ಮಂಗಳೂರು
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ. ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದ್ದು ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿವೆ. ಅದೇ ರೀತಿ, ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ. ಅಲ್ಲದೆ, ಮಂಗಳೂರಿನಿಂದ ಬಂಟ್ವಾಳದ ಕಾರಿಂಜದ ಪುಳಿಮಜಲು (ಸುಹಾಸ್ ಶೆಟ್ಟಿ ನಿವಾಸ) ತನಕ ಜಾಥಾ ಮೂಲಕ ಮೃತದೇಹದ ಸಾಗಾಟಕ್ಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸುಹಾಸ್ ಶೆಟ್ಟಿ ಹಾಗೂ ಐದು ಜನ ಕಾರ್ಯಕರ್ತರು ಅವರ ಕಾರಿನಲ್ಲಿ ತೆರಳುತ್ತಾ ಇದ್ದರು. ಜಿಹಾದಿ ಇಸ್ಲಾಮಿಕ್ ಭಯೋತ್ಪಾದಕ ಮುಸಲ್ಮಾನರು ಸುಹಾಸ್ ಹತ್ಯೆ ಮಾಡಿದ್ದಾರೆ. ಇದೊಂದು ಪೂರ್ವ ಯೋಜಿತ ಹತ್ಯೆ, ಇದರ ಹಿಂದೆ ನಿಷೇಧಿತ ಪಿಎಫ್ಐ ಕೈವಾಡ ಇದೆ. ಹೀಗಾಗಿ ಬಂದ್ಗೆ ಕರೆ ನೀಡಿದ್ದೇವೆ. ಪೊಲೀಸ್ ಇಲಾಖೆ ವೈಫಲ್ಯದ ವಿರುದ್ದ ನಾವು ಹೋರಾಟ ಮಾಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಬಿಎನ್ಎಸ್ ಕಲಂ 163 ಅಡಿಯಲ್ಲಿ ಮೇ 2 ರ ಮುಂಜಾನೆ 6 ಗಂಟೆಯಿಂದ ಮೇ 6 ರ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಓಡಿಸಿದರೆ ನಮಗೂ ತೊಂದರೆಯಾಗಬಹುದು. ಈಗಾಗಲೇ ಬಸ್ಗಳಿಗೆ ಕಲ್ಲು ತೂರಾಟ ಮಾಡಿದ್ದಾರೆ. ಇವತ್ತು ಇಡೀ ದಿನ ಬಸ್ ಬಂದ್ ಇರುತ್ತದೆ ಎಂದು ಖಾಸಗಿ ಬಸ್ ಚಾಲಕರು ತಿಳಿಸಿದ್ದಾರೆ. ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಸದ್ಯ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಯುತ್ತಿದೆ. ಮತ್ತೊಂದೆಡೆ, ಅಂಗಡಿ ಮುಂಗಟ್ಟುಗಳು ಸಹ ಬಂದ್ ಆಗಿವೆ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ.
