ಐವರು ವಿದ್ಯಾರ್ಥಿಗಳಿಗೆ ಕೋವಿಡ್​​ ಬಂದ್ರೂ ಸ್ಕೂಲ್​​ ಕ್ಲೋಸ್​..​ ಏನಿದು ಹೊಸ ರೂಲ್ಸ್​?

          ಕೊರೊನಾ ರಜೆಯಲ್ಲಿರೋ ಮಕ್ಕಳೆಲ್ಲ ಸ್ಕೂಲ್ ಬ್ಯಾಗ್ ರೆಡಿ ಮಾಡ್ಕೊಳ್ಳಿ. ವೀಕೆಂಡ್ ಕರ್ಫ್ಯೂ ಕಡಿವಾಣ ತೆರವುಗೊಳಿಸಿರೋ ಸರ್ಕಾರ ಶಾಲಾ-ಕಾಲೇಜುಗಳ ಆರಂಭಕ್ಕೂ ಹಸಿರು ನಿಶಾನೆ ತೋರಿದೆ. ಆದರೆ ಬೆಂಗಳೂರಿನ ಶಾಲೆಗಳ ಬಾಗಿಲು ಮಾತ್ರ ಜನವರಿ 29ರವರೆಗೂ ಕ್ಲೋಸ್ ಆಗಿರಲಿದೆ.

        ರಾಜ್ಯದಲ್ಲಿ ಕೊರೊನಾ ತೀವ್ರವಾಗುತ್ತಿದ್ದಂತೆ ಬೆಂಗಳೂರು ಮತ್ತು ಸೋಂಕು ಹೆಚ್ಚಿರುವ ಮೈಸೂರು, ಶಿವಮೊಗ್ಗ ಸೇರಿದಂತೆ ಕೆಲವು ಮಹಾನಗರಗಳಲ್ಲಿ ಶಾಲೆ-ಕಾಲೇಜುಗಳಿಗೆ ಬೀಗಬಿದ್ದಿತ್ತು. ಆದರೆ ಪುನಃ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ನೀನ್ ಸಿಗ್ನಲ್ ನೀಡಿದೆ.

ಬೆಂಗಳೂರಲ್ಲಿ ಜ.29ರವರೆಗೂ ಶಾಲೆಗಳು ಕ್ಲೋಸ್​

ಬೆಂಗಳೂರು ಹೊರತುಪಡಿಸಿ ಶಾಲೆ ಬಂದ್‌ ಆಗಿದ್ದ ಮಹಾನಗರಗಳಲ್ಲಿ ಪುನಾರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ನಿನ್ನೆ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಶಾಲೆಗಳ ಭವಿಷ್ಯದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಸೋಂಕು ಹೆಚ್ಚಿರುವ ಕಾರಣ ಬೆಂಗಳೂರಲ್ಲಿ ಜನವರಿ 29ರವರೆಗೂ ಶಾಲೆಗಳು ಕ್ಲೋಸ್ ಆಗಿರಲಿದ್ದು, 29ರ ನಂತರ ಶಾಲೆ ಆರಂಭದ ಬಗ್ಗೆ ತೀರ್ಮಾನಿಸಲಾಗುತ್ತೆ ಎಂದಿದ್ದಾರೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್.

‘ಬೆಂಗಳೂರಲ್ಲಿ 29ರವರೆಗೂ ಶಾಲೆ ಬಂದ್​’

6 ರಿಂದ 15 ವರ್ಷದ ಮಕ್ಕಳಲ್ಲಿ ಪಾಸಿಟಿವಿಟಿ ದರ ಕಡಿಮೆಯಿರೋದ್ರಿಂದ ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧೆಡೆ ಶಾಲೆ ಆರಂಭಕ್ಕೆ ಅನುಮತಿ ನೀಡಿರುವ ಸರ್ಕಾರ ಕೆಲವೊಂದು ಷರತ್ತು ವಿಧಿಸಿದೆ. ಸೋಂಕು ಹೆಚ್ಚಾದ್ರೆ ಶಾಲೆ ಬಂದ್​ ಮಾಡುವ ಬಗ್ಗೆ ನಿಯಮಾವಳಿಗಳನ್ನು ರೂಪಿಸಿದೆ.

ಕೇಸ್​ ಹೆಚ್ಚಾದ್ರೆ ಶಾಲೆ ಕ್ಲೋಸ್

ಬೆಂಗಳೂರು ಹೊರತುಪಡಿಸಿ ಬೇರೆಡೆ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿರುವ ಸರ್ಕಾರ ಸೋಂಕು ಹೆಚ್ಚಾದ್ರೆ ಮಾತ್ರ ಶಾಲೆಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಹೆಚ್ಚಿನ ಕೊರೊನಾ ಕೇಸ್​ಗಳು ಕಂಡುಬಂದ್ರೆ 7 ದಿನ, ಕಡಿಮೆ ಕೇಸ್​ಗಳು ಕಂಡುಬಂದ್ರೆ 3 ದಿನ ಶಾಲೆ ಕ್ಲೋಸ್​ ಮಾಡುವಂತೆ ಹೇಳಿದೆ. ಸ್ಥಳೀಯ ಬಿಇಒ, ಎಸಿ, ತಹಶೀಲ್ದಾರ್ ಹಾಗೂ ಟಿಹೆಚ್​ಓ ಶಾಲೆ ಕ್ಲೋಸ್ ಬಗ್ಗೆ ನಿರ್ಧರಿಸಬೇಕು ಅಂತ ಸೂಚಿಸಿದೆ ಎಂದರು ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಕೊರೊನಾ ಕಾಟ ಆರಂಭವಾದ ದಿನದಿಂದಲೂ ಮಕ್ಕಳ ಶೈಕ್ಷಣಿಕ ಜೀವನ ಹಳ್ಳಿ ತಪ್ಪಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಮತ್ತೆ ಶಾಲೆಗಳ ಬಾಗಿಲು ತೆರೆಯಲು ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಪೋಷಕರ ಪ್ರತಿಕ್ರಿಯೆ ಹೇಗಿರಲಿದೆ. ಸೋಂಕಿನ ಸಂಕಷ್ಟ ತೀವ್ರವಾಗಿರೋ ಹೊತ್ತಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ