ಬೆಂಗಳೂರು:
ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಅಧಿಕಾರ ಹಂಚಿಕೆ ಒಪ್ಪಂದವೂ ಆಗಿಲ್ಲ ಮತ್ತು ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ. ಈ ಬಗ್ಗೆ ಪಕ್ಷದಲ್ಲಿ ಯಾರೂ ಮಾತನಾಡಬಾರದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿಗೆ ಖಾಸಗಿ ಸುದ್ದಿವಾಹಿನಿವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ ಸಿದ್ದರಾಮಯ್ಯ ಅವರು ಅಂತಹ ಯಾವುದೇ ಒಪ್ಪಂದವಾಗಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದು ಕಳೆದ ಬುಧವಾರ ಹೇಳಿದ್ದರು.
ಈ ಕುರಿತು ಇಂದು ಬೆಂಗಳೂರಿನಲ್ಲಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ. ಏನೂ ಇಲ್ಲ. ಯಾರೂ ಆ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ. ರಾಜಕೀಯವಾಗಿ ನಮ್ಮ ನಡುವೆ ಒಂದಷ್ಟು ಹೊಂದಾಣಿಕೆಗಳಿವೆ. ಅದರ ಪ್ರಕಾರ ಆಡಳಿತ ಮಾಡಿಕೊಂಡು ಹೋಗುತ್ತಿದ್ದೇವೆ ಎಂದರು. ಅಧಿಕಾರ ಹಂಚಿಕೆ ಸೂತ್ರ ವಿಚಾರವಾಗಿ ಗೊಂದಲಗಳಿಗೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಆ ರೀತಿ ಯಾವುದೇ ಒಪ್ಪಂದ ಆಗಿಲ್ಲ ಎಂದಿದ್ದಾರೆ. ಅದೇ ಅಂತಿಮ, ಅಲ್ಲಿಗೆ ಆ ಚರ್ಚೆ ಮುಗಿಯಿತು ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಸಿಎಂಗೆ ಕೆಲವು ಜವಾಬ್ದಾರಿಗಳನ್ನು ವಹಿಸಲಾಗಿದ್ದು, ಕೆಲವನ್ನು ನನಗೆ ವಹಿಸಲಾಗಿದೆ. ಅದರಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.”ಯಾವುದೇ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಇಲ್ಲ ಅಥವಾ ಅಂತಹ ಪರಿಸ್ಥಿತಿ ಬಂದಿಲ್ಲ. ನಾನು ಈಗಾಗಲೇ ಸಿಎಂ ಹೇಳಿದ್ದೇ ಅಂತಿಮ ಎಂದು ಹೇಳಿದ್ದೇನೆ ಮತ್ತು ಅದು(ವಿಷಯ) ಈಗ ಮುಗಿದ ವಿಚಾರ ಎಂದರು.