ಓಮ್ರಿಕಾನ್ ಆತಂಕದ ಮಧ್ಯೆ ಕೋವಿಡ್ ವ್ಯಾಕ್ಸಿನ್ ಅವಾಂತರ!

ತುಮಕೂರು:

 

2ನೇ ಡೋಜ್ ಪಡೆಯದವರಿಗೂ ವ್ಯಾಕ್ಸಿನ್ ಪೂರ್ಣಗೊಂಡಿದೆಯೆಂಬ ಸಂದೇಶ ಸತ್ತವರಿಗೂ ಮತ್ತೆ ವ್ಯಾಕ್ಸಿನ್
 ಜನರನ್ನು ಕಕ್ಕಾಬಿಕ್ಕಿಯಾಗಿಸಿರುವ ಕೋವಿನ್ ಪೋರ್ಟಲ್ ಸಂದೇಶಗಳು


ಕೊರೊನಾ ರೂಪಾಂತರಿ ವೈರಸ್ ಓಮ್ರಿಕಾನ್ ಆತಂಕ ರಾಜ್ಯದ ಜನರನ್ನು ಭಯಭೀತರನ್ನಾಗುಸುತ್ತಿರುವ ಬೆನ್ನಲ್ಲೇ, ಕೋವಿಡ್ ವ್ಯಾಕ್ಸಿನ್ ಅವಾಂತರ ಜಿಲ್ಲೆಯ ಜನರನ್ನು ದಂಗಾಗಿಸುವಂತೆ ಮಾಡಿದೆ.

ಕೋವಿಡ್ 2ನೇ ಡೋಜ್ ಲಸಿಕೆ ಪಡೆಯದಿದ್ದವರಿಗೂ ಈಗಾಗಲೇ ನಿಮಗೆ 2ನೇ ಡೋಜ್ ಲಸಿಕೆಯನ್ನು ಯಶಸ್ವಿಯಾಗಿ ಹಾಕಲಾಗಿದೆ ಎಂದು ಮೊಬೈಲ್ ಸಂದೇಶಗಳು ಹಲವರಿಗೆ ಬರತೊಡಗಿದ್ದು, ಈಗಾಗಲೇ ಎರಡು ಡೋಜ್ ಪಡೆದವರಿಗೂ, ಸತ್ತವರ ಮೊಬೈಲ್ ಸಂಖ್ಯೆಯೂ ಲಸಿಕೆ ಪೂರ್ಣ ಕುರಿತಾದ ಸಂದೇಶ ಬರುತ್ತಿರುವುದು ಜಿಲ್ಲೆಯ ಜನತೆಯನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದು, ಏನಿದು ಅವಾಂತರ ಎಂದು ಪ್ರಶ್ನಿಸುವಂತೆ ಮಾಡಿದೆ.


ವಿದ್ಯಾನಗರದ ನಿವಾಸಿಯಾದ ಕ್ಯಾಲೆಂಡರ್ ಶಿವಕುಮಾರ್ ಅವರ ಪತ್ನಿ ಲೀಲಾಕುಮಾರ್ ಅವರು ಹಿರಿಯ ನಾಗರಿಕರಾಗಿದ್ದು, ಅವರು 2021 ಏ.26ರಂದೇ ಎರಡನೇ ಡೋಜ್ ಲಸಿಕೆ ಪಡೆದು ಎರಡು ಡೋಜ್ ಪೂರ್ಣಗೊಳಿಸಿ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರವನ್ನು ಪಡೆದಿದ್ದರು. ಆದರೆ ನ.18ರಂದು ಅವರ ಮೊಬೈಲ್‍ಗೆ ಕೋವಿನ್ ಪೋರ್ಟಲ್‍ನಿಂದ ಸಂದೇಶವೊಂದು ಬಂದಿದ್ದು,  Dear leela kumar you have successfully been vaccinateed with your sec ond dose with covishield on 18-11-2021  ಎಂಬುದಾಗಿ ನಮೂದಿಸಲಾಗಿದ್ದು, ಮತ್ತೆ ಬಂದ ಹೊಸ ಸಂದೇಶ ಕಂಡು ಅಚ್ಚರಿಗೊಳಗಾಗಿದ್ದಾರೆ. ನನಗ್ಯಾವಾಗ ಮತ್ತೆ ವ್ಯಾಕ್ಸಿನ್ ಕೊಟ್ಟರು ಎಂದು ಗೊಂದಲಕ್ಕೀಡಾಗಿರುವ ಅವರು ಕೋವಿನ್ ಪೋರ್ಟಲ್‍ನ ಈ ಅವಾಂತರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇವರದ್ದು ಈರೀತಿಯ ಕಥೆಯಾದರೆ, ಇದೇ ವಿದ್ಯಾನಗರದ ವಾಸಿಯಾಗಿದ್ದ ಎನ್.ಗಾಯತ್ರಿದೇವಿ ಅವರು ಮರಣ ಹೊಂದಿ ಆರು ತಿಂಗಳೇ ಕಳೆದಿದ್ದು, ಅವರ ಮೊಬೈಲ್ ಸಂಖ್ಯೆಗೂ ನ.20ರಂದು ಮಧ್ಯಾಹ್ನ 3.32ರ ಸಮಯಕ್ಕೆ 2ನೇ ಡೋಜ್ ವ್ಯಾಕ್ಸಿನೇಶನ್ ಮಾಡಲಾಗಿದೆ ಎಂಬ ಸಂದೇಶ ಬಂದಿದ್ದು, ದೊಡ್ಡ ಪ್ರಮಾದವೇ ಸರಿ. ಮರಣವನ್ನಪ್ಪಿದವರಿಗೂ ಹೇಗೆ ವ್ಯಾಕ್ಸಿನ್ ಕೊಟ್ಟರು ಎಂದು ಅವರ ಕುಟುಂಬ ವರ್ಗದವರೇ ಪ್ರಶ್ನಿಸುತ್ತಿದ್ದು, ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನೇಕರು ಮೊದಲನೇ ಡೋಜ್ ಪಡೆದಿದ್ದು, ಎರಡನೇ ಡೋಜ್ ಇನ್ನೂ ಪಡೆದಿರುವುದಿಲ್ಲ. ಅಂತಹ ಅನೇಕ ವಿದ್ಯಾರ್ಥಿಗಳಿಗೂ ನಿಮಗೆ ಎರಡನೇ ಡೋಜ್ ಲಸಿಕೆ ಪೂರ್ಣಗೊಂಡಿದೆ ಎಂಬ ಸಂದೇಶಗಳು ರವಾನೆಯಾಗುತ್ತಿದ್ದು, ಇವೆಲ್ಲ ನೋಡಿದರೆ 2ನೇ ಡೋಜ್ ಗುರಿ ತಲುಪಲು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆಯೋ?ಅಥವಾ ಡೇಟಾ ಎಂಟ್ರಿ ಕಣ್ತಪ್ಪಿನಿಂದ ಆಗುತ್ತದೆಯೋ ಎಂಬ ಸಂದೇಹದ ಪ್ರಶ್ನೆಗಳನ್ನು ಪ್ರಜ್ಞಾವಂತರು ಕೇಳುವಂತೆ ಮಾಡಿದೆ.

ಪ್ರಗತಿ ತೋರಿಸಲೆಂದು ಈ ರೀತಿಯೇ? : ಕೋವಿಡ್ ಲಸಿಕೆಗೆ ಅರ್ಹತೆ ಹೊಂದಿರುವ 18 ವರ್ಷ ಮೇಲ್ಪಟ್ಟ 19.99 ಲಕ್ಷ ಜನರ ಪೈಕಿ ಮೊದಲನೇ ಡೋಜ್ ಲಸಿಕೆಯನ್ನು 18,14,116 ಮಂದಿಗೆ ಈವರೆಗೆ ನೀಡಲಾಗಿದೆ. ಎರಡನೇ ಡೋಜ್ ಲಸಿಕೆ ಪಡೆದವರು 12,60,755 ಮಂದಿಯಿದ್ದು, ಶೇ63ರಷ್ಟುಲಸಿಕಾ ಅಭಿಯಾನದಲ್ಲಿ ಪ್ರಗತಿಯಾಗಿದೆ. ಲಸಿಕಾ ಅಭಿಯಾನದ ಪ್ರಗತಿ ಪ್ರಮಾಣವನ್ನು ಹೆಚ್ಚಿಸಬೇಕು. ಎರಡು ಡೋಜ್ ಲಸಿಕೆ ಪಡೆಯುವುದು ಕಡ್ಡಾಯವಾಗಬೇಕು. ಯಾರು ಲಸಿಕೆ ಪಡೆಯುವುದಿಲ್ಲವೋ ಅಂತಹವರಿಗೆ ಸೌಲಭ್ಯ ಕಡಿತ ಮಾಡಬೇಕು ಎಂಬ ಚರ್ಚೆಗಳು ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಸಹ ಹಿಂದೆ ವ್ಯಕ್ತವಾಗಿದ್ದು, ಟಾರ್ಗೆಟ್ ಪೂರ್ಣಗೊಳಿಸಲು ಏನಾದರೂ 2ನೇ ಡೋಜ್ ಪಡೆಯದೇ ಇದ್ದವರಿಗೂ ಲಸಿಕೆ ಹಾಕಲಾಗಿದೆ ಎಂಬ ಸಂದೇಶ ರವಾನಿಸಲಾಗುತ್ತಿದೆಯೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಜೊತೆಗೆ 2ನೇ ಡೋಜ್ ಲಸಿಕೆ ಪಡೆಯದವರು ನಾವು ಲಸಿಕೆಯನ್ನೇ ಪಡೆದಿಲ್ಲ.ಈ ರೀತಿ ಲಸಿಕೆ ಪೂರ್ಣಗೊಂಡಿದೆಯೆಂಬ ಸಂದೇಶ ಬಂದಿರುವುದರಿಂದ ಮುಂದೆ ನಮಗೆ ಲಸಿಕೆ ಕೊಡುವುದಿಲ್ಲ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

ಉದ್ದೇಶಪೂರ್ವಕವಲ್ಲ, ಕಣ್ತಪ್ಪಿನಿಂದ ರವಾನೆಯಾಗಿರಬಹುದಷ್ಟೇ :ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಕೇಶವರಾಜ್ ಅವರನ್ನು ಈ ಸಮಸ್ಯೆಯ ಬಗ್ಗೆ ಕೇಳಿದಾಗ, ಅವಧಿ ಮೀರಿದ 2ನೇ ಡೋಜ್ ಲಸಿಕೆ ಪಡೆಯದವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅಂತಹವರ ಪಟ್ಟಿಯನ್ನು ಕೇಂದ್ರ ಕಚೇರಿ ರವಾನಿಸಿದ್ದು, ಅವರನ್ನು ಸಂಪರ್ಕಿಸಿ ಲಸಿಕೆ ಪೂರ್ಣಗೊಳಿಸುವ ಪ್ರಯತ್ನ ವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. 1ನೇ ಡೋಸ್ ಪಡೆದು ತಿಂಗಳಾನುಗಟ್ಟಲೆಯಿಂದ 2ನೇ ಡೋಜ್ ಪಡೆಯದಿರುವವರು, 2 ಡೋಜ್ ಪಡೆದವರು , ಲಸಿಕೆಯನ್ನೇ ಪಡೆಯವರು ಹೀಗೆ ವಿವಿಧ ವಿಭಾಗಗಳಾಗಿ ಪಟ್ಟಿಗಳನ್ನು ಮಾಡುತ್ತಿದ್ದು, ಈಪ್ರಕ್ರಿಯೆಯಲ್ಲಿ ಡೇಟಾ ಎಂಟ್ರಿ ಮಾಡುವವರ ಕಣ್ತಪ್ಪಿನಿಂದ ಕೆಲವರಿಗೆ ಈ ರೀತಿ ಸಂದೇಶ ಹೋಗಿರಬಹುದು. ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿಲ್ಲ. ಮಾಡುವುದು ಇಲ್ಲ ಎಂದು ಪ್ರತ್ರಿಕ್ರಿಯಿಸಿದ್ದಾರೆ.

ಒಟ್ಟಾರೆಯಾಗಿ ತಾಂತ್ರಿಕ ದೋಷವೋ, ಡೇಟಾ ಎಂಟ್ರಿಯಲ್ಲಿ ಆಗುತ್ತಿರುವ ಪ್ರಮಾದಗಳೋ ಅಥವಾ ಮತ್ತ್ಯಾವ ಕಾರಣಕ್ಕೋ ಗೊತ್ತಿಲ್ಲ. ಕೋವಿನ್ ಪೋರ್ಟಲ್‍ನಿಂದ ಬರುತ್ತಿರುವ ಸುಳ್ಳು ಸಂದೇಶಗಳು ಮಾತ್ರ ಜನರನ್ನು ಗೊಂದಲಕ್ಕೀಡುಮಾಡಿದೆ. ವ್ಯಾಕ್ಸಿನ್ ತೆಗೆದುಕೊಳ್ಳದೇ ಇರುವವರಿಗೆ ವ್ಯಾಕ್ಸಿನ್ ಪೂರ್ಣಗೊಂಡಿದೆಯೆಂಬ ಸಂದೇಶ ಕಂಡು ಮತ್ತೆ ವ್ಯಾಕ್ಸಿನ್ ಎಲ್ಲಿ ನಮಗೆ ಲಭ್ಯವಿಲ್ಲವೋ ಎಂಬ ಆತಂಕಕ್ಕೊಳಗಾಗಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಮಗ್ನರಾಗಿರುವ ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ನಾನು 2021 ಏ.26ರಂದೇ ಕೋವಿಡ್2ನೇ ಡೋಜ್ ಪಡೆದಿದ್ದು, ಅಂದೇ ಎರಡು ಡೋಜ್ ಸಹ ಪೂರ್ಣಗೊಂಡಿದೆ ಎಂಬ ಪ್ರಮಾಣ ಪತ್ರ ಸಹ ಪೋರ್ಟಲ್‍ನಿಂದ ಪಡೆದಿದ್ದೇನೆ. 6 ತಿಂಗಳ ತರುವಾಯ ಮತ್ತೆ ನ.18ರಂದು ನಿಮಗೆ 2ನೇ ಡೋಜ್ ಲಸಿಕೆ ಹಾಕಲಾಗಿದೆ ಎಂಬ ಸಂದೇಶ ಬಂದಿದ್ದು ಕಂಡು ನಿಜಕ್ಕೂ ದಿಗ್ಬ್ರಾಂಥಳಾಗಿದ್ದೇನೆ. ಏನಿದು ಅವಾಂತರ ಎಂಬುದೇ ತಿಳಿಯದಾಗಿದೆ.
                                                                                    -ಲೀಲಾಶಿವಕುಮಾರ್, ವಿದ್ಯಾನಗರವಾಸಿ.

ಸಾವಿರಾರು ಸಂಖ್ಯೆಯವರು 2ನೇಡೋಜ್ ಪಡೆದವರು, ಪಡೆದವರ ಪಟ್ಟಿ ಪರಿಷ್ಕರಣೆಯಲ್ಲಿ ಡೇಟಾ ಎಂಟ್ರಿ ಮಾಡುವವರ ಕಣ್ತಪ್ಪಿನಿಂದ ಕೆಲವರಿಗೆ ಇಂತಹ ಸಂದೇಶ ಹೋಗಿರಬಹುದು.ಉದ್ದೇಶಪೂರ್ವಕವಾಗಿ ಯಾರಿಗೂ ಇಂತಹ ಸಂದೇಶ ರವಾನೆಯಾಘಿಲ್ಲ. ಅರ್ಹರೆಲ್ಲರಿಗೂ ಲಸಿಕೆ ಕೊಡಬೇಕೆಂಬುದೇ ಸರಕಾರ,ಇಲಾಖೆ ಆಶಯ. ಒಂದುವೇಳೆ 2ನೇ ಡೋಜ್ ಪಡೆಯದವರಿಗೂ ಲಸಿಕೆ ಪೂರ್ಣಗೊಂಡಿದೆ ಎಂಬ ಸಂದೇಶ ಬಂದಿದ್ದರೆ, ಅಂತಹವರು ಹತ್ತಿರದ ಪಿಎಚ್‍ಸಿಕೇಂದ್ರ, ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕೆ ಪಡೆಯಬಹುದಾಗಿದೆ.

-ಡಾ.ಕೇಶವಪ್ರಸಾದ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ.

                                  ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link