ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಬೆಳಗಾವಿ

     “ನಮ್ಮಲ್ಲಿ ನಗರ ಯೋಜನೆ ರೂಪಿಸುತ್ತಿರುವವರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕಾಲೇಜು ಆರಂಭಿಸಲು ಮುಂದಾಗಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ (ಎರಡನೇ ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಪರವಾಗಿ ಸಚಿವ ಬೋಸರಾಜು ವಿಧಾನ ಪರಿಷತ್‌ನಲ್ಲಿ ಗುರುವಾರ ಮಂಡಿಸಿದ ವೇಳೆ ಮಾತನಾಡಿದರು.

    “ರಾಜ್ಯದಲ್ಲಿ ನಗರ ಯೋಜನೆ ರೂಪಿಸುವವರು (ಟೌನ್ ಪ್ಲಾನರ್‌ಗಳು) ಕಡಿಮೆಯಾಗಿದ್ದಾರೆ. ನಗರ ಯೋಜನೆ ವಿಷಯದ ಕಾಲೇಜು ಆರಂಭಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ 100 ಕೋಟಿ ರುಪಾಯಿಯನ್ನು ಮೀಸಲಿಡಲಾಗಿದೆ. ಈಗ ನಗರ ಯೋಜನೆಗಳನ್ನು ಸಿವಿಲ್ ಎಂಜಿನಿಯರ್‌ಗಳ ಬದಲಾಗಿ ಬೇರೆ ಎಂಜಿನಿಯರ್‌ಗಳು ನಮ್ಮ ಇಲಾಖೆಗೆ ಬಂದು ಸೇರುತ್ತಿದ್ದಾರೆ. ಕೆಂಪೇಗೌಡ ಯೋಜನಾ ಪ್ರಾಧಿಕಾರ ರಚಿಸಲಾಗಿದ್ದು, ಮುಖ್ಯಮಂತ್ರಿಯ ಅಧ್ಯಕ್ಷತೆ ಇತ್ತು. ಬಿಜೆಪಿಯವರ ಕಾಲದಲ್ಲಿ ಅದನ್ನು ಕಂದಾಯ ಸಚಿವರ ಅಧ್ಯಕ್ಷತೆ ಮಾಡಿದ್ದರು. ಈ ಪ್ರಾಧಿಕಾರಕ್ಕೆ ಬೆಂಗಳೂರಿನ ಸುಮ್ಮನಹಳ್ಳಿಯ ಬಳಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆʼʼ ಎಂದರು. 

    ʼʼನಗರ ಯೋಜನಾಕಾರರನ್ನು ತಯಾರಿಸಲು ವಿಟಿಯು ಜತೆ ಚರ್ಚೆ ಮಾಡಿ ಇದಕ್ಕಾಗಿಯೇ ಪ್ರತ್ಯೇಕ ಕಾಲೇಜು ಆರಂಭಿಸಲು ಮುಂದಾಗಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲಿ ನಗರ ಯೋಜನೆ ರೂಪಿಸಲು ನೆರವಾಗುತ್ತದೆ. ಈ ಪ್ರಾಧಿಕಾರದಲ್ಲಿ ನಗರ ಯೋಜನೆ ಅಧಿಕಾರಿಗಳು ಹಾಗೂ ನಗರ ಯೋಜನೆ ನಿರ್ದೇಶಕರು ಸದಸ್ಯರಾಗಿರಬೇಕು ಎಂದು ಈ ತಿದ್ದುಪಡಿ ತರಲಾಗಿದೆ” ಎಂದು ತಿಳಿಸಿದರು.

     ಈ ಮಧ್ಯೆ ಬುಧವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಡಿಕೆಶಿ, “ನಮ್ಮ ಗ್ಯಾರಂಟಿ ಯೋಜನೆ ವಿಚಾರದಲ್ಲಿ ಯಡಿಯೂರಪ್ಪ ಒಂದು ಕಾಳು ಕಡಿಮೆಯಾದರೂ ನಾವು ಒಪ್ಪುವುದಿಲ್ಲ ಎಂದು ಹೇಳಿದ್ದರು. ನಾವು ಈ ಯೋಜನೆ ಘೋಷಣೆ ಮಾಡಿದ್ದು, ನಾವು ಅದಕ್ಕೆ ಬದ್ಧವಾಗಿದ್ದೇವೆ. ನಮ್ಮ ಯೋಜನೆಗಳನ್ನು ನಕಲು ಮಾಡಿಯೇ ಎನ್‌ಡಿಎ ಇಡೀ ದೇಶದಲ್ಲಿ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆದ್ದು ಅಧಿಕಾರ ಪಡೆಯುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಇಲ್ಲವಾಗಿದ್ದರೆ, ನೀವು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ” ಎಂದು ಕಿಡಿಕಾರಿದ್ದರು.

Recent Articles

spot_img

Related Stories

Share via
Copy link