ಬೆಂಗಳೂರು:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರು ಮಾಡಿರುವ ಅಶ್ಲೀಲ ಪದ ಬಳಕೆ ವಿರುದ್ಧ ರಾಜಕೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಿಟಿ ರವಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಎಂಎಲ್‌ಸಿಯೊಬ್ಬರು ಇಂತಹ ಅಸಭ್ಯ ಭಾಷೆ ಬಳಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದು ಮಹಿಳೆಯರಿಗೆ ಮಾಡಿರುವ ಅವಮಾನ. ಭಾರತದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಅಗೌರವವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸಿ.ಟಿ ರವಿ ಆ ಪದ ಬಳಸಿದ್ದು ಸತ್ಯ. ಏಕೆಂದರೆ ಈ ಬಗ್ಗೆ ವಿಡಿಯೋ, ಆಡಿಯೋ ಕ್ಲಿಪಿಂಗ್ ಇವೆ. ಈ ಪ್ರಕರಣವನ್ನು ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದು ಕ್ರಿಮಿನಲ್ ಅಪರಾಧವಾಗಿದೆ. ಅಲ್ಲಿನ ಶಾಸಕರು, ಪರಿಷತ್ ಸದಸ್ಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು ನ್ಯಾಯಾಂಗ ತನಿಖೆಗೆ ಕೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಲಿಂಗಾಯತ ಪಂಚಮಸಾಲಿ ಮುಖಂಡರಾದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಮಾತನಾಡಿ, ರವಿಯವರ ಮಾತುಗಳು ಬಿಜೆಪಿ ಬೆಳೆಸಿದ ವಿಷ ಸಂಸ್ಕೃತಿಯಾಗಿದೆ. ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದೇ ಜನಸೇವೆಗಾಗಿಯೇ ಹೊರತು ಅಗ್ಗದ ವಾಕ್ಚಾತುರ್ಯಕ್ಕಾಗಿ ಅಲ್ಲ ಎಂದು ತಿಳಿಸಿದರು.
ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಮಹಿಳೆಯರ ಬಗ್ಗೆ ಸಿ.ಟಿ.ರವಿ ಅವರ ನಡವಳಿಕೆ ಮತ್ತು ಹೇಳಿಕೆಗಳು ಬಿಜೆಪಿಗೆ ಸರಿ ಎನಿಸುತ್ತಿದೆಯೇ? ಬಿಜೆಪಿ ನಾಯಕರು ಸಂಸ್ಕೃತಿಯ ಬಗ್ಗೆ ಬೋಧಿಸುತ್ತಿರುತ್ತಾರೆ. ಇದೀಗ ಆ ಸಂಸ್ಕೃತಿ ಎಲ್ಲಿ ಹೋಯಿತು? ಇದೇನಾ ಆರ್ ಎಸ್ ಎಸ್ ಪ್ರತಿಪಾದಿಸುವ ಸಂಸ್ಕೃತಿ? ಬಿಜೆಪಿ ನಾಯಕರಲ್ಲಿ ಮೌಲ್ಯಗಳನ್ನು ಬಿತ್ತಬೇಕಾದ ಆರೆಸ್ಸೆಸ್ ಜವಾಬ್ದಾರಿ ವಹಿಸಿ ಅವರ ಕಾರ್ಯಗಳಿಗೆ ಲಗಾಮು ಹಾಕಬೇಕು ಎಂದು ಆಗ್ರಹಿಸಿದರು.
ರವಿ ಅವರ ಹೇಳಿಕೆಯನ್ನು ಬಿಜೆಪಿಯ ಯಾವುದೇ ನಾಯಕನ ಬಳಿ ಖಂಡಿಸಲು ಮಾತುಗಳು ಇಲ್ಲ. ಹೆಣ್ಣಿನ ಕುಲಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸದಿದ್ದಾಗ ಮಾಧ್ಯಮ ಸ್ನೇಹಿತರು ಅವರಿಗೆ ಬೆಂಬಲ ನೀಡುವುದೇಕೆ? ಅವರ ಮಾತುಗಳ ಬಗ್ಗೆ ಮಾಧ್ಯಮಗಳ ಬಳಿ ದಾಖಲೆಗಳು ಇದ್ದರೂ ಮಾಧ್ಯಮಗಳು ಬೇರೆ ವಿಚಾರಗಳನ್ನು ಪ್ರಚಾರಕ್ಕೆ ಬಿಡುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಿಗರು ಸುಸಂಸ್ಕೃತರು ಎಂಬ ಭಾವನೆ ದೇಶದಲ್ಲಿದೆ. ವಿರೋಧ ಪಕ್ಷಗಳ ನಾಯಕರು ಪದೇ ಪದೆ ಮಹಿಳೆಯರ ವಿರುದ್ಧ ಧೋರಣೆ ಅನುಸರಿಸುತ್ತಿರುವುದರಿಂದ ರಾಜ್ಯದ ಗೌರವ ಕಡಿಮೆಯಾಗುವುದಿಲ್ಲವೇ? ಕಳೆದ ಹತ್ತು ವರ್ಷಗಳಿಂದ ಮಹಿಳೆಯರ ಮೇಲೆ ಬಿಜೆಪಿ ನಾಯಕರ ಉಪಟಳಗಳು ಹೆಚ್ಚಾಗಿವೆ. ಇದೆಲ್ಲವನ್ನು ನೋಡಿದಾಗ, ಮೌಲ್ಯಗಳು ಕುಸಿಯುತ್ತಿವೆ, ಓಲೈಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.