ಜ.25-ರಾಜಧಾನಿಗೆ ಓಮಿಕ್ರಾನ್ ಗಂಡಾಂತರ ಎದುರಾಗಿದೆ. ಇಡೀ ರಾಜ್ಯದಲ್ಲಿ ಇದುವರೆಗೂ ಕೇವಲ 931 ಮಂದಿ ಓಮಿಕ್ರಾನ್ ಸೋಂಕಿತರಿದ್ದಾರೆ ಎಂದೇ ಅಂದಾಜಿಸಲಾಗಿತ್ತು.
ಆದರೆ, ಒಂದು ಅಂದಾಜಿನ ಪ್ರಕಾರ ಬೆಂಗಳೂರು ಒಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ ಇವರಲ್ಲಿ ಶೇ.90 ರಷ್ಟು ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ ಎಂಬ ಅಂಶ ಇದೀಗ ಬಯಲಾಗಿದೆ.
ನಗರದಲ್ಲಿ ಪ್ರತಿನಿತ್ಯ 300ಕ್ಕೂ ಹೆಚ್ಚು ಮಂದಿಯ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್‍ಗೆ ರವಾನಿಸಲಾಗುತ್ತಿದೆ. ಇದುವರೆಗೂ ಜಿನೋಮಿಕ್ ಸೀಕ್ವೆನ್ಸಿಂಗ್‍ಗೆ ಕಳುಹಿಸಲಾಗಿದ್ದ ವರದಿ ಬಿಬಿಎಂಪಿ ಕೈ ಸೇರಿದ್ದು, ಪರೀಕ್ಷೆಗೆ ರವಾನಿಸಲಾಗಿದ್ದ ಶೇ.90 ಸ್ಯಾಂಪಲ್‍ನಲ್ಲಿ ಓಮಿಕ್ರಾನ್ ಸೋಂಕಿತರಿರುವುದು ದೃಢಪಟ್ಟಿದೆ.
ಎರಡನೆ ಅಲೆ ಸಂದರ್ಭದಲ್ಲಿ ಪರೀಕ್ಷೆಗೆ ರವಾನಿಸಲಾಗಿದ್ದ ಸ್ಯಾಂಪಲ್‍ಗಳಲ್ಲಿ ಬಹುತೇಕ ಪ್ರಕರಣಗಳು ಡೆಲ್ಟಾ ಮಾದರಿಯಾಗಿತ್ತು. ಇದೀಗ ಮೂರನೆ ಅಲೆ ಸಂದರ್ಭದಲ್ಲಿ ಪರೀಕ್ಷೆಗೆ ರವಾನಿಸಲಾಗಿರುವ ಮಾದರಿಗಳಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಿರುವುದು ಸಾಬೀತಾಗಿದೆ.
ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ 1,27,008 ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ ಶೇ.90 ರಷ್ಟು ಮಂದಿ ಓಮಿಕ್ರಾನ್ ಸೋಂಕಿರುವ ಸಾಧ್ಯತೆ ಇದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಬೆಂಗಳೂರಿನಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಓಮಿಕ್ರಾನ್ ಸೋಂಕಿತರು ಇರುವ ಸಾಧ್ಯತೆಗಳಿವೆ.
ಜನವರಿ 19 ರಂದು 24,135, 20 ರಂದು 30,240, 21 ರಂದು 29,068, 22 ರಂದು 17,266 ಹಾಗೂ ಜ.23ರಂದು 26,299 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್‍ಚಂದ್ರ ವಿವರಣೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ