ಎಂಜಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಂದ ಸೈಬರ್‌ ಕ್ರೈಂ

ಪುದುಚೇರಿ: 

    ಎಂಜಿನಿಯರಿಂಗ್ ಕ್ಯಾಂಪಸ್ ನಲ್ಲಿ  ನಡೆಸುತ್ತಿದ್ದ ಸೈಬರ್ ವಂಚನೆ  ಪ್ರಕರಣವನ್ನು ಭೇದಿಸಿರುವ ಪುದುಚೇರಿ ಪೊಲೀಸರು  ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ. ಸುಮಾರು 90 ಕೋಟಿ ರೂ. ಸೈಬರ್ ಹಗರಣದ ಕೇಂದ್ರವಾಗಿದ್ದ ಪುದುಚೇರಿ ಎಂಜಿನಿಯರಿಂಗ್ ಕ್ಯಾಂಪಸ್ ನಲ್ಲಿ ತನಿಖೆ ವೇಳೆ 5 ಲಕ್ಷ ರೂ. ನಗದು, 171 ಚೆಕ್ ಪುಸ್ತಕಗಳು, 75 ಎಟಿಎಂ ಕಾರ್ಡ್‌ಗಳು, 20 ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಬ್ಯಾಂಕ್ ಖಾತೆ ಪುಸ್ತಕಗಳು, ಕ್ರೆಡಿಟ್ ಕಾರ್ಡ್‌ಗಳು, ಹುಂಡೈ ವೆರ್ನಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪುದುಚೇರಿಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿದ್ದ ಸೈಬರ್ ವಂಚನೆಯನ್ನು ಪತ್ತೆ ಹಚ್ಚಿದ ಸೈಬರ್ ಕ್ರೈಮ್ ಪೊಲೀಸರು ಇದರಲ್ಲಿ ವಿದ್ಯಾರ್ಥಿಗಳ ದೊಡ್ಡ ಗುಂಪೊಂದು ಭಾಗಿಯಾಗಿರುವುದನ್ನು ಕಂಡುಕೊಂಡಿದ್ದಾರೆ. ಈ ಗುಂಪು ಸ್ನೇಹಿತರು ಮತ್ತು ಸಹಪಾಠಿಗಳಿಗೆ ಸೇರಿದ ಬ್ಯಾಂಕ್ ಖಾತೆಗಳಿಗೆ ಪ್ರವೇಶವನ್ನು ಮಾರಾಟ ಮಾಡಿ ಲಕ್ಷಾಂತರ ರೂ. ಕಳವಿಗೆ ವಂಚಕರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸೈಬರ್ ಅಪರಾಧಿಗಳು ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಲು ವಿದ್ಯಾರ್ಥಿಗಳ ಗುಂಪು ಸಹಾಯ ಮಾಡಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. 

    ವಿದ್ಯಾರ್ಥಿಗಳಾದ ದಿನೇಶ್ ಮತ್ತು ಜಯಪ್ರತಾಪ್ ಅವರ ಬ್ಯಾಂಕ್ ಖಾತೆಗಳು ಅನಿರೀಕ್ಷಿತವಾಗಿ ಸ್ಥಗಿತಗೊಂಡಾಗ ಅವರು ಪೊಲೀಸ್ ದೂರು ನೀಡಿದ್ದಾರೆ. ಇದರ ತನಿಖೆಗೆ ಕ್ರಮ ಕೈಗೊಂಡ ಪೊಲೀಸರಿಗೆ ಅವರಿಬ್ಬರು ತಮ್ಮ ಖಾತೆ ವಿವರಗಳನ್ನು ತಮ್ಮ ಸ್ನೇಹಿತ ಹರೀಶ್ ನೊಂದಿಗೆ ಹಂಚಿಕೊಂಡಿರುವುದು ತಿಳಿದುಬಂದಿದೆ. ಆತನನ್ನು ಬಂಧಿಸಿದಾಗ ಎಲ್ಲ ವಿಚಾರಗಳು ಒಂದೊಂದಾಗಿ ಬೆಳಕಿಗೆ ಬಂದಿದೆ.

    ವಿದ್ಯಾರ್ಥಿಗಳು ಮತ್ತು ಕ್ಯಾಂಪಸ್‌ನ ಹೊರಗಿನ ಜನರ 20ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಹರೀಶ್ ಸಂಗ್ರಹಿಸಿದ್ದಾನೆ. ಇವುಗಳನ್ನು ಮ್ಯೂಲ್ ಖಾತೆಗಳಾಗಿ ಪರಿವರ್ತಿಸಿ ಹಣವನ್ನು ಬೇರೆ ಖಾತೆಗಳಿಗೆ ರವಾನಿಸಲಾಗಿದೆ. ಈ ಮೂಲಕ ಕನಿಷ್ಠ 7 ಕೋಟಿ ರೂ. ಗಳನ್ನು ರವಾನಿಸಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

   ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಎಂಜಿನಿಯರಿಂಗ್ ಪದವೀಧರರು ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಇವರನ್ನು ಥಾಮಸ್ ಅಲಿಯಾಸ್ ಹಯಗ್ರೀವ, ಹರೀಶ್, ಗಣೇಶನ್, ಗೋವಿಂದರಾಜ್, ಯಶ್ವಿನ್, ರಾಹುಲ್ ಮತ್ತು ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಗಣೇಶನ್ ಬ್ಯಾಂಕ್ ಖಾತೆಗಳಿಂದ ಲಪಟಾಯಿಸಿರುವ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸುತ್ತಿದ್ದನು. ಆತ ಚೀನಾದಲ್ಲಿ ಸೈಬರ್ ಅಪರಾಧಿಗಳೊಂದಿಗೆ ಕೆಲಸ ಮಾಡುತ್ತಿದ್ದ. ಇದಕ್ಕಾಗಿ ಕಮಿಷನ್ ಪಡೆಯುತ್ತಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸೈಬರ್ ಕ್ರೈಮ್ ಜಾಲವು ಅಂತಾರಾಷ್ಟ್ರೀಯ ಮಟ್ಟದಲ್ಲೂ ವ್ಯಾಪಿಸಿದೆ ಎಂದು ಸೈಬರ್ ಅಪರಾಧ ವಿಭಾಗದ ಪುದುಚೇರಿಯ ಹಿರಿಯ ಪೊಲೀಸ್ ಅಧೀಕ್ಷಕಿ ನಿತ್ಯಾ ರಾಧಾಕೃಷ್ಣನ್ ತಿಳಿಸಿದ್ದಾರೆ. 

   ಯಾರೊಂದಿಗಾದರೂ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳುವ ಮುನ್ನ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಬ್ಯಾಂಕ್ ಖಾತೆ ಮಾಹಿತಿ, ಎಟಿಎಂ ಕಾರ್ಡ್‌ಗಳು ಅಥವಾ ಆನ್‌ಲೈನ್ ಬ್ಯಾಂಕಿಂಗ್ ವಿವರಗಳನ್ನು ಯಾರಿಗೂ ನೀಡದಂತೆ ಅವರು ಎಚ್ಚರಿಕೆ ನೀಡಿದ್ದಾರೆ.

Recent Articles

spot_img

Related Stories

Share via
Copy link