ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಮತ್ತು ಸಿಎಂಗೆ ಕೋರ್ಟ್‌ ಸಮನ್ಸ್

ಬೆಂಗಳೂರು

     ರಾಹುಲ್ ಗಾಂಧಿ ವಿರುದ್ದ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಕೋರ್ಟ್​ ಸಮನ್ಸ್ ನೀಡಿದೆ. ಆಗಸ್ಟ್ 29ರಂದು ಖುದ್ದು ಹಾಜರಾಗುವಂತೆ ಸಿಎಂ, ಡಿಸಿಎಂಗೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ ಸಮನ್ಸ್ ಜಾರಿ ಮಾಡಿದೆ. ನ್ಯಾಷನಲ್​ ಹೆರಾಲ್ಡ್​ ಪತ್ರಿಕೆ ಹೆಸರಿನಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ರಾಹುಲ್​ ಗಾಂಧಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದರು. ಕಾನೂನುಬಾಹಿರವಾಗಿ ಪ್ರತಿಭಟನೆ ಮಾಡಿದ್ದಾರೆಂದು 2022ರಲ್ಲಿ ವಿಲ್ಸನ್​​​ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿತ್ತು.

     2022ರಲ್ಲಿ ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆಗೊಳಪಡಿಸಿರುವುದನ್ನು ಪ್ರತಿಭಟನೆ ಮಾಡಿದ್ದಕ್ಕೆ ಶಿವಾಜಿನಗರ ಹಾಗೂ ವಿಲ್ಸನ್ ಗಾರ್ಡ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಆದ್ರೆ, ಡಿಕೆ ಶಿವಕುಮಾರ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಕಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್​ ವಜಾಗೊಳಿಸಿತ್ತು. ಆದ್ರೆ, ಇದೀಗ ವಿಲ್ಸನ್ ಗಾರ್ಡನ್​ ಕೇಸ್​ನಲ್ಲಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಆಗಸ್ಟ್​ 29ರಂದು ಖುದ್ದು ಹಾಜರಾಗುವಂತೆ ಸಮನ್ಸ್​  ನೀಡಿದೆ. 

     ವಿಚಾರಣೆ ನೆಪದಲ್ಲಿ ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ವತಿಯಿಂದ 2022 ರ ಜೂ.16ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ವಿಲ್ಸನ್ ಗಾರ್ಡನ್​ ಮತ್ತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಶಿವಾಜಿನಗರ ಠಾಣೆಯ ಸಬ್ ಇನ್ಸ್​​ಪೆಕ್ಟರ್​​ ಅವರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಖಾಸಗಿ ದೂರು ದಾಖಲಿಸಿದ್ದರು.

    ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕೆಂದು ಕಡ್ಡಾಯಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಮಾಡಿದ್ದರು. ಈ ಆದೇಶ ಉಲ್ಲಂಘಿಸಿ ಡಿ.ಕೆ.ಶಿವಕುಮಾರ್ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಪ್ರತಿಭಟನೆ ನಡೆಸಿದ್ದರು. ಆ ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ. ಮತ್ತೊಂದೆಡೆ ಪ್ರತಿಭಟನೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಸಹ ಪಡೆದಿಲ್ಲ ಎಂದು 2022ರ ಜೂ.16ರಂದು ದಾಖಲಿಸಿದ ಖಾಸಗಿ ದೂರಿನಲ್ಲಿ ದೂರುದಾರರು ಆರೋಪಿಸಿದ್ದರು.

    ಪ್ರಕರಣ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ 42ನೇ ಎಸಿಎಂಎಂ ನ್ಯಾಯಾಲಯ, ಡಿ.ಕೆ.ಶಿವಕುಮಾರ್​ಗೆ​ ಸಮನ್ಸ್ ಜಾರಿ ಮಾಡಿತ್ತು. ಇನ್ನೊಂದೆಡೆ ಈ ಪ್ರಕರಣ ರದ್ದುಪಡಿಸಲು ಕೋರಿ ಡಿಕಿ ಶಿವಕುಮಾರ್ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್​ ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದ್ರೆ, ಇದೀಗ ವಿಲ್ಸನ್​ ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಕೋರ್ಟ್​, ಸಿಎಂ, ಡಿಸಿಎಂಗೆ ಸಮನ್ಸ್ ಜಾರಿ ಮಾಡಿದೆ.

Recent Articles

spot_img

Related Stories

Share via
Copy link
Powered by Social Snap