ನಿಖಿಲ್ ತಮ್ಮ ಜೆ.ಪಿ.ನಗರ ನಿವಾಸದಿಂದ ಪದ್ಮನಾಭನಗರದ ಹೆಚ್ಡಿಡಿ ನಿವಾಸಕ್ಕೆ ತೆರಳಿದ್ರು. ಈ ವೇಳೆ ಮಾತನಾಡಿದ ನಿಖಿಲ್, ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಆಶ್ಚರ್ಯ ತಂದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಚನ್ನಪಟ್ಟಣದಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ನನ್ನ ಹೆಸರು ಚಾಲ್ತಿಯಲ್ಲಿದೆ ಅಂತಾನೂ ಹೇಳಿದ್ದಾರೆ. ಈ ಮಧ್ಯೆ ಚನ್ನಪಟ್ಟಣಕ್ಕೆ ಸಂಸದ ಡಾಕ್ಟರ್ ಮಂಜುನಾಥ್ ಅವರ ಪತ್ನಿ ಅನಸೂಯ ಅವರ ಹೆಸರು ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖಿಲ್ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ.
ಇನ್ನು ತಮ್ಮ ಪತ್ನಿ ಅನುಸೂಯ ಅವರ ಹೆಸರು ಕೇಳಿಬರುತ್ತಿದ್ದಂತೆಯೇ ಟಿವಿ9ಗೆ ಪ್ರತಿಕ್ರಿಯಿಸಿರುವ ಸಂಸದ ಡಾ ಮಂಜುನಾಥ್, ಅನುಸೂಯ ಅವರು ಸ್ಪರ್ಧೆ ಮಾಡಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಅನುಸೂಯ ಸ್ಪರ್ಧಿಸುತ್ತಾರೆ ಎನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ, ಜೆಡಿಎಸ್ ಮಹಿಳಾ ಅಸ್ತ್ರ ಪ್ರಯೋಗಿಸೋಣ ಎಂದು ದೇವೇಗೌಡ ಅವರು ಕೊನೆ ಕ್ಷಣದಲ್ಲಿ ಅನಸೂಯ ಅವರನ್ನೇ ಕಣಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ. ಇನ್ನು ಇದರ ಜೊತೆಗೆ ಅನಿತಾ ಕುಮಾರಸ್ವಾಮಿ ಅವರ ಹೆಸರು ಸಹ ಕೇಳಿಬರುತ್ತಿದೆ.
ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ರಾಜಕೀಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ, ಇಂದು ಸಂಜೆ 7 ಗಂಟೆಗೆ ಚನ್ನಪಟ್ಟಣ ಅಭ್ಯರ್ಥಿ ಯಾರು ತಿಳಿಯಲಿದೆ. ದೇವೇಗೌಡರು, ಕುಮಾರಣ್ಣ ಅದನ್ನ ಬಹಿರಂಗ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮತ್ತೊಂದೆಡೆ ಚನ್ನಪಟ್ಟಣದ ಬೆಳವಣಿಗೆ ಬಗ್ಗೆ ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇಂದು ಚನ್ನಪಟ್ಟಣ ಮುಖಂಡರ ಸಭೆ ಕರೆದಿದ್ದು, ಸಭೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕೆನ್ನುವ ಚರ್ಚೆಯೂ ಇದೆ. ಹೀಗಾಗಿ ಚನ್ನಪಟ್ಟಣ ತಾಲೂಕು ಘಟಕದ ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರ ಹೆಸರು ಕೂಡಾ ಕೇಳಿ ಬಂದಿದೆ.
ಇನ್ನು ಚನ್ನಪಟ್ಟಣದ ಮುಖಂಡರ ಸಭೆ ಬಳಿಕ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ಸೇರಿದಂತೆ ಇತರೆ ನಾಯಕರೊಂದಿಗೆ ಇಂದು (ಅಕ್ಟೋಬರ್ 23) ಸಂಜೆ ಮಾತುಕತೆ ನಡೆಸಲಿದ್ದು, ಚನ್ನಪಟ್ಟಣದ ರಾಜಕೀಯ ತಂತ್ರಗಾರಿಕೆ ಬಗ್ಗೆ ಚರ್ಚಿಸಲಿದ್ದಾರೆ. ಹೀಗಾಗಿ ಎನ್ಡಿಎ ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.ಒಟ್ಟಿನಲ್ಲಿ ಚನ್ನಪಟ್ಟಣ ಅಖಾಡ ಮತ್ತೊಂದು ದಿಕ್ಕಿಗೆ ಹೊರಳಿದ್ದು, ಸದ್ಯ ಎನ್ಡಿಎ ಅಭ್ಯರ್ಥಿ ಯಾರಾಗ್ತಾರೆ ಅನ್ನೋದರ ಮೇಲೆ ಮುಂದಿನ ಕದನ ನಿರ್ಧಾರವಾಗಲಿದೆ.