ಬೆಂಗಳೂರು:
ಕೊರೊನಾ ವೈರಸ್ ಹೆಚ್ಚಳ ಹಿನ್ನೆಲೆ ಸರ್ಕಾರ ಹೈ ಅಲರ್ಟ್ ಆಗಿದ್ದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಮೀಸಲಿಡಲು ಸರ್ಕಾರ ಸೂಚನೆ ನೀಡಿದೆ. ಭಾರತಕ್ಕೆ ಕೊರೋನಾ ರೂಪಾಂತರ ಹೊಸ ತಳಿ ಕಾಲಿಟ್ಟಿದ್ದು, ಇದುವರೆಗೂ ಭಾರತದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ ಆಗಿವೆ. ಇದೀಗ ರಾಜ್ಯದಲ್ಲಿ ಇಂದು 80 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ. ಅಲ್ಲದೆ ಬೆಂಗಳೂರಿನಲ್ಲೇ ನಿನ್ನೆ 73 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ರಾಜ್ಯದಲ್ಲಿ ಕೋವಿಡ್ ಆಕ್ಟಿವ್ ಪ್ರಕರಣಗಳ ಸಂಖ್ಯೆ ಇದೀಗ 80ಕ್ಕೆ ಏರಿಕೆಯಾಗಿವೆ. ದಕ್ಷಿಣ ಕನ್ನಡ ವಿಜಯನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡು, ಮೈಸೂರು ಜಿಲ್ಲೆಯಲ್ಲಿ ಮೂವರಿಗೆ ಕೊರೋನಾ ಪಾಸಿಟಿಟೀವ್ ವರದಿ ಬಂದಿದ್ದು, ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ.
“ಕೋವಿಡ್ ಪಾಸಿಟಿವ್ ಸೋಂಕಿತರು ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಕೋವಿಡ್ ಟೆಸ್ಟಿಂಗ್ ಕೂಡ ಬೆಂಗಳೂರಿನಲ್ಲಿ ಹೆಚ್ಚಿಸಲಾಗಿದೆ. ಇಂದಿಗೆ ರಾಜ್ಯದಲ್ಲಿ ಒಟ್ಟು 80 ಕೋವಿಡ್ ಪಾಸಿಟಿವ್ ಸಕ್ರಿಯ ಪ್ರಕರಣಗಳು ಕಂಡುಬಂದಿದ್ದು, ಬೆಂಗಳೂರಿನಲ್ಲೇ 73 ಪ್ರಕರಣಗಳಿವೆ. ಏಲ್ಲಿಯೂ ಕೋವಿಡ್ ನಿಂದಾಗಿ ಸಾವು ಸಂಭವಿಸಿಲ್ಲ. ಆರೋಗ್ಯ ಇಲಾಖೆ ಕೋವಿಡ್ ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಹತೋಟಿಗೆ ತರಲು ಕ್ರಮಗಳನ್ನ ಕೈಗೊಳ್ಳುತ್ತಿದೆ. ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲಿ ಎಂದು ನಾನು ಮನವಿ ಮಾಡುತ್ತೇನೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಸೂಚನೆ ನೀಡಿದ್ದಾರೆ.
ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾದ ಬೆನ್ನಲ್ಲೇ, ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಸಂಬಂಧ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ನಿನ್ನೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದರು.
ಈಗಾಗಲೇ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿಯನ್ನ ಹೊರಡಿಸಿದೆ. ಕೇಂದ್ರ ಸರ್ಕಾರದ ಜೊತೆ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಮಾನಿಟರ್ ಮಾಡುತ್ತಿದ್ದಾರೆ. ಮಕ್ಕಳಿಗೆ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಜ್ವರ, ಶೀತ ಕಂಡುಬಂದ ಮಕ್ಕಳನ್ನ ಶಾಲೆಗೆ ಕಳಿಸದಂತೆ ಪೊಷಕರು ಎಚ್ಚರಿಕೆ ವಹಿಸಬೇಕು. ಅಲ್ಲದೇ ಶಾಲಾ ಆಡಳಿತ ಮಂಡಳಿಯವರು ಕೂಡಾ, ಜ್ವರ ಬಂದ ಮಕ್ಕಳಿಗೆ ರಜೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಟೆಸ್ಟಿಂಗ್ ಕಿಟ್ ಗಳು ರಾಜ್ಯಾದ್ಯಂತ ಆಸ್ಪತ್ರೆಗಳಿಗೆ ವಿತರಿಸಲಾಗಿದೆ. 5 ಸಾವಿರ RTPCR ಟೆಸ್ಟಿಂಗ್ ಕಿಟ್ ಗಳನ್ನ ತೆಗೆದೊಳ್ಳಲಾಗಿದ್ದು ನಾಳೆಯೊಳಗೆ RTPCR ಟೆಸ್ಟಿಂಗ್ ಕಿಟ್ ಗಳು ಕೂಡಾ ತಲುಪಲಿವೆ. ಸದ್ಯಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಇರುವುದರಿಂದ VRDL ಟೆಸ್ಟಿಂಗ್ ಕೇಂದ್ರಗಳಲ್ಲಿ ಉಸಿರಾಟ, ಮತ್ತು ಹೃದಯ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಲಾಗುತ್ತಿದೆ.
ಮುನ್ನೆಚ್ಚರಿಕೆ ದೃಷ್ಟಿಯಿಂದ ರೆಮ್ಡಿಸೀವರ್ ಇಂಜೆಕ್ಷನ್ ಅನ್ನು ಖರೀದಿಸಲು ಸೂಚನೆ ನೀಡಲಾಗಿದೆ. ಇದು ಕೋವಿಡ್ ಒಮೆಕ್ರಾನ್ ಜೆ.ಎನ್ 1 ತಳಿಯಾಗಿದ್ದು, ಸೌಮ್ಯ ಸ್ವಭಾವದ ಲಕ್ಷಣಗಳನ್ನ ಹೊಂದಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡರು, ಗಂಭೀರವಾಗಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಲು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಪ್ರತೀ ವಾರಕ್ಕೊಮ್ಮೆ ತಂತ್ರಜ್ಞರ ಸಮಿತಿ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನ ನೀಡಲು ಸೂಚಿಸಲಾಗಿದೆ.
ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ, ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ತಿಳಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೋನಾ ಸಹಾಯವಾಣಿ ಪ್ರಾರಂಭ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
