ರಾಜ್ಯದಲ್ಲಿ ಇದು ಲಾಕ್‍ಡೌನೋ…? ನಿರ್ಬಂಧವೋ…? ಅನ್‍ಲಾಕೋ…?

 ತುಮಕೂರು :

     ರಾಜ್ಯದಲ್ಲಿ ದಿನವೊಂದಕ್ಕೆ 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು, ಅಧಿಕವಾಗುತ್ತಿರುವ ಸಾವಿನ ಪ್ರಮಾಣವನ್ನು ತಗ್ಗಿಸಲು ಸಂಪೂರ್ಣ ಲಾಕ್‍ಡೌನ್ ಅನಿವಾರ್ಯ ಎಂದು ತಜ್ಞರು, ವಿಪಕ್ಷ ನಾಯಕರುಗಳಾದಿಯಾಗಿ ಸರಕಾರದ ಸಚಿವರುಗಳೇ ಸಲಹೆ ನೀಡಿದರೂ, ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಅವರು ಮಾತ್ರ ಮೇ 10 ರಿಂದ 24ರವರೆಗೆ 15ದಿನಗಳ ಕಾಲ ಸಡಿಲ ಲಾಕ್‍ಡೌನ್ ಘೋಷಣೆ ಮಾಡಿ ಅಪಹಾಸ್ಯ, ಟೀಕೆಗೆ ಗುರಿಯಾಗಿದ್ದಾರೆ. ಮುಖ್ಯಮಂತ್ರಿಗಳ ಲಾಕ್‍ಡೌನ್ ಹೇಳಿಕೆಯನ್ನು ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರೇ ಅಲ್ಲಗಳೆದಿದ್ದು, ಇದು ಲಾಕ್‍ಡೌನ್ ಅಲ್ಲ, ಮತ್ತಷ್ಟು ಕಠಿಣ ನಿಯಮಗಳಷ್ಟೇ ಜಾರಿ ಎಂದಿರುವುದು ಜನತೆಯಲ್ಲಿ ಗೊಂದಲಕ್ಕೆ ಕಾರಣವಾಗಿದೆ.

      ಕೋವಿಡ್ ಕರ್ಫ್ಯೂ ಘೋಷಣೆ ಸಂದರ್ಭದಲ್ಲಿ ಹೊರಡಿಸಿದ್ದ ಮಾರ್ಗಸೂಚಿಯಲ್ಲೇ ಸ್ವಲ್ಪ ಪರಿಷ್ಕರಣೆ ಮಾಡಿ ಕಳೆದ ಬಾರಿ ಅವಕಾಶ ಕಲ್ಪಿಸಿದ್ದ ಕೈಗಾರಿಕೆಗಳನ್ನು ಬಂದ್ ಮಾಡಿ (ಅಗತ್ಯ ಸೇವೆಗೆ ಪೂರಕವಾದ ಉದ್ಯಮಗಳನ್ನು ಹೊರತುಪಡಿಸಿ) ಅಂತರ್ ಜಿಲ್ಲಾ, ಅಂತರ್‍ರಾಜ್ಯ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ಹಾಲಿ ಇರುವಂತೆಯೇ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ, ಬಾರ್, ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶ ನೀಡಿದ್ದು, ನಡೆದುಕೊಂಡು ಹೋಗಿ ಪಾರ್ಸೆಲ್ ತರಬೇಕು ಎಂದು ಸಿಎಸ್ ನೀಡಿರುವ ಹೇಳಿಕೆ ಸಾಕಷ್ಟು ಟ್ರೋಲ್ ಆಗಿದೆ.

   ಹಾಲು, ತರಕಾರಿ ಹೆಸರಲ್ಲಿ ಸಂಚರಿಸುವವರ ಕಡಿವಾಣ ಹೇಗೆ?:

      ಇನ್ನೂ ಇ-ಕಾಮರ್ಸ್ ಹೋಂ ಡೆಲಿವರಿ, ನಿರ್ಮಾಣ ಕಾಮಗಾರಿ ಕಾರ್ಮಿಕರ ಕೆಲಸಕ್ಕೂ ಅನುಮತಿ ನೀಡಿದ್ದು, ತಳ್ಳುವ ಗಾಡಿ, ಹಾಲಿನ ಮಳಿಗೆಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೂ ಹಾಲು, ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಇದ್ಯಾವ ಸೀಮೆ ಲಾಕ್‍ಡೌನ್ ಎಂಬ ಟೀಕೆಗೆ ಗುರಿಯಾಗಿಸಿದೆ.

     ಸಂಜೆ 6ರವರೆಗೂ ಹಾಲಿನಂಗಡಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟಕ್ಕಿಟ್ಟಿದ್ದರೆ ಜನರು ಅವರ ಬಳಿ ಖರೀದಿಗೆ ಬರುವುದಿಲ್ಲವೇ? ಮತ್ತೆ ರಸ್ತೆ ಬೀದಿಗಳಲ್ಲಿ ಜನರ ಓಡಾಟ ನಿಯಂತ್ರಣ ಹೇಗೆ ಸಾಧ್ಯ ಎಂದು ಸರಕಾರದ ನಡೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಕಾರ್ಮಿಕರನ್ನು ಗುರುತಿಸುವುದು ಹೇಗೇ?:

      ಸಾರ್ವಜನಿಕರ ರಸ್ತೆ, ಮನೆ ನಿರ್ಮಾಣ ಕಾಮಗಾರಿಗೆ ಅನಿರ್ಬಂಧತೆಯನ್ನು ಮುಂದುವರಿಸಿದ್ದು, ಪಾಸ್‍ವ್ಯವಸ್ಥೆಯನ್ನು ಜಾರಿಗೆ ತರದಿರುವುದು ಕಟ್ಟಡ ಕಾರ್ಮಿಕರ ಹೆಸರಲ್ಲಿ ಇತರರ ಸಂಚಾರಕ್ಕೂ ಆಸ್ಪದವೊದಗಿಸಿದೆ. ಇನ್ನೂ ರಸ್ತೆ ಕಾಮಗಾರಿಗಳ ಸಂದರ್ಭದಲ್ಲಿ ಮಾಸ್ಕ್, ಸುರಕ್ಷಾ ನಿಯಮಗಳ ಪಾಲನೆಯಿಲ್ಲದಿರುವುದು ಈಗಲೂ ಕಂಡುಬಂದಿದೆ.

     ಅಂತರ್ ಜಿಲ್ಲಾ, ಅಂತರ್‍ರಾಜ್ಯ ರಸ್ತೆ ಸಂಚಾರ, ಟ್ಯಾಕ್ಸಿ, ಆಟೊ, ಬಸ್ ಸಂಚಾರ ಬಂದ್ ಮಾಡಿ ರೈಲು ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಸರಕಾರ, ರೈಲು ವಿಮಾನಯಾನ ನಿರ್ಬಂಧಕ್ಕೆ ಕೇಂದ್ರದತ್ತ ಬೊಟ್ಟು ಮಾಡಿರುವುದು ಅಂತರ್‍ಜಿಲ್ಲಾ, ಅಂತರ್‍ರಾಜ್ಯ ಸಂಚಾರ ನಿರ್ಬಂಧದ ಉದ್ದೇಶಕ್ಕೆ ತೀಲಾಂಜಲಿ ನೀಡಿದೆ. ಇನ್ನೂ ರೈಲು ನಿಲ್ದಾಣಕ್ಕೆ ಹೋಗಿ ಬರುವವರು, ವಾಹನ ಸಿಗದೆ ರಾತ್ರಿ ವೇಳೆಯಲ್ಲಿ ಏನು ಮಾಡಬೇಕು? ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ. ಸಡಿಲ ನಿರ್ಬಂಧಗಳು ಪೊಲೀಸರಿಗೂ ಸಹ ಕೈ ಕಟ್ಟಿಹಾಕುವಂತೆ ಮಾಡಿದ್ದು, ಜನಸಂಚಾರವನ್ನು ಪೂರ್ಣ ನಿಯಂತ್ರಣಕ್ಕೆ ಸಾಧ್ಯವಿಲ್ಲ ಎಂಬ ಮಾತುಗಳೇ ಎಲ್ಲೆಡೆ ಕೇಳಿಬರುತ್ತಿದೆ.
 

ಸರಕಾರಕ್ಕೆ ಜನರ ಪ್ರಾಣದ ಬಗ್ಗೆ ಕಾಳಜಿಯೇ ಇಲ್ಲ!

      ಹಲವು ಸುತ್ತಿನ ಸಭೆಗಳು, ಸಮಾಲೋಚನೆ, ಸಲಹೆಗಳ ಸ್ವೀಕಾರದ ಬಳಿಕವೂ ಲಾಕ್‍ಡೌನ್ ಗಟ್ಟಿಯಾದ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಸರಕಾರಕ್ಕೆ ಕರುನಾಡಿನ ಜನರ ಪ್ರಾಣವೇ ಮುಖ್ಯ ಎನಿಸುತ್ತಿಲ್ಲ. ಅಗತ್ಯ ಆಕ್ಸಿಜನ್ ಬೆಡ್, ಜೀವರಕ್ಷಕ ವ್ಯಾಕ್ಸಿನ್‍ಗಳನ್ನು ಒದಗಿಸಲು ಸಾಧ್ಯವಾಗದೆ ಲಾಕ್‍ಡೌನ್ ಹೆಸರಿನ ಡ್ರಾಮಾ ಮಾಡಲಾಗಿದೆ. ನೆರೆಯ ರಾಜ್ಯಗಳನ್ನಾದರೂ ನೋಡಿ ಕಲಿಯಬೇಕಿತ್ತು. ಸಂಪೂರ್ಣ ಲಾಕ್‍ಡೌನ್ ಮಾಡಿದರೆ ಎಲ್ಲಿ ಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೋಎನ್ನುವ ಕಾರಣಕ್ಕೆ ಈ ಅರೆಬರೆ ಲಾಕ್‍ಡೌನ್ ಕ್ರಮ ಘೋಷಿಸಿದ್ದಾರೆ. ಇದರಿಂದ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂಬ ವ್ಯಾಪಕ ಟೀಕೆಗಳು ಸಿಎಂ ಘೋಷಣೆ ಬೆನ್ನಿಗೆ ವ್ಯಕ್ತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap