ಕುಣಿಗಲ್ :

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯನ್ನು ನೀಡಲಾಯಿತು.
ಮೊದಲನೆ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರು ಸೇರಿ 84 ಜನರಿಗೆ ಲಸಿಕೆ ನೀಡಲಾಯಿತು.
ಜಿಲ್ಲಾಧಿಕಾರಿ ಡಾ . ರಾಕೇಶ್ ಕುಮಾರ್ ಈ ವೇಳೆ ಹಾಜರಿದ್ದು ವ್ಯವಸ್ಥೆ ಪರಿಶೀಲಿಸಿದರು. ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಿದ ನಂತರ ಅವರು ಹೊರಹೋಗದಂತೆ ತಿಳಿಸಿ, ಅವರ ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ಅವರು ಯಾವುದೇ ಅಡ್ಡಪರಿಣಾಮ ಕಂಡುಬಂದಲ್ಲಿ ಕೂಡಲೇ ವೈದ್ಯರೇ ಪರೀಕ್ಷಿಸಬೇಕು ಎಂದು ತಿಳಿಸಿದರು.
ಇಲ್ಲಿನ ಆಂಬುಲೆನ್ಸ್ ವಾಹನ ಕೆಟ್ಟು ಮೂರು ತಿಂಗಳಾಗಿದ್ದು, ರೋಗಿಗಳು ಪರದಾಡುವಂತಾಗಿದೆ. ಈ ಜವಾಬ್ದಾರಿ ಅರಿಯದ ಇಲ್ಲಿನ ಅಧೀಕ್ಷಕ ಕಿರಣ್ ಎಂಬಾತನ ಕಾರ್ಯವೈಖರಿಯಿಂದ ಕೆಲ ಮುಖಂಡರು ಹಾಗೂ ನಾಗರಿಕರು ಪ್ರಶ್ನಿಸಿ, ಆಂಬುಲೆನ್ಸ್ ಕೆಟ್ಟು ಹೋಗಿದ್ದರ ಪರಿಣಾಮ ಚಿಕಿತ್ಸೆಗೆ ಬಂದ ಹಲವು ಸಾಮಾನ್ಯ ಜನರು ಹಣದ ಕೊರತೆಯ ನಡುವೆಯೇ ಖಾಸಗಿ ವಾಹನ ಮಾಡಿಕೊಂಡು ಆಸ್ಪತ್ರೆಗಳಿಗೆ ಹೋಗುವಂತಾಗಿದೆ. ಆ ವಾಹನ ರಿಪೇರಿಯಾಗಲು ಎಷ್ಟು ದಿನಬೇಕು, ಆ ಕೆಲಸ ಮಾಡಿಸುವ ಜವಾಬ್ದಾರಿ ಯಾರದ್ದು ಇಲ್ಲಿ ಕೇಳಿದರೆ ಬರೀ ಸಬೂಬು ಹೇಳುತ್ತಾರೆ ಎಂದು ಜಿಲ್ಲಾಧಿಕಾರಿಗೆ ದೂರಿದರು.
ಇದನ್ನು ತಿಳಿದ ಜಿಲ್ಲಾಧಿಕಾರಿಗಳು, ಕೂಡಲೆ ಆ ಬಗ್ಗೆ ಮಾಹಿತಿ ನೀಡಿ ಮತ್ತು ರಿಪೇರಿ ಮಾಡಿಸಿ ಮುಂದಿನ ದಿನದಲ್ಲಿ ಯಾವುದೇ ದೂರು ಬರದಂತೆ ನೋಡಿಕೊಂಡು ಈಗಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಆಡಳಿತಾಧಿಕಾರಿಗೆ ಸೂಚಿಸಿದರು.
ಉಪವಿಭಾಗಧಿಕಾರಿ ಅಜಯ್, ತಹಸೀಲ್ದಾರ್ ವಿಶ್ವನಾಥ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಜಗದೀಶ್ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ಡಾ.ನವೀನ್ ಕುಮಾರ್ ಡಾ.ಮಂಜುನಾಥ್ ಸ್ಮರಣ್ ಹಾಗೂ ಕೋವಿಡ್ ಲಸಿಕೆಯ ಉಸ್ತುವಾರಿ ನೋಡಲ್ ಅಧಿಕಾರಿಗಳಾದ ಮೈಸೂರಿನ ಡಾ. ಕೆ ಎಚ್ ಪ್ರಸಾದ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








