ಬೆಂಗಳೂರು :
ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್‌ವುಡ್‌ನ ಸ್ಟಾರ್ ನಟ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ. ತಮ್ಮ ನೇರ ನಡೆ ನುಡಿಯ ಮೂಲಕವೇ ಅಭಿಮಾನಿಗಳ ಎದೆಯಲ್ಲಿ ಗಾಢವಾಗಿ ಬೇರೂರಿದ್ದಾರೆ ಈ ನಟ.
ಹಿಟ್ ಸಿನಿಮಾಗಳನ್ನು ನೀಡುತ್ತ, ತಾವಾಯ್ತು ತಮ್ಮ ಬಳಗವಾಯ್ತು ಎಂದಷ್ಟೇ ಇರುವ ಇದೇ ದರ್ಶನ್, ಒಮ್ಮೊಮ್ಮೆ ತಮ್ಮ ಬಿರುಸು ಮಾತಿನಿಂದಲೇ ಟೀಕೆ ಎದುರಿಸಿದ ಉದಾಹರಣೆಗಳಿವೆ. ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯ ಮುನ್ನೆಲೆಗೆ ಬಂದಿರುತ್ತಾರೆ.
ಅಭಿಮಾನಿಗಳನ್ನು ಸೆಲೆಬ್ರಿಟಿಗಳೆಂದು ಕರೆದ ಏಕೈಕ ಕನ್ನಡ ನಟನಾಗಿರುವ ದರ್ಶನ್, ತಮ್ಮ ಎದೆ ಮೇಲೆ ಸೆಲೆಬ್ರಿಟೀಸ್ ಎಂದೂ ಟ್ಯಾಟೂ ಹಾಕಿಸಿಕೊಂಡು ಅಭಿಮಾನಿಗಳನ್ನು ಎದೆಯಲ್ಲಿಟ್ಟುಕೊಂಡಿದ್ದಾರೆ. ಇದೆಲ್ಲದರ ನಡುವೆ ವಿವಾದಕ್ಕೂ ದರ್ಶನ್‌ಗೂ ಅವಿನಾಭಾವ ನಂಟು. ತಮ್ಮ ಬಿರುಸು ಹೇಳಿಕೆಗಳ ಮೂಲಕವೇ ಸದ್ದು ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಇದೆಲ್ಲವನ್ನು ಬದಿಗಿಟ್ಟರೆ, ಆಪ್ತರು, ತನ್ನವರೆಂದು ಬಂದರೆ ಅವರಿಗಾಗಿ ಎಲ್ಲದಕ್ಕೂ ಸೈ ಈ ನಟ. ಹೀಗಿರುವ ಇದೇ ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ ಕಾಲಜ್ಞಾನ ಮಠದ ಸ್ವಾಮೀಜಿ.
ನಟ ದರ್ಶನ್ ಕಾಟೇರ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಸುಲ್ತಾನನಾಗಿ ಎದ್ದು ನಿಂತಿದ್ದಾರೆ. ಕೋಟಿ ಕೋಟಿ ಬಾಚಿಕೊಂಡ ಕಾಟೇರ ಸಿನಿಮಾ ಬಳಿಕ, ಡೆವಿಲ್ ಶೂಟಿಂಗ್‌ನಲ್ಲೂ ದರ್ಶನ್ ಬಿಜಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣದ ನಡುವೆಯೇ ಕೈಗೆ ಗಾಯ ಮಾಡಿಕೊಂಡು, ಶಸ್ತ್ರ ಚಿಕಿತ್ಸೆಗೂ ತೆರಳುತ್ತಿರುವ ಬಗ್ಗೆಯೂ ಹೇಳಿಕೊಂಡಿದ್ದರು ದರ್ಶನ್. ಈಗ ಇದೇ ದರ್ಶನ್ ಬಗ್ಗೆ ಕ್ರೋಧಿ ನಾಮ ಸಂವತ್ಸರದ ಯುಗಾದಿ ವರ್ಷದ ಫಲಾಫಲದ ಬಗ್ಗೆ ಪವರ್ ಟಿವಿಗೆ ಮಾತನಾಡಿದ, ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನಟ ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸ್ಯಾಂಡಲ್‌ವುಡ್ ನಟ ದರ್ಶನ್ ಅವರಿಗೆ ಈ ವರ್ಷ ಸಮಸ್ಯೆಗಳೇ ಹೆಚ್ಚು. ಶತ್ರುಗಳಿಂದ ಸಮಸ್ಯೆಗಳು ಎದುರಾದರೆ, ಆರೋಗ್ಯದಲ್ಲೂ ಏರುಪೇರಾಗಲಿದೆ. ಇದಷ್ಟೇ ಅಲ್ಲ ಮಾನಹಾನಿಯಂಥ ಘಟನೆಗಳೂ ತುಸು ಹೆಚ್ಚೇ ಘಟಿಸಲಿವೆ ಎಂದು ಹರಿಹರದ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠ) ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸ್ವಾಮೀಜಿಯ ಈ ಭವಿಷ್ಯ ಕೇಳಿದ ದರ್ಶನ್ ಅಭಿಮಾನಿಗಳು ಕೊಂಚ ಆತಂಕದಲ್ಲಿದ್ದಾರೆ.
“ನಮ್ಮ ಕರ್ನಾಟಕದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರವರು ಬಹಳ ಕಷ್ಟದಿಂದ ಮೇಲೆ ಬಂದಿರುವವರು. ಅವರ ಪ್ರತಿಭೆ ಹಾಗೂ ಅವರು ಪಡೆದಿರುವ ಪ್ರಸಿದ್ಧಿ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ. ಆದರೆ, ಈ ವರ್ಷ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ, ಅನಾರೋಗ್ಯ ಬಾಧೆ, ಮಾನಹಾನಿಗಳು, ಅನೇಕ ರೀತಿಯ ದುಷ್ಕ್ರತ್ಯಗಳ ಪ್ರಯೋಗದಿಂದ ನೆಮ್ಮದಿ ಹಾಳಾಗಲಿದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅತ್ಯವಶ್ಯವಾಗಿದೆ. ಮತ್ತು ನಿಮ್ಮ ರಕ್ಷಣಾ ವಲಯವನ್ನು ಹೆಚ್ಚು ಮಾಡಿಕೊಳ್ಳುವುದು ಸೂಕ್ತ” ಎಂದು ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠ) ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್, ತಮ್ಮ ಅಭಿಮಾನಿಗಳಿಂದ ಸಾಕಷ್ಟು ಬಾರಿ ಮುಜುಗರಕ್ಕೀಡಾದ ಉದಾಹರಣೆಗಳಿವೆ. ಈ ಬಗ್ಗೆ ಸ್ವತಃ ಅವರೇ ಮೌನ ಮುರಿದ ಪ್ರಸಂಗಗಳೂ ನಡೆದಿವೆ. ಈಗ ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ನೇರ ಕಾರಣ ಎಂದು ದರ್ಶನ್ ಅವರ ಅಭಿಮಾನಿ ಕೆಟ್ಟ ಪದಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೋಸ್ಟ್ ಡಿಲಿಟ್ ಮಾಡಲಾಗಿದೆ. ಗಜಪಡೆ ಎಂದಿದ್ದ ಟ್ವಿಟರ್ ಖಾತೆಯ ಹೆಸರನ್ನು ಸುದೀಪ್ ಅಭಿಮಾನಿ ಎಂದೂ ಬದಲಿಸಿ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ