ವಿದ್ಯಾಪ್ರಗತಿ ಶಿಕ್ಷಣ ಮೇಳದ ಉದ್ಘಾಟನೆಗೆ ಕ್ಷಣಗಣನೆ

ತುಮಕೂರು:

ಕಲ್ಪತರು ನಾಡಲ್ಲಿ ಪ್ರಜಾಪ್ರಗತಿ -ಪ್ರಗತಿ ಟಿವಿಯಿಂದ ಇಂದಿನಿಂದ 2 ದಿನಗಳ ಉಚಿತ ಶೈಕ್ಷಣಿಕ ಮೇಳ

ಒಂದೇ ಸೂರಿನಡಿ ಸಮಾವೇಶಗೊಳ್ಳುತ್ತಿವೆ ರಾಜ್ಯದ ಪ್ರತಿಷ್ಠಿತ ವಿವಿ, ಕಾಲೇಜುಗಳು

ಉನ್ನತ ಶಿಕ್ಷಣದ ಕನಸುಕಂಡಿರುವ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಬಹುಆಯ್ಕೆ ಅವಕಾಶಗಳನ್ನು ಪರಿಚಯಿಸುವ ಪ್ರಪ್ರಥಮ ಶಿಕ್ಷಣ ಮೇಳವನ್ನು ಪ್ರಜಾಪ್ರಗತಿ ಹಾಗೂ ಪ್ರಗತಿ ಟಿವಿಯಿಂದ ತುಮಕೂರು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಸಂಘಟಿಸಿದ್ದು, ವಿದ್ಯಾಪ್ರಗತಿ ಶಿಕ್ಷಣ ಮೇಳಕ್ಕೆ ಇಂದು ಬೆಳಿಗ್ಗೆ 10.30ಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.

ತುಮಕೂರು ಶೈಕ್ಷಣಿಕ ಇತಿಹಾಸದಲ್ಲೇ ಪ್ರಥಮವೆನಿಸಿದ ಈ ಶಿಕ್ಷಣ ಸಮಾವೇಶವನ್ನು ಆ್ಯಡ್ 6 ಸಂಸ್ಥೆ ಸಹಯೋಗದಲ್ಲಿ ಸಂಘಟಿಸುತ್ತಿದ್ದು ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್, ವೈದ್ಯಕೀಯ, ಅರೆವೈದ್ಯಕೀಯ, ಕಾನೂನು ಸೇರಿದಂತೆ ನಲವತ್ತಕ್ಕೂ ಅಧಿಕ ಕಾಲೇಜುಗಳು ಮಳಿಗೆಗಳನ್ನು ತೆರೆದು ಭಾಗವಹಿಸುತ್ತಿವೆ.

ಕರ್ನಾಟಕ ಸರಕಾರದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಮೇಳಕ್ಕೆ ಚಾಲನೆ ಕೊಡಲಿದ್ದು, ಸಾನಿಧ್ಯವನ್ನು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ರಾಮಯ್ಯ ವಿವಿ ಕುಲಸಚಿವ ಸಾಯಿರಾಂ ಪಾಲ್ಗೊಳ್ಳುವರು.ನಂತರ ಭಾನುವಾರ ಸಂಜೆಯ ತನಕ 9 ಅಧಿವೇಶನಗಳು ನಡೆಯಲಿದ್ದು, ಭಾನುವಾರ ಸಂಜೆ ಮೇಳಕ್ಕೆ ತೆರೆ ಬೀಳಲಿದೆ.

ಮೇಳದಲ್ಲಿ ಎಂಜಿನಿಯರಿಂಗ್, ಸಾಮಾನ್ಯ ಪದವಿ, ವೈದ್ಯಕೀಯ, ಅರೆ ವೈದ್ಯಕೀಯ. ಕಾನೂನು ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಹೊಂದಿರುವ ಕಾಲೇಜುಗಳ ಮೂಲ ಮುಂದಿನ ಉದ್ಯೋಗವಕಾಶಗಳ ಕುರಿತು ಉಪಯುಕ್ತ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಕ್ಷೇತ್ರದ ತಜ್ಞರು ಹಂಚಿಕೊಳ್ಳಲಿದ್ದಾರೆ.

ಅಂತೆಯೇ ನೀಟ್ ಮಾಹಿತಿ, ಕೆಸೆಟ್ –ಕಾಮೆಡ್ ಕೆ ಕುರಿತು ಮುಖಾಮುಖಿ ಚರ್ಚೆ, ಕೌಶಲ್ಯ ವೃದ್ಧಿ, ವಕೀಲಿ ವೃತ್ತಿ, ಪ್ರಸಕ್ತ ಶೈಕ್ಷಣಿಕ ಸ್ಥಿತಿಗತಿ ಹಾಗೂ ವಿವಿಧ ಬೋರ್ಡ್ ಪರೀಕ್ಷೆಗಳನ್ನು ಎದುರಿಸುವ ಕುರಿತು ಮಾಹಿತಿ ನೀಡಲಿದ್ದಾರೆ.

ಕೆಳಕಂಡ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬಹುದಾಗಿದೆ. ಮೊದಲು ನೋಂದಾವಣಿ ಮಾಡಿಕೊಂಡವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗೆ ಮೊ. 9008801859 ಅವರನ್ನು ಸಂಪರ್ಕಿಸಲು ಕೋರಿದೆ.

ಮೇಳದಲ್ಲಿ ಸ್ಥಳದಲ್ಲೇ ಸ್ಕಾಲರ್‍ಶಿಪ್
ಮೇಳದ ಎರಡು ದಿನಗಳು ಸ್ಥಳದಲ್ಲೇ ಸ್ಕಾಲರ್‍ಶಿಪ್ ಪರೀಕ್ಷೆ, ಸಾವಿರದಿಂದ, 50 ಸಾವಿರದವರೆಗೆ ವಿದ್ಯಾರ್ಥಿವೇತನಕ್ಕೆ ಭಾಜನರಾಗುವ ವಿಶೇಷ ಅವಕಾಶ.ಮೇಳದಲ್ಲಿ ನೋಂದಾಯಿಸಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಚಿತ ವಿಜ್ಞಾನ ಸೂತ್ರಗಳ ಕೈಪಿಡಿ ವಿತರಣೆ.

ವಿದ್ಯಾಪ್ರಗತಿ ಮೇಳದ ವೈಶಿಷ್ಟ್ಯಗಳು
* ಜಿಲ್ಲೆ, ರಾಜಧಾನಿಯ ಪ್ರತಿಷ್ಠಿತ ವಿವಿಗಳು ವಿದ್ಯಾಸಂಸ್ಥೆಗಳು ಭಾಗಿ.
*ಸು.30 ಸಾವಿರ ಚದರಡಿಯ ಹವಾನಿಯಂತ್ರಿತ ವಿಶಾಲ ಪ್ರಾಂಗಣದಲ್ಲಿ ಸುಸಜ್ಜಿತ ಜರ್ಮನ್ ಟೆಂಟ್‍ನಡಿ ತಲೆಎತ್ತಿರುವ 40ಕ್ಕೂ ಅಧಿಕ ಪ್ರದರ್ಶನ ಮಳಿಗೆಗಳು.
* ಪರೀಕ್ಷೆಯನ್ನು ನಿರಾಳವಾಗಿ ಎದುರಿಸುವ ಕುರಿತು ಟಿಪ್ಸ್.
* ಎಂಜಿನಿಯರಿಂಗ್ ಶಾಖೆ ಆಯ್ಕೆಯ ಅರಿವು
* ಕೆಸೆಟ್, ಕಾಮೆಡ್ ಕೆ ಕುರಿತು ಒನ್ ಟೂ ಒನ್ ಕೌನ್ಸಿಲಿಂಗ್
* ವಿವಿಧ ಕಾಲೇಜು ಪ್ರಾಂಶುಪಾಲರನ್ನು ಒಂದೇ ವೇದಿಕೆಯಡಿ ತಂದು ಸಮಾಲೋಚನೆ.
* ಶಿಕ್ಷಣ ಕ್ಷೇತ್ರದ ಪರಿಣಿತರಿಂದ ವಿಶೇಷ ಉಪನ್ಯಾಸ.
* ಪ್ರಮುಖವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರವೇಶಾತಿ ಬಗ್ಗೆ ಗೊಂದಲವಿದ್ದರೆ, ಕಾಲೇಜು ಆಯ್ಕೆಯ ಸೂಕ್ತ ವೇದಿಕೆ ವಿದ್ಯಾಪ್ರಗತಿ ಮೇಳ.

ಶಿಕ್ಷಣ ಮೇಳ ಪ್ರತೀ ವರ್ಷ ನಡೆಯಲಿ
ತುಮಕೂರಿನಲ್ಲಿ ಪ್ರಪ್ರಥಮ ಬಾರಿಗೆ ಪ್ರಜಾಪ್ರಗತಿ ಹಾಗೂ ಪ್ರಗತಿ ಟಿವಿಯವರು ಶಿಕ್ಷಣ ಮೇಳ ಆಯೋಜಿಸಿರುವುದು ಸ್ವಾಗತಾರ್ಹ ಸಂಗತಿ. ರಾಜ್ಯ, ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಭಾಗವಹಿಸುತ್ತಿರುವುದು ವಿಶೇಷವೆನಿಸಿದೆ.

ಜಿಲ್ಲೆಯ ವಿದ್ಯಾರ್ಥಿಗಳು ಒಂದೇ ವೇದಿಕೆಯಡಿ ತಮ್ಮ ಇಚ್ಚೆಯ ಕಾಲೇಜು, ಕೋರ್ಸ್‍ಗಳ ಮಾಹಿತಿ ಅರಿಯಲು ಈ ಮೇಳ ಸಹಕಾರಿಯಾಗಿದ್ದು, ಹೈಸ್ಕೂಲ್, ಕಾಲೇಜು ಹಂತದ ವಿದ್ಯಾರ್ಥಿಗಳು ಮೇಳಕ್ಕೆ ಭೇಟಿ ನೀಡಿ ಮಾಹಿತಿ ಅರಿಯಬೇಕು. ಸಂಪನ್ಮೂಲ ವ್ಯಕ್ತಿಗಳು ಹಂಚಿಕೊಳ್ಳುವ ಉಪಯುಕ್ತ ಮಾಹಿತಿಯನ್ನು ಗ್ರಹಿಸಬೇಕು. ಉಜ್ವಲ ಶೈಕ್ಷಣಿಕ ಭವಿಷ್ಯಕ್ಕೆ ದಾರಿದೀಪವೆನಿಸಿದ ವಿದ್ಯಾಪ್ರಗತಿ ಮೇಳೆ ಪ್ರತೀ ವರ್ಷ ಸಂಘಟಿತವಾಗಲಿ.

– ಡಾ.ಜಿ.ಪರಮೇಶ್ವರ, ಸಾಹೆ ಕುಲಾಧಿಪತಿ ಹಾಗೂ ಮಾಜಿ ಉಪಮುಖ್ಯಮಂತ್ರಿ.

ಕೋರ್ಸ್, ಕಾಂಬಿನೇಷನ್ ಆಯ್ಕೆಗೆ ಮೇಳ ಸೂಕ್ತ ವೇದಿಕೆ

ಪ್ರಜಾಪ್ರಗತಿ-ಪ್ರಗತಿ ಟಿವಿ ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿದ್ಯಾಪ್ರಗತಿ ಮೇಳ ಆಯೋಜಿಸಿದ್ದು, ಎಸ್ಸೆಸ್ಸೆಲ್ಸಿ ಪಿಯುಸಿ ವಿದ್ಯಾರ್ಥಿಗಳು ಮುಂದೆ ಯಾವ ಕಾಂಬಿನೇಷನ್, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು, ಯಾವ್ಯಾವ ಉದ್ಯೋಗವಕಾಶಗಳು ಸಿಗಲಿವೆ ಎಂಬುದನ್ನು ಅರಿಯಲು ಮೇಳ ಸಹಕಾರಿ ಎನಿಸಿದೆ.

ನಮ್ಮ ಸಪ್ತಗಿರಿ ಪಿಯು ಕಾಲೇಜು ಸಹ ಸ್ಟಾಲ್ ಹಾಕಲಿದ್ದು, ಕಾಲೇಜಿನ ಸಮಗ್ರ ಮಾಹಿತಿ ಅರಿಯಲು ವಿದ್ಯಾರ್ಥಿಗಳು ತಪ್ಪದೇ ಮೇಳದ ಸ್ಟಾಲ್‍ಗೆ ಭೇಟಿ ಕೊಡಿ.

-ಡಾ.ಎಚ್.ಎಸ್.ನಿರಂಜನರಾಧ್ಯ, ಪ್ರಾಂಶುಪಾಲರು, ಸಪ್ತಗಿರಿ ಪಿಯು ಕಾಲೇಜು. ತುಮಕೂರು.

ಪ್ರಗತಿ, ಅಭಿವೃದ್ಧಿಗೆ ಶಿಕ್ಷಣ ಅತೀ ಮುಖ್ಯ ಸಾಧನ

ಪ್ರಗತಿ ಮತ್ತು ಅಭಿವೃದ್ಧಿಗೆ ಶಿಕ್ಷಣ ಅತೀ ಮುಖ್ಯ ಸಾಧನ. ಶಿಕ್ಷಣ ಕ್ಷೇತ್ರದ ಹೊಸ ಆವಿಷ್ಕಾರಗಳು, ಶಿಕ್ಷಣ ಸಂಸ್ಥೆಗಳ ಕುರಿತು ಪ್ರತೀ ವಿದ್ಯಾರ್ಥಿಗಳು, ಪೋಷಕರು ಅರಿವು ಮೂಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಈ ಅರಿವಿನ ವೇದಿಕೆಯನ್ನು ವಿದ್ಯಾಪ್ರಗತಿ ಹೆಸರಿನಲ್ಲಿ ತುಮಕೂರಿನಲ್ಲಿ ಪ್ರಥಮ ಬಾರಿಗೆ ಪ್ರಜಾಪ್ರಗತಿ-ಪ್ರಗತಿ ಟಿವಿ ಸಂಘಟಿಸಿದ್ದು, ಬೆಂಗಳೂರಿನ ರಾಮಯ್ಯ ಅನ್ವಯಿಕ ವಿಜ್ಞಾನ ವಿವಿ ಸಹ ಶಾಖೆ ತೆರೆದು ವಿವಿಯ ಸೌಲಭ್ಯ ಕೋರ್ಸ್‍ಗಳ ಬಗ್ಗೆ ಮಾಹಿತಿ ನೀಡಲಿದೆ. ಇತರೆ ವಿವಿ ಕಾಲೇಜುಗಳ ಸೌಲಭ್ಯಗಳು, ಕೋರ್ಸ್‍ಗಳ ಕುರಿತು ಹೋಲಿಕೆ ಮಾಡಿ ತಿಳಿಯಲು ಈ ಮೇಳ ಉಪಯುಕ್ತವೆನಿಸಿದೆ.

-ಸಾಯಿಬಾಬಾ, ಕುಲಸಚಿವರು, ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ.

ಮಾ.5 ಶನಿವಾರ ಮೊದಲ ದಿನ
ಉದ್ಘಾಟನೆ ಬಳಿಕ ಕಾರ್ಯಗಾರದ ಮೊದಲ ಅಧಿವೇಶನ: ಬೆಳಿಗ್ಗೆ 11ರಿಂದ 12.
ವಿಷಯ: ಎಂಜನಿಯರಿಂಗ್ ವಿವಿಧ ಶಾಖೆಗಳ ಆಯ್ಕೆ ಮಾಹಿತಿ:
ಸಂಪನ್ಮೂಲ ವ್ಯಕ್ತಿ: ವಿಶೇಷ್ ಚಂದ್ರಶೇಖರ್, , ನಿರ್ದೇಶಕರು, ಆಚಾರ್ಯ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು.

2ನೇ ಅಧಿವೇಶನ: ಮಧ್ಯಾಹ್ನ 12 ರಿಂದ 1ರವರೆಗೆ
ವಿಷಯ: ಕೆ-ಸಿಇಟಿ ಕುರಿತು ಮಾಹಿತಿ ಮತ್ತು ಸಂವಾದ
ಸಂಪನ್ಮೂಲ ವ್ಯಕ್ತಿ: ನಾಗೇಂದ್ರ ಟಿ.ಸಿ. ಸಂಸ್ಥಾಪಕರು ಹಾಗೂ ಸಿಇಓ ಪ್ರಣವಸ್ಯ ಅಕಾಡೆಮಿ ತುಮಕೂರು.

3ನೇ ಅಧಿವೇಶನ: ಮಧ್ಯಾಹ್ನ 2 ರಿಂದ 3
ವಿಷಯ: ಕೌಶಲ್ಯವೃದ್ಧಿ ಕುರಿತು ಮಾಹಿತಿ
ಸಂಪನ್ಮೂಲ ವ್ಯಕ್ತಿ: ಕವಿತಾ ಎಸ್.ಗೌಡ, ಕಾರ್ಯನಿರ್ವಾಹಕ ನಿರ್ದೇಶಕಿ, ಕೌಶಲ್ಯ ಅಭಿವೃದ್ಧಿ ನಿಗಮ ಕರ್ನಾಟಕ.

4ನೇ ಅಧಿವೇಶನ: ಮಧ್ಯಾಹ್ನ 3.30 ರಿಂದ 4.30
ವಿಷಯ: ವೃತ್ತಿಯಾಗಿ ವಕೀಲಿಕೆ ಕುರಿತು ಚಿಂತನೆ
ಸಂಪನ್ಮೂಲ ವ್ಯಕ್ತಿ: ಕೆ. ಮಥಾಯ್, ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ನಿರ್ದೇಶಕರು ಸೌಂದರ್ಯ ಗ್ರೂಫ್ ಆಫ್ ಇನ್ಸಿಟ್ಯೂಷನ್ಸ್.

ಮಾ.6 ಭಾನುವಾರ ಮೇಳದ ಎರಡನೇ ದಿನ
ಮೊದಲ ಅಧಿವೇಶನ: ಬೆಳಿಗ್ಗೆ 10.30ರಿಂದ 11.30
ವಿಷಯ: ನೀಟ್ ಕುರಿತು ಸಮಗ್ರ ಮಾಹಿತಿ
ಸಂಪನ್ಮೂಲ ವ್ಯಕ್ತಿ: ಬ್ರಹ್ಮಯ್ಯ ಮನಂ, ಡೀನ್, ವಿಷನ್ ನೀಟ್ ಅಕಾಡೆಮಿ.
ಎರಡನೇ ಅಧಿವೇಶನ: ಬೆಳಿಗ್ಗೆ 11.30 ರಿಂದ 12ರವರೆಗೆ
ವಿಷಯ: ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕೆ ಮಾರ್ಗದರ್ಶನ.
ಸಂಪನ್ಮೂಲ ವ್ಯಕ್ತಿಗಳು: ಡಾ.ಶ್ರೀ.ಶ್ರೀ.ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ.
ಮುಖ್ಯಸ್ಥರು, ಶ್ರೀ ರಾಮಕೃಷ್ಣ-ವಿವೇಕಾನಂದಾಶ್ರಮ ತುಮಕೂರು.
ಮೂರನೇ ಅಧಿವೇಶನ: ಮಧ್ಯಾಹ್ನ 12ರಿಂದ 1ರವರೆಗೆ
ವಿಷಯ: ಮಾಧ್ಯಮಗಳಲ್ಲಿ ಉದ್ಯೋಗವಕಾಶ
ಸಂಪನ್ಮೂಲ ವ್ಯಕ್ತಿ: ಪ್ರೊ.ನಿರಂಜನ ವಾನಳ್ಳಿ
ಉಪ ಕುಲಪತಿಗಳು, ಬೆಂಗಳೂರು ಉತ್ತರ ವಿವಿ.
ನಾಲ್ಕನೇ ಅಧಿವೇಶನ: ಮಧ್ಯಾಹ್ನ 2.30ರಿಂದ 3.30ರವರೆಗೆ
ವಿಷಯ: ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹಾಗೂ ಸುಧಾರಣೆಗಳ ಕುರಿತು ಪ್ಯಾನಲ್ ಸಂವಾದ.
ಸಂವಾದಿಸುವವರು: ಡಾ.ಸುರೇಶ್ ಡಿ.ಎಸ್. ನಿರ್ದೇಶಕರು ಸಿಐಟಿ ತುಮಕೂರು.
ಡಾ.ಎಸ್.ಜಿ.ಗೋಪಾಲಕೃಷ್ಣ, ನಿರ್ದೇಶಕರು ನಾಗಾರ್ಜುನ್ ಸಮೂಹ ಸಂಸ್ಥೆಗಳು.
ಡಾ.ಸುಧೀರ್ ರಂಗನಾಥ್, ಸಹಾಯಕ ಪ್ರಾಧ್ಯಾಪಕರು, ಎಸ್‍ಐಟಿ ತುಮಕೂರು.
ಕೀರ್ತನ್ ಕುಮಾರ್, ಸಿಇಓ ಸೌಂದರ್ಯ ಸಮೂಹ ಸಂಸ್ಥೆಗಳು.
ಐದನೇ ಅಧಿವೇಶನ: ಮಧ್ಯಾಹ್ನ 3.30ರಿಂದ 4.30ರವರೆಗೆ
ವಿಷಯ: ಬೋರ್ಡ್ ಎಕ್ಸಾಂ ಎದುರಿಸುವ ಕುರಿತು ಸಲಹೆ.
ಸಂಪನ್ಮೂಲ ವ್ಯಕ್ತಿ: ಸಂಜಯ್ ಎಸ್.ಗೌಡ, ಶಿಕ್ಷಣ ತಜ್ಞರು, ಸಿರಾ.
ಸಮಾರೋಪ ಸಮಾರಂಭ: ಸಂಜೆ 4,30ಕ್ಕೆ
ಸಮಾರೋಪ ಭಾಷಣ: ಕೆ.ಎನ್.ರಾಜಣ್ಣ, ಮಾಜಿ ಶಾಸಕರು ಹಾಗೂ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ತುಮಕೂರು.
ಗೌರವ ಅತಿಥಿಗಳು ಹಾಗೂ ಸನ್ಮಾನಿತರು: ಕರ್ನಲ್ ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಪತಿಗಳು, ತುಮಕೂರು ವಿವಿ

ಅಧ್ಯಕ್ಷತೆ: ಎಸ್.ನಾಗಣ್ಣ , ಸಂಪಾದಕರು ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ಟಿವಿ.
ಮುಖ್ಯ ಅತಿಥಿಗಳು: ಆರ್.ರಾಜೇಂದ್ರ , ವಿಧಾನಪರಿಷತ್ ಸದಸ್ಯರು ತುಮಕೂರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap