ಬೆಂಗಳೂರು :
ರಸ್ತೆ ನಿರ್ಮಾಣಕ್ಕಾಗಿ ಬರೋಬ್ಬರಿ 22 ಎಕರೆ ಜಾಗವನ್ನು ಬಿಬಿಎಂಪಿಗೆ ಬಿಟ್ಟುಕೊಡಲು ರಕ್ಷಣಾ ಇಲಾಖೆ ತೀರ್ಮಾನಿಸಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.ಬೆಂಗಳೂರಿನ ಎಎಸ್ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರೊಂದಿಗೆ ಇಂದು ಡಿಕೆಶಿ ಅವರು ವಿಧಾನಸೌಧದಲ್ಲಿ ಸಮಾಲೋಚನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಲೋವರ್ ಆಗರಂನಿಂದ ಸರ್ಜಾಪುರವರೆಗೆ ರಸ್ತೆ ಅಗಲೀಕರಣಕ್ಕಾಗಿ 12.34 ಎಕರೆ ಜಮೀನನ್ನು ರಕ್ಷಣಾ ಇಲಾಖೆ ಬಿಬಿಎಂಪಿಗೆ ನೀಡಿದೆ. ಇನ್ನು 10.77 ಎಕರೆ ನೀಡಲು ತಾತ್ವಿಕ ಒಪ್ಪಿಗೆಯೂ ನೀಡಿದೆ ಎಂದರು.M.G. ರಸ್ತೆಯಿಂದ ಬೆಳ್ಳಂದೂರು ಭಾಗಕ್ಕೆ ತೆರಳಲು ಸುಮಾರು 1 ಗಂಟೆ ಸಮಯ ಬೇಕಾಗಿತ್ತು. ಈ ರಸ್ತೆ ನಿರ್ಮಾಣದ ನಂತರ 5-8 ನಿಮಿಷಗಳ ಅಂತರದಲ್ಲಿ ಕ್ರಮಿಸಬಹುದು ಎಂದು ವಿವರಿಸಿದರು.
ರಸ್ತೆ ನಿರ್ಮಾಣದ ಮೊದಲ ಹಂತದಲ್ಲಿ ಒಟ್ಟು 3.50 ಕಿ.ಮೀ ಕಾಮಗಾರಿಗಾಗಿ 35 ಕೋಟಿ ರೂಪಾಯಿ ವೆಚ್ಚದ ಟೆಂಡರ್ ಅನ್ನು ಕರೆಯಲಾಗಿದೆ. ಟ್ರಿನಿಟಿ ಸರ್ಕಲ್, ಈಜಿಪುರ ರಸ್ತೆ ನಿರ್ಮಾಣಕ್ಕೆ ಇನ್ನು 10.77 ಎಕರೆ ಜಾಗ ರಕ್ಷಣಾ ಇಲಾಖೆ ನೀಡಬೇಕಿದೆ. ಇದು ಕೈಗೂಡಿದಲ್ಲಿ ಐಟಿ ಹಬ್ಗೆ ತೆರಳುವವರಿಗೆ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದರು.