ಮೂವರು ಶಂಕಿತ ಉಗ್ರರನ್ನು ಎನ್‌ಐಎ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ

ಬೆಂಗಳೂರು: 

  ಉಗ್ರ ನಾಸಿರ್‌ಗೆ ನೆರವು ನೀಡಿದ್ದ ಆರೋಪದಲ್ಲಿ ಬಂಧನವಾಗಿದ್ದ ಮೂವರು ಶಂಕಿತ ಉಗ್ರರನ್ನು ಐದು ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಅನೀಸ್ ಫಾತಿಮಾ, ಡಾ. ನಾಗರಾಜ್, ಹಾಗೂ ಎಎಸ್‌ಐ ಚಾನ್ ಪಾಷಾನನ್ನು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆಯ ಬಳಿಕ ಮೂವರು ಉಗ್ರರನ್ನು ಎನ್‌ಐಎ ಕಸ್ಟಡಿಗೆ ನೀಡಲಾಗಿದೆ.

   ರಾಜ್ಯದಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭರ್ಜರಿ ಕಾರ್ಯಾಚರಣೆ  ನಡೆಸಿ, ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ  ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ಮತ್ತು ನೆರವು ನೀಡಿದ ಆರೋಪದಡಿ ಮೂವರನ್ನು ಬಂಧಿಸಿತ್ತು. ತನಿಖೆಯ ವೇಳೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ನಾಸಿರ್ ಬೆಂಗಳೂರಲ್ಲಿ  ಕೂಡ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿಕೊಂಡಿದ್ದ ಎಂಬ ಸ್ಪೋಟಕ ಅಂಶ ಬಯಲಾಗಿತ್ತು. ಈತ ದಕ್ಷಿಣ ಭಾರತದ ಬಹುತೇಕ ಭಯೋತ್ಪಾದಕ ಬಾಂಬ್‌ ಸ್ಫೋಟಗಳ ಮಾಸ್ಟರ್ ಮೈಂಡ್ ಆಗಿದ್ದ.

   ಶಂಕಿತ ಉಗ್ರರ ವಿಚಾರಣೆಯಲ್ಲಿ ಸ್ಫೋಟಕ ಅಂಶ ಬಯಲಾಗಿದ್ದು ಜೈಲಿನಲ್ಲಿ ಇದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲಾನ್ ಮಾಡಲಾಗುತ್ತಿತ್ತು. ಭಯೋತ್ಪಾದನೆ ಬಗ್ಗೆ ಉಗ್ರ ನಾಸಿರ್ ಮೈಂಡ್ ವಾಷ್ ಮಾಡುತ್ತಿದ್ದ. ಮೈಂಡ್ ವಾಷ್ ಮಾಡುವುದರಲ್ಲಿ ನಾಸಿರ್ ಎತ್ತಿದ ಕೈ ಆಗಿದ್ದು, ಹಲವರನ್ನು ಉಗ್ರ ಚಟುವಟಿಕೆಗಾಗಿ ಬಳಸಿಕೊಂಡಿದ್ದಾನೆ. ಜೈಲಿನಲ್ಲಿದ್ದ ಯುವಕರ ತಂಡವನ್ನು ಕೂಡ ನಾಸಿರ್ ತಯಾರು ಮಾಡಿದ್ದ.

   ಅಲ್ಲದೇ ನಾಸಿರ್‌ನನ್ನು ಹಲವು ಬ್ಲಾಸ್ಟ್‌ಗಳ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಉಗ್ರ ನಾಸಿರ್ ದಕ್ಷಿಣ ಭಾರತದಲ್ಲಿನ ಹಲವು ಬ್ಲಾಸ್ಟ್‌ಗಳ ಮಾಸ್ಟರ್ ಮೈಂಡ್ ಎನ್ನಲಾಗಿದೆ. 2008ರ ಸರಣಿ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿದಂತೆ ಹಲವು ಬ್ಲಾಸ್ಟ್‌ಗಳ ಮಾಸ್ಟರ್ ಮೈಂಡ್ ನಾಸಿರ್ ಎಂದು ತಿಳಿದುಬಂದಿದೆ. ಎನ್ಐಎ ಅಧಿಕಾರಿಗಳು ಬಂಧಿತ ಉಗ್ರರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. 

  ರಾಜ್ಯದ ಕೋಲಾರ ಮತ್ತು ಬೆಂಗಳೂರು ನಗರ ಜಿಲ್ಲೆಯ ಐದು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್, ಉತ್ತರ ವಿಭಾಗದ ನಗರ ಶಶಸ್ತ್ರ ಮೀಸಲು ಪಡೆ ಎಎಸ್ಐ ಚಾಂದ್ ಪಾಷಾ ಮತ್ತು ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮದ್ ತಾಯಿ ಅನೀಸ್ ಫಾತಿಮಾ ಅವರನ್ನು ಬಂಧಿಸಲಾಗಿತ್ತು.

   ಬೆಂಗಳೂರಿನ ಜೈಲಿನಲ್ಲಿರುವ ಉಗ್ರರಿಗೆ ನೆರವು ನೀಡಿದ ಆರೋಪ ಹಿನ್ನೆಲೆ ಎನ್ಐಎ ಅಧಿಕಾರಿಗಳ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ವೈದ್ಯ ನಾಗರಾಜ್ ಕರ್ಮಕಾಂಡ ಬಯಲಾಗಿದೆ. ಸಹಾಯಕಿ ಪವಿತ್ರಳನ್ನು ಬಳಸಿಕೊಂಡು ಜೈಲಿಗೆ ಮೊಬೈಲ್‌ಗಳನ್ನು ಪೂರೈಕೆ ಮಾಡುತ್ತಿದ್ದ ಹಾಗೂ ಮೊಬೈಲ್ ಮಾರಾಟ ಮಾಡುತ್ತಿದ್ದ. 

   ಕೇವಲ 10 ಸಾವಿರದ ಮೊಬೈಲನ್ನು 50,000ಕ್ಕೆ ಮಾರಾಟ ಮಾಡುತ್ತಿದ್ದ ನಾಗರಾಜ್ ಶಂಕಿತ ಉಗ್ರರು, ಡ್ರಗ್ ಪೆಡ್ಲರ್ ಮತ್ತು ರೌಡಿಶೀಟರ್‌ಗಳಿಗೆ ಮೊಬೈಲ್ ಸಪ್ಲೈ ಮಾಡುತ್ತಿದ್ದ. ನೂರಾರು ಮಂದಿಗೆ ಹೀಗೆ ಮೊಬೈಲ್ ಸಪ್ಲೈ ಮಾಡಿದ್ದ ಎಂದು ತಿಳಿದು ಬಂದಿದೆ. ವೈದ್ಯಕೀಯ ಕೆಲಸ ಬಿಟ್ಟು ನಾಗರಾಜ್ ಮೊಬೈಲ್ ಮಾರಾಟ ಮಾಡುತ್ತಿದ್ದ. ಈ ಹಿಂದೆ ಸಿಸಿಬಿ ಅಧಿಕಾರಿಗಳು ಶಂಕಿತ ಉಗ್ರರ ಮನೆಯ ಮೇಲೆ ದಾಳಿ ಮಾಡಿದ್ದರು. ಸುಲ್ತಾನ್ ಪಾಳ್ಯ ಭದ್ರಪ್ಪ ಲೇಔಟ್‌ನಲ್ಲಿ ಸಿಸಿಬಿ ತಂಡ ದಾಳಿ ಮಾಡಿತ್ತು.

Recent Articles

spot_img

Related Stories

Share via
Copy link