ಮೊಬೈಲ್ ಆ್ಯಪ್ ಗಳಿಗೆ ಸೈಬರ್ ಕಳ್ಳರ ಲಗ್ಗೆ

ತುಮಕೂರು:

ಕಳ್ಳರ ಕೈಚಳಕಗಳು ದಿನಕ್ಕೊಂದು ಸ್ವರೂಪ ಪಡೆಯುತ್ತಿವೆ. ಮೊಬೈಲ್ ಕದ್ದು ಅದರೊಳಗಿನ ಡೇಟಾ ಕಳವು ಮಾಡುವ ಜೊತೆಗೆ ಹಣವನ್ನು ದೋಚುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ ಈಗ ಮೊಬೈಲ್ ಮೂಲಕ ನಡೆಯುವ ಆನ್‍ಲೈನ್ ವ್ಯವಹಾರಗಳು, ಫೋನ್ ಪೇ, ಗೂಗಲ್ ಪೇಗಳು ಇದಾವುದೂ ಸಹ ಸುರಕ್ಷಿತವಲ್ಲ ಎನ್ನುವಂತಾಗಿದೆ.

ಕಳೆದ 5 ದಿನಗಳ ಹಿಂದೆ ತುಮಕೂರು ಎಂ.ಜಿ.ರಸ್ತೆಯ ತಿರುವಿನ ಅಂಗಡಿಯೊಂದರಲ್ಲಿ ಈ ರೀತಿಯ ಸೈಬರ್ ಅಪರಾಧ ಕೃತ್ಯ ನಡೆದಿದೆ. ಹಾಡಹಗಲೇ ಅಂಗಡಿಯೊಂದಕ್ಕೆ ತೆರಳಿದ ವಂಚಕ ನಯವಾಗಿಯೇ ವ್ಯವಹಾರ ನಡೆಸಿದ್ದಾನೆ. ನಾವು ಆ್ಯಪ್ ಸೇಲ್ಸ್ ಪ್ರಮೋಷನ್ ಮಾಡುತ್ತಿದ್ದೇವೆ. ಈ ಆ್ಯಪ್‍ನಲ್ಲಿ ನಿಮ್ಮ ಅಂಗಡಿಯ ಹೆಸರನ್ನು ಸೇರಿಸುತ್ತೇವೆ. ಗ್ರಾಹಕರಿಗೆ ನಿಮ್ಮ ಅಂಗಡಿ ಸುಲಭವಾಗಿ ಪರಿಚಯವಾಗಲಿದೆ, ಅದಕ್ಕಾಗಿ ಈ ಆ್ಯಪ್ ಇನ್‍ಸ್ಟಾಲ್ ಮಾಡಿಕೊಡುತ್ತೇವೆ ಎಂದು ಹೇಳಿದ್ದಾನೆ.

ಇದನ್ನು ನಂಬಿದ ಅಂಗಡಿಯ ಮಾಲೀಕ ತನ್ನ ಮೊಬೈಲ್‍ನ್ನು ಆ ವ್ಯಕ್ತಿಗೆ ನೀಡಿದ್ದಾರೆ. ಹೊಸ ಆ್ಯಪ್ ಡೌನ್‍ಲೋಡ್ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ 200 ರೂ.ಗಳ ವೆಚ್ಚ ಪಡೆದಿದ್ದಾನೆ. ಇದು ರಿಜಿಸ್ಟ್ರೇಷನ್ ಶುಲ್ಕ. ಡೌನ್‍ಲೋಡ್ ನಂತರ ಅಂಗಡಿ ಮುಂದಿನ ನಾಮಫಲಕ ಸೆರೆ ಹಿಡಿದು ಅದರಲ್ಲಿ ಅಳವಡಿಸಲು ಚಿತ್ರ ತೆಗೆಯುವುದಾಗಿ ಹೊರಗೆ ಬಂದು ಕ್ಲಿಕ್ ಮಾಡಿಕೊಂಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಆತ ಅಲ್ಲಿಂದ ನಾಪತ್ತೆ.

ಅಂಗಡಿಯ ಮಾಲೀಕ ಹೊರಗೆ ಬಂದು ನೋಡಲಾಗಿ ಆ ವ್ಯಕ್ತಿಯೂ ಇಲ್ಲ, ಆತನ ವಾಹನವೂ ಇಲ್ಲ. ಈ ಕೃತ್ಯದ ವಿರುದ್ಧ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ವೇಳೆಗೆ ಕೇವಲ ಒಂದು ಗಂಟೆಯ ಅವಧಿಯಲ್ಲಿ 1 ಲಕ್ಷ ರೂ.ಗಳನ್ನು ಮೊಬೈಲ್ ಆ್ಯಪ್ ಮೂಲಕವೇ ಎಗರಿಸಿದ್ದಾನೆ. ಆ್ಯಪ್ ಸೇಲ್ಸ್ ಪ್ರಮೋಷನ್ ಹೆಸರಿನಲ್ಲಿ ಅಂಗಡಿಯವರನ್ನು ನಂಬಿಸುವ, ಅವರ ಮೊಬೈಲ್ ಡೇಟಾಗೆ ಲಗ್ಗೆ ಹಾಕುವ, ಅದರ ಮೂಲಕವೇ ಹಣ ಕದಿಯುವ ಜಾಡನ್ನು ಆನ್‍ಲೈನ್ ಕಳ್ಳ ಖದೀಮರು ಕಂಡುಕೊಂಡಿದ್ದಾರೆ.

ಇನ್ನು ನಗರದ ವಿವಿಧ ಭಾಗಗಳಲ್ಲಿ ಕಳೆದ ಒಂದು ವಾರದಲ್ಲಿ ಮೂರ್ನಾಲ್ಕು ಮೊಬೈಲ್ ಕಳ್ಳತನದ ವರದಿಗಳು ಬಹಿರಂಗವಾಗಿವೆ. ಉಪ್ಪಾರಹಳ್ಳಿ ಅಂಡರ್ ಪಾಸ್‍ನಿಂದ ಶಾಂತಿನಗರದ ಕಡೆಗೆ ಹೋಗುವ ಮಾರ್ಗದಲ್ಲಿ ವ್ಯಕ್ತಿಯೊಬ್ಬರು ಬೈಕ್‍ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಖದೀಮನೊಬ್ಬ ಮೊಬೈಲ್ ಎಗರಿಸಿದ್ದಾನೆ. ದಾರಿಯಲ್ಲಿ ಮಾತನಾಡಿಕೊಂಡು ಹೋಗುವಾಗ ಹಿಂಬಾಲಿಸುವ ಮೊಬೈಲ್ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಮೊಬೈಲ್ ಕಳವು ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಕಾನೂನು ಪ್ರಕ್ರಿಯೆಗಳಿಗೆ ಹಿಂಜೆರಿದು ಸಾಕಷ್ಟು ಮಂದಿ ದೂರು ನೀಡಲು ಠಾಣೆಗೆ ಹೋಗುತ್ತಿಲ್ಲ. ಸೈಬರ್ ಕಳವು ಪ್ರಕರಣಗಳ ಬಗ್ಗೆ ಪೋಲೀಸ್ ಇಲಾಖೆ ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ.

ಮೊಬೈಲ್ ಕಳುವಾದರೆ ಹೋಗಲಿ, ಆದರೆ ಅದರ ಬೆಲೆ ನಷ್ಟಕ್ಕಿಂತ ಡೇಟಾ ಕಳೆದು ಹೋಗುವ ಆತಂಕವೇ ಈಗ ಜನರನ್ನು ಕಾಡುತ್ತಿರುವ ಪ್ರಶ್ನೆ. ಪ್ರತಿಯೊಬ್ಬರೂ ತಮ್ಮ ಆ್ಯಂಡ್ರಾಯಿಡ್ ಮೊಬೈಲ್‍ಗಳಲ್ಲಿ ಒಂದಷ್ಟು ಮಾಹಿತಿಗಳನ್ನು ಅಳವಡಿಸಿಕೊಂಡಿರುತ್ತಾರೆ. ಅದರೊಳಗೆ ಗೌಪ್ಯ ಮಾಹಿತಿಗಳೂ ಇರುತ್ತವೆ. ವ್ಯಕ್ತಿಗಳ ಸಂಪರ್ಕದಿಂದ ಹಿಡಿದು ಬ್ಯಾಂಕ್‍ಗಳ ಅಕೌಂಟ್ ಖಾತೆಯ ತನಕ ಬಹುತೇಕ ಮಾಹಿತಿಗಳು ಇದರೊಳಗೆ ಇರುತ್ತದೆ. ಕಳುವಾದಾಗ ಇವೆಲ್ಲವೂ ಬಟಾಬಯಲಾಗುತ್ತವೆ. ಕೆಲವೇ ನಿಮಿಷಗಳಲ್ಲಿ ಹಣ ಇಲ್ಲವಾಗುತ್ತದೆ. ಹಣ ಕದಿಯುವ ಚಾಕಚಕ್ಯತೆ ಮೊಬೈಲ್ ಕದ್ದವರಲ್ಲಿ ಇರುತ್ತದೆ. ಮೊಬೈಲ್ ಕಳುವಾದ ಅರ್ಧ ಗಂಟೆಯಲ್ಲಿ ಬ್ಯಾಂಕ್ ಖಾತೆಗೆ ಖನ್ನ ಹಾಕುತ್ತಾರೆಂದರೆ ಅವರ ತರಬೇತಿ ಹಾಗೂ ಚಾಕಚಕ್ಯತೆ ಇನ್ನೆಷ್ಟಿರಬೇಕು..?

ಒತ್ತಡದ ಜೀವನದಲ್ಲಿ ವ್ಯಾಪಾರಸ್ಥರು ಕೆಲಸ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಮನೆಯಿಂದ ಅಂಗಡಿಗೆ ಹೋಗುವ ಹಾಗೂ ಅಂಗಡಿಯಿಂದ ಮನೆಗೆ ಬರುವ ವ್ಯವಹಾರದ ಸಮಯ ಇತ್ಯಾದಿಗಳನ್ನು ಕೆಲವರು ಗಮನಿಸಿರುತ್ತಾರೆ. ಈ ಎಲ್ಲ ವಿದ್ಯಮಾನಗಳನ್ನು ಅರಿತ ನಂತರವೇ ಅವರ ಅಂಗಡಿಗೆ ತೆರಳುವ, ಗಮನ ಸೆಳೆದು ಮೊಬೈಲ್ ಆ್ಯಪ್ ಅಳವಡಿಸುವಂತಹ ವಿಚಾರಗಳನ್ನು ತುಂಬುವ ಕೆಲಸ ಮಾಡುತ್ತಾರೆ. ಈ ಬಗ್ಗೆ ವ್ಯವಹಾರಿಕ ವಲಯ ಎಚ್ಚರದಿಂದ ಇರುವುದು ಒಳಿತು.

ಜನತೆ ಈಗ ಆನ್‍ಲೈನ್ ಡಿಜಿಟಲೀಕರಣಕ್ಕೆ ಹೊಂದಿಕೊಂಡಿದ್ದಾರೆ. ಸಾಂಪ್ರದಾಯಿಕ ಹಣಕಾಸು ವ್ಯವಹಾರ ದೂರ ಸರಿಯುತ್ತಿದೆ. ಆದರೆ ಈ ಆನ್‍ಲೈನ್ ವ್ಯವಹಾರವು ಅಷ್ಟು ಸುರಕ್ಷಿತವಲ್ಲ ಎಂಬುದೂ ಸಹ ಇತ್ತೀಚೆಗೆ ವೇದ್ಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಇತ್ಯಾದಿಗಳು ಸುಲಭ ಎನ್ನಬಹುದಾದರೂ ಮುಂದಿನ ದಿನಗಳಲ್ಲಿ ಸಾರ್ವಜನಿಕರ ವ್ಯವಹಾರ ಗೌಪ್ಯತೆ ಎಷ್ಟು ನಿಖರ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಆನ್‍ಲೈನ್ ವಂಚನೆಗೆ ದೂರು ನೀಡಿ

ಮೊಬೈಲ್ ಕಳುವಾದರೆ ಕಳುವಿಗೆ ಸಂಬಂಧಿಸಿದಂತೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಆದರೆ ಆನ್‍ಲೈನ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ದೂರಿದ್ದರೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಬೇಕು. ಮೊಬೈಲ್ ಮೂಲಕ ಹಣ ವರ್ಗಾವಣೆ, ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಮತ್ತು ಅಶ್ಲೀಲ ಬರಹ ದೃಶ್ಯಗಳನ್ನು ಅಪ್‍ಲೋಡ್ ಮಾಡುವುದು, ದುರ್ಬಳಕೆ ಇತ್ಯಾದಿಗಳೆಲ್ಲವೂ ಸೈಬರ್ ಕ್ರೈಂ ಠಾಣೆಯ ವ್ಯಾಪ್ತಿಗೆ ಬರುತ್ತವೆ. ತಡ ಮಾಡದೆ ಅಲ್ಲಿಗೆ ದೂರು ನೀಡಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ಎಚ್ಚರಿಕೆಯ ವ್ಯವಹಾರವಿರಲಿ

      ಯಾವುದೇ ವ್ಯಕ್ತಿಗಳು ಅಂಗಡಿಗಳಿಗೆ ಅಥವಾ ಮನೆಗಳಿಗೆ ಪರಿಚಯ ಮಾಡಿಕೊಂಡು ಬಂದಾಗ ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅಧಿಕೃತ ವ್ಯಕ್ತಿಗಳನ್ನು ತಿಳಿದು ಮನವರಿಕೆ ಮಾಡಿಕೊಳ್ಳದೆ ಯಾರೊಂದಿಗೂ ಏನನ್ನೂ ವ್ಯವಹರಿಸಬಾರದು ಹಾಗೂ ತೀರಾ ಪರಿಚಿತರಲ್ಲದವರಿಗೆ ಮೊಬೈಲ್‍ಗಳನ್ನು ನೀಡಬಾರದು. ಆನ್‍ಲೈನ್ ವಂಚನೆಯ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಸಾರ್ವಜನಿಕರು ಸದಾ ಜಾಗೃತರಾಗಿರಬೇಕು. ಆದರೆ ಕೆಲವೊಮ್ಮೆ ಮೋಸ ಹೋಗುವವರು ಹೆಚ್ಚುತ್ತಿದ್ದಾರೆ. ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ. ಇವೆಲ್ಲವೂ ಸ್ವಯಂಕೃತ ಅಪರಾಧಗಳು. ಮೊಬೈಲ್ ಕಳವು, ಡೇಟಾ ಕಳವು, ಆನ್‍ಲೈನ್ ವಂಚನೆ ಇತ್ಯಾದಿಗಳು ನಡೆದಾಗ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ.
-ರಾಹುಲ್ ಕುಮಾರ್ ಷಹಾಪೂರ್ ವಾಡ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.

                                                                                                           – ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap