ಬೆಂಗಳೂರು
2025ರ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಹೀಗಾಗಿ ಇದಕ್ಕೂ ಮುಂಚೆ ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡುವಂತೆ ಸಚಿವೆ ನಿರ್ಮಲಾ ಸೀತಾರಾಮನ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.
ಬೆಂಗಳೂರು ಉತ್ತರ- ದಕ್ಷಿಣ ಕಾರಿಡಾರ್ಗೆ 15 ಸಾವಿರ ಕೋಟಿ ರೂ. ಪೂರ್ವದಿಂದ ಪಶ್ಚಿಮ ಕಾರಿಡಾರ್ಗೆ 25 ಸಾವಿರ ಕೋಟಿ ರೂ. ರಿಂಗ್ ರಸ್ತೆ ಮೇಲ್ದರ್ಜೆಗೆ 8,916 ಕೋಟಿ ರೂ. ಗಳ ಅಗತ್ಯ ಇದೆ. ಬೆಂಗಳೂರಿನ ಪ್ರಮುಖ 17 ಫ್ಲೈ ಓವರ್ಗೆ 12 ಸಾವಿರ ಕೋಟಿ ರೂ ಅಗತ್ಯವಿದೆ ಎಂದು ಉಲ್ಲೇಖಿಸಿದ್ದಾರೆ.
ರಾಜ ಕಾಲುವೆ ನಿರ್ಣಹಣೆ, ವಿಸ್ತರಣೆಗೆ 3 ಸಾವಿರ ಕೋಟಿ ರೂ. ಅಗತ್ಯ ಇದೆ. ಬೆಂಗಳೂರಿನಲ್ಲಿ ಸದ್ಯ ಒಂದುವರೆ ಕೋಟಿ ಜನಸಂಖ್ಯೆ ಇದೆ. ಬಿಸಿನೆಸ್ ಕಾರಿಡಾರ್ಗೆ 27 ಸಾವಿರ ಕೋಟಿ ಅನುದಾನ ಅಗತ್ಯವಿದೆ. ಹೀಗಾಗಿ ಈ ಬಾರಿಯ ಬಜೆಟ್ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ ಎಂದು ಪತ್ರ ಬರೆದಿದ್ದಾರೆ.
ಇನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಗಳ ಪಾಲಿನ ತೆರಿಗೆ ಹಣವನ್ನ ಹಂಚಿಕೆ ಮಾಡಿತ್ತು. ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸಿನ ಅನುಗುಣವಾಗಿ ರಾಜ್ಯಗಳಿಗೆ ಒಟ್ಟು 1 ಲಕ್ಷ 73 ಸಾವಿರ ಕೋಟಿ ರೂಪಾಯಿ ತೆರಿಗೆ ಹಣ ಹಂಚಿದೆ. ದೇಶದಲ್ಲಿ ಅತೀ ಹೆಚ್ಚು ಹೆಚ್ಚು ತೆರಿಗೆ ಕಟ್ಟುತ್ತಿರುವುದು ಕರ್ನಾಟಕ. ಆದರೆ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಾ ಬರುತ್ತಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು. ಬಿಜೆಪಿಯ ಇಷ್ಟೊಂದು ಸಂಸದರಿದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನೋಡುತ್ತಾ ಏಕೆ ಮೌನವಾಗಿದ್ದಾರೆ ಅಂತಾ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದರು.
