ಹರಪನಹಳ್ಳಿ:
ತೀವ್ರ ಮಳೆ ಕೊರತೆ ಹಾಗೂ ಪಾಲ್ ಆರ್ಮಿ ವರ್ಮ್ ಕೀಟ್ ಬಾಧೆಗೆ ತುತ್ತಾದ ಮೆಕ್ಕೆಜೋಳ ಬೆಳೆಯನ್ನು ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದ ರೈತರು ತಮ್ಮ ಟ್ರ್ಯಾಕ್ಟರ್ ಮೂಲಕ ಹರಗಿ ನಾಶಪಡಿಸಿದ್ದಾರೆ.
ಗ್ರಾಮದ ಬಿ.ವಿರೂಪಾಕ್ಷಪ್ಪ ಅವರು ಐದು ಎಕರೆ, ಮಾಗಾನಿ ಕರಿಬಸಪ್ಪ ಮೂರು ಎಕರೆ, ಡಿ.ಮಂಜುನಾಥ್ ಎಂಟು ಎಕರೆ ಜಮೀನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯನ್ನು ಹರಗಿ ನಾಶಪಡಿಸಿದ್ದಾರೆ.
ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದೆ. ಗ್ರಾಮದ 100 ಎಕರೆಕ್ಕಿಂತಲೂ ಹೆಚ್ಚು ಮೆಕ್ಕೆಜೋಳ ಬೆಳೆ ಈ ಕೀಟ ಬಾಧೆಗೆ ತುತ್ತಾಗಿದೆ. ಮುಂಗಡವಾಗಿ ಬಿತ್ತನೆ ಮಾಡಿದ ಬೆಳೆ ಈ ರೋಗ ಕಾಣಿಸಿಕೊಂಡಿಲ್ಲ. ಮಳೆ ಕೊರತೆಯೂ ಈ ರೋಗ ಹರಡುವುದಕ್ಕೆ ಕಾರಣ ಎನ್ನಲಾಗಿದೆ.
ಈ ಭಾಗದಲ್ಲಿ ಮುಂಗಾರು ಮಳೆ ಬೇಗ ಬಾರದಿದ್ದರಿಂದ ಬಿತ್ತನೆ ತಡವಾಯಿತು. ಸೊಂಟದೆತ್ತರೆಕ್ಕೆ ಬೆಳೆದಿದ್ದ ಬೆಳೆ ಕೀಟಬಾಧೆಗೆ ತುತ್ತಾಗಿದೆ. ಕೀಟ ತಡೆಗೆ ಎಲ್ಲ ಪ್ರಯತ್ನ ಮಾಡಿದೂ ಸಫಲವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೆಳೆ ನಾಶಪಡಿಸಬೇಕಾಯಿತು’ ಎನ್ನುತ್ತಾರೆ ರೈತ ಬಿ.ವಿರೂಪಾಕ್ಷಪ್ಪ.
ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದೇನೆ. ಕೀಟ ಹಾವಳಿ ಉಂಟಾಗಿ ಬೆಳೆ ಚಿಂತಾಜನಕ ಪರಿಸ್ಥಿತಿಗೆ ತಲುಪಿದೆ. ಇನ್ನೆರಡು ದಿನ ನೋಡಿ ಭೂಮಿ ಹರಗುತ್ತೇನೆ. ಹಿಂಗಾರು ಕೈಹಿಡಿದರೆ ಬೇರೆ ಬೆಳೆ ಬೆಳೆಯಲು ಮುಂದಾಗುತ್ತೇನೆ’ ಎನ್ನುತ್ತಾರೆ ರೈತ ಕೂಲಹಳ್ಳಿ ಸಿದ್ದಲಿಂಗಪ್ಪ.
ಕೀಟದ ಹಾವಳಿ ಹೆಚ್ಚಾದಲ್ಲಿ ಇಮಾಮೆಕ್ಟಿನ್ ಬೆಂಜೋಯೆಟ್ 0.4 ಗ್ರಾಂ ಲಿ. ನೀರಿಗೆ ಅಥವಾ ಲ್ಯಾಂಬ್ಡಾ ಸೈಹ್ಲೋ ಹತ್ರಿನ್ ಕೀಟನಾಶಕ 2 ಮಿಲಿ ಲೀ ನೀರಿಗೆ ಅಥವಾ ಸ್ಪಿನೋಸ್ಯಾಡ್ 0.3 ಮಿಲಿ ಲೀ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಪೂರ್ಣವಾಗಿ ನೆನೆಯುವಂತೆ ಸಿಂಪರಣೆ ಮಾಡಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟನಾಶಕಗಳು ರಿಯಾಯ್ತಿ ದರದಲ್ಲಿ ಲಭ್ಯವಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ