆ 89 ಶಿಕ್ಷಕರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 4 ತಾಲೂಕುಗಳಲ್ಲಿ 246 ಮಂದಿ ವಿದ್ಯಾರ್ಥಿಗಳಲ್ಲಿÉ ಸೋಂಕು ದೃಢಪಟ್ಟಿದ್ದು, ಸಿರಾ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 53 ಬಾಲಕರು 55 ಬಾಲಕಿಯರು ಸೇರಿ 108 ಮಂದಿಗೆ, ಕೊರಟಗೆರೆಯಲ್ಲಿ 75, ಮಧುಗಿರಿಯಲ್ಲಿ 35 ಹಾಗೂ ಪಾವಗಡದಲ್ಲಿ 28 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅಂತೆಯೇ 65 ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ.
ಸೋಂಕು ಪತ್ತೆ ಹಚ್ಚುವುದೇ ಸವಾಲು:
ಸರಕಾರಿ-ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ ಹಚ್ಚುವುದೇ ಸವಾಲೆನಿಸಿದ್ದು, ಯಾವ ಮಕ್ಕಳಿಗೆ ಸೋಂಕು ಇದೆ, ಯಾವ ಮಕ್ಕಳಿಗೆ ಇಲ್ಲ ಎನ್ನುವುದೇ ತಿಳಿಯುವುದು ಶಿಕ್ಷಕರಿಗೂ ಸವಾಲಾಗಿದೆ.
ಕೆಲವು ಕಡೆ ಸೋಂಕಿತರ ಮನೆಯಿಂದಲೂ ವಿದ್ಯಾರ್ಥಿಗಳು ಶಾಲೆ ಪ್ರವೇಶಿಸುತ್ತಿದ್ದು, ಇನ್ನೂ ಕೆಲವು ಮಕ್ಕಳು 2-3 ದಿನ ಗೈರಾದ ಬಳಿಕ ಆ ಮಕ್ಕಳಿಗೆ ಸೋಂಕು ಅಥವಾ ಅವರ ಮನೆಯವರಲ್ಲಿ ಸೋಂಕು ಕಂಡುಬಂದಿದೆ ಎಂಬ ಮಾಹಿತಿ ಶಾಲೆಯವರೇ ಕರೆ ಮಾಡಿ ವಿಚಾರಿಸಿದಾಗ ತಿಳಿಯುತ್ತಿದೆ.
ಹಾಗಾಗಿ ಇತರೆ ಮಕ್ಕಳು, ಶಿಕ್ಷಕರು ಸೋಂಕಿತ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿರುವುದು ತಡವಾಗಿ ತಿಳಿಯುತ್ತಿದ್ದು, ಯಾವುದೇ ವಿದ್ಯಾರ್ಥಿ ಒಂದು ದಿನ ಗೈರಾದರೂ ಅವರು ಏಕೆ ಬಂದಿಲ್ಲ ಎಂಬುದನ್ನು ಕರೆ ಮಾಡಿ ಕೇಳಿ ಸೋಂಕಿನ ಟ್ರ್ಯಾಕ್ ಮಾಡುವ ವ್ಯವಸ್ಥೆ ಜಾರಿಯಾಗಬೇಕೆಂಬುದು ಅನೇಕ ಪೋಷಕರ ಒತ್ತಾಯವಾಗಿದೆ.
ಮತ್ತೆ ಕೆಲವು ಪೋಷಕರು ಶಾಲೆಗೆ ಮಕ್ಕಳು ಕಳುಹಿಸಲೇ ಹಿಂಜರಿಯುತ್ತಿದ್ದು, ಅನೇಕ ಖಾಸಗಿ ಶಾಲೆಗಳು ಈಗಾಗಲೇ ಆನ್‍ಲೈನ್ –ಆಫ್‍ಲೈನ್ ಕಲಿಕೆಗೆ ಮುಂದಾಗಿವೆ. ಆದರೆ ಸರಕಾರಿ ಶಾಲಾ ವ್ಯವಸ್ಥೆಯಲ್ಲಿ ಆನ್‍ಲೈನ್ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು, ಪರ್ಯಾಯ ಬೋಧನಾ ಕ್ರಮ ವಿದ್ಯಾಗಮದತ್ತವೂ ಸರಕಾರ ತೀರ್ಮಾನ ಕೈಗೊಳ್ಳದಿರುವುದು ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ.
ಕೆಲವು ಖಾಸಗಿಯಲ್ಲಿ ಮಕ್ಕಳ ಬಗ್ಗೆ ಲಕ್ಷ್ಯವಿಲ್ಲ: ತುಮಕೂರು ನಗರದ ಕೆಲವು ಖಾಸಗಿ ಶಾಲೆಗಳಲ್ಲೇ ಮಕ್ಕಳಿಗೆ ಪಾಸಿಟಿವ್ ಕಂಡುಬಂದರೂ ಅಂತಹ ಶಾಲೆಗಳಿಗೆ ರಜೆ ನೀಡದೆ ಶಾಲೆ ನಡೆಸುತ್ತಿರುವ ದೂರುಗಳು ಕೇಳಿಬಂದಿವೆ.
ಶಾಲೆ ರಜೆಯನ್ನು ಸೆಕ್ಷನ್‍ಗಳಿಗೆ ಸೀಮಿತಗೊಳಿಸುತ್ತಿರುವ ಆರೋಪಗಳು ಪೋಷಕರಿಂದ ವ್ಯಕ್ತವಾಗಿದ್ದು, ಚಿಕ್ಕಮಕ್ಕಳು ಜ್ವರ, ಕೆಮ್ಮುವಿನಿಂದ ಬಳಲುತ್ತಿದ್ದರೂ, ಆ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸದೆ ಶಾಲೆ ನಡೆಸುವುದರಲ್ಲಿ ಆಡಳಿತ ಮಂಡಳಿ ಮಗ್ನವಾಗಿವೆ. ಶುಲ್ಕ ಪಾವತಿಗೆ ಒತ್ತಡ ಹೆಚ್ಚಿದೆ. ಅಧಿಕಾರಿಗಳು ಈ ಬಗ್ಗೆ ಗಂಭೀರ ಗಮನಹರಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.
ಗೊಂದಲಕಾರಿಯಾದ 7 ದಿನ ಶಾಲೆ ರಜೆ !
ಮತ್ತೊಂದೆಡೇ ಸೋಂಕು ಕಾಣಿಸಿಕೊಂಡರೆ 7 ದಿನ ಶಾಲಾ ಬಂದ್ ನಿರ್ದೇಶನವೇ ಗೊಂದಲಕಾರಿಯಾಗಿ ಪರಿಣಮಿಸಿದ್ದು, ನಿತ್ಯವೂ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಒಂದಷ್ಟು ಮಂದಿ ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದು 7 ದಿನ ಶಾಲೆ ಮುಚ್ಚಿ ಮತ್ತೆ ತೆರೆದಾಗ ಇನ್ನಷ್ಟು ಮಂದಿಗೆ ಸೋಂಕು ಕಾಣಿಸಿಕೊಂಡರೆ ಮತ್ತೆ ಶಾಲೆ ಮುಚ್ಚಬೇಕಾದ ಸ್ಥಿತಿ ಎದುರಾಗಲಿದೆ.
ಪದೇ ಪದೇ ಶಾಲೆ ಮುಚ್ಚುವುದು, ತೆರೆಯುವುದು ಗೊಂದಲಕಾರಿಯೇ ಸರಿ ಎನ್ನುವ ಅಭಿಪ್ರಾಯವನ್ನು ಶಾಲಾ ಆಡಳಿತ ಮಂಡಳಿಯವರು, ಪೋಷಕರು ವ್ಯಕ್ತಪಡಿಸಿದ್ದಾರೆ.
ಸೋಂಕಿತರು ಕಂಡುಬಂದ ಶಾಲೆಗಳಲ್ಲಿ ಸರಕಾರದ ಮಾರ್ಗಸೂಚಿ ಅನುಸಾರ 7 ದಿನ ಬಂದ್ ಮಾಡಿ ನಂತರ ಸ್ಯಾನಿಟೈಜೇಷನ್ ಮಾಡಿ ಪುನಃ ಆರಂಭಿಸುವ ಪ್ರಕ್ರಿಯೆ ನೆರವೇರಿಸಲಾಗುತ್ತಿದೆ. ಮಕ್ಕಳಲ್ಲಿ ಮಾಸ್ಕ್ ಧರಿಸುವಿಕೆ ಸೇರಿ ಶಾಲೆಗ¼್ಲಲೊÀ ಕೋವಿಡ್ ನಿಯಮ ಪಾಲನೆ ಕಡ್ಡಾಯ ಮಾಡಲಾಗಿದೆ. ಪಾಸಿಟಿವ್ ಕಂಡುಬಂದ ಮಕ್ಕಳ ಮಾಹಿತಿಯನ್ನು ಪೋಷಕರು ಕೂಡಲೇ ಶಾಲೆಗಳಿಗೆ ತಲುಪಿಸಬೇಕು.- ಸಿ.ನಂಜಯ್ಯ ಹಾಗೂ ಕೃಷ್ಣಮೂರ್ತಿ, ಉಪ ನಿರ್ದೇಶಕರು ತುಮಕೂರು ದಕ್ಷಿಣ ಹಾಗೂ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ.
-ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
