ಕೋವಿಡ್-19 ಎರಡನೇ ಅಲೆ ತಡೆಗೆ ಮುಂಜಾಗ್ರತ ಕ್ರಮಗಳೇನು!!?

ತುಮಕೂರು: 

      ಕೋವಿಡ್-19 ಎರಡನೇ ಅಲೆ ಹೆಚ್ಚಿರುವ 9 ಜಿಲ್ಲೆಗಳಲ್ಲಿ ತುಮಕೂರು ಒಂದು. ವೇಗವಾಗಿ ಹರಡುತ್ತಿರುವ ಸೋಂಕು ತಡೆಗಟ್ಟಲು ಈಗಾಗಲೇ ಸರ್ಕಾರ ಪ್ರಥಮ ಹಂತದ ನಿರ್ಬಂಧ ಜಾರಿಗೊಳಿಸಿದ್ದಾಗಿದೆ. ಮೊದಲ ಹಂತವಾಗಿ 10 ದಿನಗಳ ನೈಟ್ ಕಫ್ರ್ಯೂ ಜಾರಿಯಲ್ಲಿದೆ. ಇದಾದ ನಂತರ ಮುಂದೇನು…? ಬಹಳ ಜನರು ಕೇಳುತ್ತಿರುವ ಪ್ರಶ್ನೆ ಇದು.

      ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಜೊತೆಗೆ ಪ್ರಮುಖ ರಾಜಕಾರಣಿಗಳೆಲ್ಲಾ ಆಸ್ಪತ್ರೆ ಸೇರುತ್ತಿದ್ದಾರೆ. ಇಡೀ ರಾಜ್ಯವನ್ನು ಎರಡನೇ ಅಲೆ ಬಾಧಿಸುತ್ತಿದ್ದು, ತುಮಕೂರು ಜಿಲ್ಲೆ ಹೆಚ್ಚು ಸೋಂಕಿತರನ್ನು ಒಳಗೊಳ್ಳುತ್ತಿರುವ ಖ್ಯಾತಿಯಲ್ಲಿದೆ. ಕ್ಷಿಪ್ರ ಗತಿಯಲ್ಲಿ ವ್ಯಾಪಿಸುತ್ತಿರುವ ಅಲೆಗೆ ಕಡಿವಾಣ ಹಾಕಲು ಸಾಕಷ್ಟು ಚಿಂತನೆಗಳು ನಡೆದಿವೆ. ಯಾವುದೇ ಸಂದರ್ಭದಲ್ಲಿ ಸರ್ಕಾರದಿಂದ ಹೊಸ ಮಾರ್ಗಸೂಚಿಗಳು ಘೋಷಣೆಯಾಗಬಹುದು. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಇದೇ ವಿಷಯ ಹೆಚ್ಚು ಚರ್ಚೆಯಲ್ಲಿದೆ. ದೃಶ್ಯ ಮಾಧ್ಯಮಗಳು ಇದನ್ನೇ ಬಿಂಬಿಸುತ್ತಿವೆ.

ಕಳೆದ ವರ್ಷ ಈ ಪರಿಸ್ಥಿತಿ ಇರಲಿಲ್ಲ :

      ತುಮಕೂರು ಜಿಲ್ಲೆಯ ಚಿತ್ರಣವನ್ನೇ ಅವಲೋಕಿಸಿದರೆ ಕಳೆದ ವರ್ಷ ಏಪ್ರಿಲ್ ತಿಂಗಳಿನ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಕೇವಲ 3 ಪಾಸಿಟಿವ್ ಪ್ರಕರಣಗಳು ಮಾತ್ರವೇ ಕಂಡುಬಂದಿದ್ದವು. ಒಂದು ಸಾವಾಗಿತ್ತು. ಈಗ ದಿನವೊಂದಕ್ಕೆ 500ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದ್ದು, ಈ ಸಂಖ್ಯೆ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಬಿಗಡಾಯಿಸುವುದಂತೂ ಸತ್ಯ. ಕಳೆದ ಬಾರಿ ಅರಿವು ಇರಲಿಲ್ಲ, ಭಯ ಇತ್ತು. ಈ ಬಾರಿ ಅರಿವು ಇದೆ, ಭಯ ಇಲ್ಲ. ಎರಡನೇ ಅಲೆ ಭೀಕರವಾಗಿದ್ದರೂ ಹಿಂದಿನ ಹೆದರಿಕೆ ಈಗ ಜನರಲ್ಲಿ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿರ್ಬಂಧಗಳು ಹೇರಿಕೆಯಾಗಬಹುದು ಅಥವಾ ಲಾಕ್‍ಡೌನ್ ಘೋಷಣೆಯಾಗಬಹುದು ಎಂಬ ವದಂತಿಗಳು ಸಾರ್ವಜನಿಕ ವಲಯದಲ್ಲಿ ಈಗಾಗಲೇ ಹರಿದಾಡುತ್ತಿವೆ. ಯಾವುದೇ ನಿರ್ಬಂಧಗಳನ್ನು ಹೇರುವ ಮುನ್ನ ಸರ್ಕಾರ/ ಆಡಳಿತ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳದೆ ಏಕಾಏಕಿ ನಿರ್ಬಂಧ ಹೇರಿದರೆ ಕಳೆದ ಬಾರಿ ಎದುರಾಗಿದ್ದ ಸ್ಥಿತಿಗಳೇ ಮತ್ತೆ ಮರುಕಳಿಸಬಹುದು.

ಮುಂಜಾಗ್ರತಾ ಕ್ರಮಗಳೇನು..?

      ಸಾರ್ವಜನಿಕರಿಗೆ ಸರ್ಕಾರ ಜಾರಿಗೊಳಿಸುವ ಕನಿಷ್ಠ ಮಾಹಿತಿಗಳು ಗೊತ್ತಾಗುವಂತಿರಬೇಕು. ಯಾವುದೇ ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸುವಾಗಲೂ ಅಗತ್ಯ ಸಿದ್ಧತೆಗಳಿಗೆ ಅವಕಾಶ ಮಾಡಿಕೊಡಬೇಕು. ಇಲ್ಲಿ ಮುಖ್ಯವಾಗಿ ಬೇಕಿರುವುದು ಆರೋಗ್ಯಕ್ಕೆ ಸಂಬಂಧಿಸಿದ ಪೂರಕ ವ್ಯವಸ್ಥೆ. ಜಿಲ್ಲಾಡಳಿತ ಇದನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಬೇಕು. ಎಲ್ಲ ಕಡೆ ಆರೋಗ್ಯ ಸೇವೆ ಸಿಗುವಂತಾಗಬೇಕು.

      ಆರೋಗ್ಯ ಸಿಬ್ಬಂದಿಗಳು ಹೆಚ್ಚಳವಾಗಬೇಕು. ಕೋವಿಡ್ ಮತ್ತು ನಾನ್ ಕೋವಿಡ್ ಪ್ರತ್ಯೇಕಿಸಿ ಅಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುವವರಿಗೆ ಸುರಕ್ಷತಾ ಕ್ರಮ ಹಾಗೂ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳು ಸದಾ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಔಷಧಿ ಮತ್ತು ಮಾತ್ರೆಗಳು ಸಿಗುವಂತಿರಬೇಕು. ಉದ್ದೇಶಪೂರ್ವಕವಾಗಿಯೇ ಕೆಲವೊಂದು ಔಷಧಗಳ ಕೊರತೆಯಾಗುವಂತೆ ಮಾಡುವ ವ್ಯವಸ್ಥಿತ ಜಾಲ ಇದ್ದು, ಈ ಬಗ್ಗೆಯೂ ನಿಗಾವಹಿಸಬೇಕು.

      ಕಳೆದ ಬಾರಿ ಕೊರೊನಾ ಸೋಂಕಿತರು ಹಾಗೂ ಇತರೆ ಕಾಯಿಲೆಗೆ ತುತ್ತಾದವರು ಅನುಭವಿಸಿದ ನರಳಾಟ ಅಷ್ಟಿಷ್ಟಲ್ಲ. ಹೀಗಾಗದಂತೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು ಮತ್ತು ಇಲಾಖೆಗಳೊಂದಿಗೆ ಪೂರ್ವಭಾವಿ ಸಭೆ ನಡೆಯಬೇಕು.

      ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಹಾಸಿಗೆಗಳ ಕೊರತೆಯ ಭೀಕರತೆ ಎದುರಾಗುವುದನ್ನು ಈಗಲೇ ಮನಗಾಣಬೇಕು. ಹೆಚ್ಚುವರಿ ವಾರ್ಡ್‍ಗಳ ಜೊತೆಗೆ ಸೋಂಕಿತರು ಹಾಗೂ ಇತರೆ ರೋಗಲಕ್ಷಣಗಳುಳ್ಳವರನ್ನು ಎಲ್ಲಿಗೆ ಕಳುಹಿಸಬೇಕು ಎಂಬ ಬಗ್ಗೆ ಒಂದು ನಕ್ಷೆ ತಯಾರಾಗಬೇಕು. ಕೋವಿಡ್ ಆರೈಕೆ ಕೇಂದ್ರಗಳನ್ನು ಗುರುತಿಸಿ ಸಿದ್ಧಪಡಿಸಿಕೊಳ್ಳಬೇಕು. ಇಂತಹ ಕೇಂದ್ರಗಳಿಗೆ ದಾಖಲಾಗುವವರಿಗೆ ವ್ಯವಸ್ಥೆ ಸರಿಯಾಗಿ ಸಿಗುವಂತೆ ಮಾಡಬೇಕು.

      ಪಾಸಿಟಿವ್ ಬಂದಿದೆ ಎಂದಾಕ್ಷಣ ಬಹಳಷ್ಟು ಜನ ಹೆದರುತ್ತಾರೆ. ಈ ಹೆದರಿಕೆಯನ್ನು ದೂರ ಮಾಡಬೇಕು. ಜ್ವರ, ಕೆಮ್ಮು ಮತ್ತು ನೆಗಡಿ ಯಾವಾಗಲೂ ಬರುವ ಸಾಮಾನ್ಯ ರೋಗಗಳು. ಪರೀಕ್ಷೆಯ ಆರಂಭದಲ್ಲಿಯೇ ಇದನ್ನು ಗುಣಪಡಿಸಿಕೊಳ್ಳಬಹುದು. ಒಂದು ವೇಳೆ ಕೊರೊನಾ ಇದೆ ಎಂದು ಗೊತ್ತಾದರೆ ಅಂತಹ ರೋಗಿಗಳು ಹೇಗೆ –ಯಾವ ಚಿಕಿತ್ಸೆ ಪಡೆಯಬೇಕು ಎಂಬುದನ್ನು ತಿಳಿಯಪಡಿಸಬೇಕು. ಶ್ವಾಸಕೋಶದ ತೊಂದರೆ, ಉಸಿರಾಟದ ತೊಂದರೆ ಇತ್ಯಾದಿ ಇರುವ ಕೋವಿಡ್ ರೋಗಿಗಳನ್ನಷ್ಟೇ ಕೋವಿಡ್ ಆಸ್ಪತ್ರೆಗೆ ದಾಖಲಿಸುವ, ಲಕ್ಷಣ ಇರುವವರನ್ನು ಕೇರ್ ಸೆಂಟರ್‍ಗಳಲ್ಲಿ ಆರೈಕೆ ಮಾಡುವ ವ್ಯವಸ್ಥೆಗಳ ಬಗ್ಗೆ ಹೆಚ್ಚು ಹೆಚ್ಚು ಕ್ರಮಗಳನ್ನು ಕೈಗೊಳ್ಳಬೇಕು.

ಟೆಸ್ಟ್-ಚಿಕಿತ್ಸೆ-ಲಸಿಕೆ ಮಾಹಿತಿ :

      ಕೊರೊನಾ ಪಾಸಿಟಿವ್ ಎಂದಾಕ್ಷಣ ಆಂಬುಲೆನ್ಸ್‍ನಲ್ಲಿ ಎತ್ತಿ ಹಾಕಿಕೊಂಡು ಕೋವಿಡ್ ಆಸ್ಪತ್ರೆಗೆ ದೂಡುತ್ತಿದ್ದ ಆ ದಿನಗಳ ಭಯಾನಕತೆ ಈಗ ಇಲ್ಲದಿರಬಹುದು. ಆದರೆ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಕೆ ಇದೆ. ಜ್ವರ-ನೆಗಡಿ ಇದ್ದರೆ ಸಾಕು ಕೋವಿಡ್ ಎನ್ನುತ್ತಾರೆ ಎಂಬ ಸಾರ್ವತ್ರಿಕ ಭಯವನ್ನು ನಿವಾರಿಸಬೇಕು.

      ಪರೀಕ್ಷೆಯನ್ನು ಎಲ್ಲಿ ಮಾಡಿಸಿಕೊಳ್ಳಬೇಕು, ಒಂದು ವೇಳೆ ಕೋವಿಡ್ ದೃಢಪಟ್ಟರೆ ಮುಂದಿನ ಪ್ರಕ್ರಿಯೆಗಳೇನು..?, ಮನೆಯಲ್ಲಿಯೇ ಐಸೊಲೇಷನ್ ಇರಬಹುದಾದರೆ ಅದಕ್ಕೆ ವ್ಯವಸ್ಥೆ ಏನು..?, ಚಿಕಿತ್ಸೆ ಏನು..? ಎಷ್ಟು ದಿನಗಳ ಕಾಲ ಇರಬೇಕು ಇತ್ಯಾದಿ ಸಂಪೂರ್ಣ ಮಾಹಿತಿಗಳು ತಿಳಿಯಬೇಕು. ಇದರ ಜೊತೆಗೆ ಈಗ ನೀಡಲಾಗುತ್ತಿರುವ ಲಸಿಕೆಯ ಮಾಹಿತಿ ಹಾಗೂ ಲಭ್ಯತೆ ಹೆಚ್ಚಾಗಬೇಕು. ಕೊರೊನಾ ಪರೀಕ್ಷೆಗೆ ಒಳಗಾಗುವವರ ಫಲಿತಾಂಶ 24 ಗಂಟೆಯೊಳಗೆ ಸಿಗುವಂತೆ ನೋಡಿಕೊಳ್ಳಬೇಕು.

      ಕೋವಿಡ್ ದೃಢಪಟ್ಟ ವ್ಯಕ್ತಿಗಳ ಪ್ರದೇಶ ಹಾಗೂ ಮನೆಯನ್ನು ಸೀಲ್‍ಡೌನ್ ಮಾಡುವ ವ್ಯವಸ್ಥೆ ಈಗ ಇಲ್ಲ. ಆದರೆ ಸೋಂಕಿತರು ಮತ್ತು ಆತನ ಸಂಪರ್ಕಿತರನ್ನು ಪತ್ತೆ ಹಚ್ಚುವುದರಲ್ಲಿ ಹಿಂದೆ ಬೀಳಬಾರದು. ಸೋಂಕಿತರು ಸಾರ್ವಜನಿಕವಾಗಿ ಓಡಾಡದಂತೆ ಕ್ರಮ ವಹಿಸಬೇಕು. ಸಂಪರ್ಕಿತರು ಟೆಸ್ಟ್‍ಗೆ ಕಡ್ಡಾಯವಾಗಿ ಒಳಗೊಳ್ಳುವಂತೆ ಮಾಡಬೇಕು.

ಕೂಲಿ ಕಾರ್ಮಿಕರು:

      ಕಳೆದ ಬಾರಿ ಲಾಕ್‍ಡೌನ್ ಘೋಷಣೆಯಾದಾಗ ಇಲ್ಲಿನ ಬಹಳಷ್ಟು ಮಂದಿ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಆದರು. ಮುಖ್ಯವಾಗಿ ಸ್ಮಾರ್ಟ್‍ಸಿಟಿ ಕಾಮಗಾರಿಗಳಲ್ಲಿ ತೊಡಗಿದ್ದ ಉತ್ತರ ಕರ್ನಾಟಕ ಹಾಗೂ ಬಿಹಾರದ ಕಡೆಯ ಕೂಲಿಕಾರ್ಮಿಕರು ಒಬ್ಬೊಬ್ಬರಾಗಿ ಇಲ್ಲಿಂದ ಕಾಲ್ಕಿತ್ತರು. ಆಗ ಹೋಗಿದ್ದ ಕೂಲಿ ಕಾರ್ಮಿಕರಲ್ಲಿ ಬಹಳಷ್ಟು ಜನ ಇನ್ನೂ ವಾಪಸ್ ಆಗಿಲ್ಲ. ಸ್ಮಾರ್ಟ್‍ಸಿಟಿ ಕಾಮಗಾರಿ ಮಾತ್ರವಲ್ಲ, ಇಲ್ಲಿ ನಡೆಯುತ್ತಿರುವ ವಿವಿಧ ಕಟ್ಟಡ ಕಾಮಗಾರಿ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದ, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅನೇಕರು ಊರಿಗೆ ಹೋಗಿ ವಾಪಸ್ ಮರಳಿದ್ದಾರೆ. ಹೀಗೆ ಮರಳಿರುವವರು ಮತ್ತೆ ಹೋಗದಂತೆ ನೋಡಿಕೊಳ್ಳಬೇಕು.

     ತುಮಕೂರು ಜಿಲ್ಲೆಯಲ್ಲಿ ಸುಮಾರು 27 ಲಕ್ಷ ಜನರಿದ್ದು, ಇವರಲ್ಲಿ 6 ಲಕ್ಷ ಕೂಲಿ ಕಾರ್ಮಿಕರಿದ್ದಾರೆಂಬುದು ಅಂದಾಜು. ಬಿಗಿ ನಿಯಮಗಳನ್ನು ಜಾರಿಗೊಳಿಸಿದ್ದೇ ಆದಲ್ಲಿ, ಕೆಲಸ ಕಾರ್ಯಗಳು ಸ್ಥಗಿತಗೊಂಡು ಇವರೆಲ್ಲ ಪರದಾಡಬೇಕಾಗುತ್ತದೆ. ಇಂತಹವರು ಹೇಗೆ ಜೀವನ ನಡೆಸಬೇಕು ಎಂಬ ಬಗ್ಗೆ ಚಿಂತಿಸಬೇಕು. ಕಳೆದ ಬಾರಿ ಸಹೃದಯರು ತಿಂಗಳಾನುಗಟ್ಟಲೆ ಆಹಾರ ನೀಡಿದ್ದರು. ಕಿಟ್ ವಿತರಿಸಿದ್ದರು. ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗದೆ ಇರಬಹುದು. ಹಾಗಾದರೆ ಸರ್ಕಾರದ ಪಾತ್ರ ಮತ್ತು ಕ್ರಮಗಳೇನು?

ಬೀದಿಬದಿ ವ್ಯಾಪಾರಿಗಳು:

      ಇವರೆಲ್ಲ ದೈನಂದಿನ ವ್ಯವಹಾರವನ್ನೇ ನಂಬಿಕೊಂಡಿರುತ್ತಾರೆ. ಕೂಲಿ ಕಾರ್ಮಿಕರಂತೆಯೇ ಬೀದಿಬದಿ ವ್ಯಾಪಾರಿಗಳನ್ನು ನೋಡಬೇಕಿದೆ. ಸತತವಾಗಿ ವ್ಯಾಪಾರ ವಹಿವಾಟು ಸ್ತಬ್ದವಾದರೆ ಇವರ ಬದುಕಿಗೆ ದಾರಿ ಏನು? ಇವೆಲ್ಲವೂ ಯೋಚಿಸಬೇಕಾದ ವಿಷಯಗಳು.

ಹೋಟೆಲ್ ಉದ್ಯಮ:

      ಈ ಉದ್ಯಮವಂತೂ ಎಕ್ಕುಟ್ಟಿ ಹೋಗಿದೆ. ಒಂದು ವರ್ಷವಾದರೂ ಚೇತರಿಕೆ ಕಾಣದ ಹೋಟೆಲ್‍ಗಳಿವೆ. ದೊಡ್ಡ ಹೋಟೆಲ್‍ಗಳಿಂದ ಹಿಡಿದು ಸಣ್ಣ ಹೋಟೆಲ್‍ಗಳ ತನಕ ಕೊರೊನಾ ಸಾಕಷ್ಟು ಹೊಡೆತ ನೀಡಿದೆ. ಕ್ರಮೇಣ ಈ ಉದ್ಯಮ ಚೇತರಿಕೆ ಕಂಡಿದ್ದು, ಈಗ ತಾನೇ ಕಣ್ಣು ಬಿಡುವಂತಾಗಿದೆ. ಮತ್ತೆ ಪ್ರಹಾರ ನಡೆದರೆ ಇವರ ಅಳಿವು-ಉಳಿವಿನ ಪ್ರಶ್ನೆಯಾಗುತ್ತದೆ. ಮಾಲೀಕನಿಗೆ ಕಟ್ಟಡ ಬಾಡಿಗೆ ಇತ್ಯಾದಿ ಪಾವತಿಸುವ ಸಮಸ್ಯೆಗಳಾದರೆ ಅಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ನೌಕರರು ಬೀದಿಗೆ ಬೀಳುತ್ತಾರೆ.

      ಹೊರಗಿನ ಊಟ, ತಿಂಡಿಯನ್ನೇ ನಂಬಿ ಬದುಕುವ ಬಹಳಷ್ಟು ಜನರಿದ್ದಾರೆ. ಹಲವು ಉದ್ಯೋಗಿಗಳು ಅವಿವಾಹಿತರು. ಇನ್ನು ಕೆಲವು ವಿವಾಹಿತರಿದ್ದರೂ ಹೆಂಡತಿ ಮಕ್ಕಳು ಗ್ರಾಮಗಳಲ್ಲಿ ಇರುತ್ತಾರೆ. ಹೀಗೆ ನಗರಗಳಲ್ಲಿ ಕೆಲಸ ಮಾಡುವ ಉದ್ಯೋಗಸ್ಥರು ಹಲವು ಕಾರಣಗಳಿಂದ ಹೋಟೆಲ್ ಊಟ, ತಿಂಡಿಯನ್ನೇ ನಂಬಿಕೊಂಡಿರುತ್ತಾರೆ. ಇವುಗಳು ಬಂದ್ ಆದರೆ ಬಹಳಷ್ಟು ಜನ ಸಂಕಟಕ್ಕೆ ಸಿಲುಕಬೇಕಾಗುತ್ತದೆ. ಹೋಟೆಲ್ ಉದ್ಯಮವನ್ನು ಅವಲಂಬಿಸಿರುವ, ರೋಗರುಜಿನಗಳಿಂದ ಮನೆಯಲ್ಲೇ ಇರುವ ಮಂದಿ ಊಟೋಪಚಾರಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಪರ್ಯಾಲೋಚನೆ ಕ್ರಮಗಳು ಅನಿವಾರ್ಯ.

     ಆಟೋರಿಕ್ಷಾ ಓಡಿಸುವವರು :

     ಅನೇಕ ಯುವಕರು ಪಟ್ಟಣಕ್ಕೆ ಬಂದು ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಬಾಡಿಗೆಗೆ ಪಡೆದು ಆಟೋ ಓಡಿಸುತ್ತಿರುವವರ ಸ್ಥಿತಿಯಂತೂ ಹೇಳತೀರದು. ಆಟೋ ಓಡಿಸಿ ಬಂದ ಹಣದಿಂದಲೇ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವುದು, ಸಾಲ ಪಡೆದು ತಂದಿರುವ ಆಟೋದವರು ಕಂತನ್ನು ಕಟ್ಟುವುದು ಹೀಗೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರ ಪರಿಸ್ಥಿತಿ ಏನು ?

ಅಂಗಡಿ ಮಾಲೀಕರು :

      ಸಾಲ ಮಾಡಿ ಅಂಗಡಿಯನ್ನಿಟ್ಟು ಜೀವನ ಸಾಗಿಸುತಿರುವ ಹಲವು ಮಂದಿ ಇದ್ದಾರೆ ಜನರು ಬಂದರೆ ಮಾತ್ರ ವ್ಯಾಪಾರ. ಈ ಒಂದು ವರ್ಷದ ಅವಧಿಯಲ್ಲಿ ಕೆಲವರಿಗೆ ಅಂಗಡಿ ಬಾಡಿಗೆ ಹುಟ್ಟಿದರೆ ಸಾಕು ಎನ್ನುವಂತಹ ಪರಿಸ್ಥಿತಿ. ಜನರ ಬಳಿ ಹಣವಿಲ್ಲ, ಅಂಗಡಿಗಳಿಗೆ ನಿರೀಕ್ಷಿತ ಆದಾಯವಿಲ್ಲ. ಬಾಡಿಗೆ ಕಟ್ಟದಿದ್ದರೆ ಅಂಗಡಿ ಖಾಲಿ ಮಾಡಿ ಎನ್ನುವವರೇ ಹೆಚ್ಚು. ಮತ್ತೆ ಮತ್ತೆ ಸಂಕಷ್ಟಗಳು ಎದುರಾದರೆ ಇಂತಹ ವರ್ಗ ಬದುಕುವುದಾದರೂ ಹೇಗೆ ?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap