ಅ.15ರವರೆಗೆ 3000 ಕ್ಯೂಸೆಕ್‌ ನೀರು ಬಿಡಿ : CWRC

ನವದೆಹಲಿ

    ಕಾವೇರಿ ನದಿ ನೀರಿಗಾಗಿ ರಾಜ್ಯಾದ್ಯಂತ ಬಂದ್ ನಡೆಯುತ್ತಿರುವಂತೆಯೇ ಅತ್ತ ದೆಹಲಿಯಲ್ಲಿ ಇಂದು ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ- ಸಭೆಯಲ್ಲಿ ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ  ನೀಡಿದ್ದ ಆದೇಶವನ್ನು ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

    ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ  ನೀಡಿದ್ದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಇಂದು ಸೂಚಿಸಲಾಗಿದೆ. ಆ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ.ಅಂತೆಯೇ ತಮಿಳುನಾಡು ಮತ್ತು ಕರ್ನಾಟಕ ಉಭಯ ಸರ್ಕಾರಗಳ ಬೇಡಿಕೆಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಿರಸ್ಕರಿಸಿದ್ದು, ನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುವ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

     ಇನ್ನು ಇಂದಿನ ಸಭೆಯಲ್ಲಿ ತಮಿಳುನಾಡು ನಿತ್ಯ 12,500 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಇಂದಿನ ಸಭೆಯಲ್ಲಿ ಆಗ್ರಹಿಸಿತ್ತು. ಇದು ಮಾತ್ರವಲ್ಲದೇ ಕರ್ನಾಟಕ ಬಾಕಿ ಉಳಿಸಿಕೊಂಡಿರುವ 12 ಟಿಎಂಸಿ ಬ್ಯಾಕ್ ಲಾಗ್ ನೀರನ್ನು ಮೊದಲು ಬಿಡುವಂತೆ ಆದೇಶ ನೀಡಬೇಕು ಎಂದು ವಾದಿಸಿತ್ತು. ಅಂತೆಯೇ ಜೂನ್​ನಿಂದ ಸೆಪ್ಟೆಂಬರ್​ವರೆಗೆ ಕರ್ನಾಟಕ 123 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 40 ಟಿಎಂಸಿ ನೀರು ಮಾತ್ರ ಹರಿಸಿದೆ. ಬಾಕಿ 83 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಬೇಕು ಎಂದು ಸಿಡಬ್ಲ್ಯುಎಂಎ ಸಭೆಯಲ್ಲಿ ತಮಿಳುನಾಡು ಸರ್ಕಾರದ ಪರ ಅಧಿಕಾರಿಗಳು ವಾದ ಮಂಡನೆ ಮಾಡಿದರು.

     ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಪರ ಅಧಿಕಾರಿ ಸಿಂಗ್, ರಾಜ್ಯದಲ್ಲಿ ಸಾಕಷ್ಟು ಮಳೆ ಕೊರತೆ ಇದೆ. ರಾಜ್ಯದ ಡ್ಯಾಂಗಳಲ್ಲಿ ಸಾಕಷ್ಟು ನೀರಿಲ್ಲ. ಮುಂದಿನ ಜೂನ್ ತಿಂಗಳವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಯಾವುದೇ ಆಶಾಭಾವವಿಲ್ಲ. ಬೆಂಗಳೂರು ಮತ್ತು ಇತರೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಬೇಕು. ನಮ್ಮಲ್ಲೂ ರೈತರು ಬತ್ತೆ ಬೆಳೆಯುತ್ತಿದ್ದಾರೆ. ಅವರಿಗೇ ನೀರಿಲ್ಲ. ಆದರೆ ತಮಿಳುನಾಡಿನ ಪರಿಸ್ಥಿತಿ ಹೀಗಿಲ್ಲ. ಅಲ್ಲಿ ಹಿಂಗಾರು ಮಳೆ ಇದೆ. ಹಿಂಗಾರು ಮಳೆಯಿಂದ ಮೆಟ್ಟೂರು ಡ್ಯಾಂ ತುಂಬುತ್ತದೆ. ಹೀಗಾಗಿ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ರಾಕೇಶ್ ಸಿಂಗ್ ಏರುಧನಿಯಲ್ಲೇ ಆಕ್ಷೇಪವ್ಯಕ್ತಪಡಿಸಿದರು.

     ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 53 ರಷ್ಟು ಮಳೆ ಕೊರತೆ ಇದೆ. ರಾಜ್ಯ ಸರ್ಕಾರವು 161 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. 34 ತಾಲೂಕುಗಳು ಮಧ್ಯಮ ಬರ ಪೀಡಿತವೆಂದು ಸರ್ಕಾರ ಘೋಷಿಸಿದೆ. 32 ತೀವ್ರ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಕರ್ನಾಟಕ ತನ್ನ ಜಲಾಶಯಗಳಿಂದ ನೀರು ಹರಿಸುವ ಸ್ಥಿತಿಯಲ್ಲಿಲ್ಲ.

    ಕರ್ನಾಟಕ ಸರ್ಕಾರ ಈಗಾಗಲೇ ನಿಮ್ಮ ಎಲ್ಲಾ ಆದೇಶ ಪಾಲಿಸಿದೆ. ರಾಜ್ಯದಲ್ಲಿ ನೀರು ಕೊರತೆ ಇರುವುದನ್ನು ಸಿಡಬ್ಲ್ಯುಎಂಎ ಗಮನಿಸಬೇಕು. ರಾಜ್ಯದ ರೈತರು, ಜನರ ಆಕ್ರೋಶ ಹೆಚ್ಚಾಗಿದ್ದು ಸರಣಿ ಬಂದ್ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನೀರು ಹರಿಸುವುದು ಅಸಾಧ್ಯವೆಂದು ಕರ್ನಾಟಕ ಪರ ಅಧಿಕಾರಿಗಳು ವಾದ ಮಂಡಿಸಿದರು.

 

Recent Articles

spot_img

Related Stories

Share via
Copy link
Powered by Social Snap