ವಿಶ್ವವಿದ್ಯಾಲಯಗಳು ಬಂದ್; ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗುವುದು: ಡಿಕೆ ಶಿವಕುಮಾರ್

ಬೆಂಗಳೂರು:

    ರಾಜ್ಯದ ವಿಶ್ವವಿದ್ಯಾನಿಲಯಗಳ ಕಾರ್ಯಕ್ಷಮತೆ ಮತ್ತು ಆರ್ಥಿಕ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ರಚಿಸಲಾದ ಸಚಿವ ಸಂಪುಟ ಉಪಸಮಿತಿಯು ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ತಿಳಿಸಿದ್ದಾರೆ.

   ಶುಕ್ರವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿ ಹಾಗೂ ಒಂಬತ್ತು ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಉಪಸಮಿತಿಯ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

   ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತು ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚಲಿದೆ ಎಂದು ಮೂಲಗಳು ಶುಕ್ರವಾರ ಖಚಿತಪಡಿಸಿವೆ.

   ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಶಿವಕುಮಾರ್ ಪ್ರತಿಕ್ರಿಯಿಸಿ, ‘ನಿಮ್ಮ ಮಾತಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ನಿರ್ದಿಷ್ಟವಾಗಿ ಹೇಳುವ ನಿಮ್ಮ ಪ್ರಯತ್ನ ಫಲಿಸುವುದಿಲ್ಲ. ಬೇರೆಯವರನ್ನು ನಿಭಾಯಿಸಿದಂತೆ ನೀವು ನನ್ನನ್ನು ನಿಭಾಯಿಸಲು ಹೋಗಬೇಡಿ. ರಾಜ್ಯ, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

   ‘ಈ ವಿಷಯದಲ್ಲಿ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ. ವಿದ್ಯಾರ್ಥಿಗಳ ಭವಿಷ್ಯ ನಮ್ಮ ಆದ್ಯತೆಯಾಗಿದೆ. ಹಿರಿತನ ಹಾಗೂ ನಿವೃತ್ತಿ ಸೌಲಭ್ಯದ ಚಿಂತೆಯಿಂದಾಗಿ ಮಂಡ್ಯ ಮತ್ತು ಚಾಮರಾಜನಗರಕ್ಕೆ ಸ್ಥಳಾಂತರಗೊಳ್ಳಲು ಪ್ರಾಧ್ಯಾಪಕರು ಸಿದ್ಧರಿಲ್ಲ. ಈ ಪ್ರದೇಶಗಳ ಪೋಷಕರು ತಮ್ಮ ಮಕ್ಕಳನ್ನು ಮೈಸೂರಿಗೆ ಓದಲು ಕಳುಹಿಸಲು ಹೆಮ್ಮೆಪಡುತ್ತಾರೆ. ನಮಗೆ ಬಂದಿರುವ ಶಿಫಾರಸ್ಸುಗಳ ಬಗ್ಗೆ ಚರ್ಚಿಸುತ್ತೇವೆ ಮತ್ತು ಸಂಪುಟ ಸಭೆಯಲ್ಲಿ ಮಂಡಿಸುತ್ತೇವೆ. ನಂತರ ನಿಮಗೆ ಮಾಹಿತಿ ನೀಡುತ್ತೇವೆ’ ಎಂದು ತಿಳಿಸಿದರು.

   ಈ ಹಿಂದೆ ಹೊಸ ವಿವಿಗಳಿಗೆ ಸಂಬಂಧಿಸಿದ ಕಾನೂನಿನಡಿ ಪ್ರತಿ ವಿಶ್ವವಿದ್ಯಾಲಯಕ್ಕೆ ಕೇವಲ 2 ಕೋಟಿ ರೂ. ಮಂಜೂರು ಮಾಡಲಾಗಿತ್ತು ಮತ್ತು ನಿವೇಶನ ನೀಡಿರಲಿಲ್ಲ. ಮೈಸೂರು ವಿವಿಗೆ ಆದ್ಯತೆ ನೀಡಿದ್ದರಿಂದ ಮಂಡ್ಯ, ಚಾಮರಾಜನಗರ ವಿವಿಗಳಲ್ಲಿ ಪ್ರವೇಶ ಕುಸಿತಕ್ಕೆ ಕಾರಣವಾಯಿತು. ಈ ವಿಷಯದ ಬಗ್ಗೆ ಆಂತರಿಕ ವರದಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗೆ ನೀಡಲಾಗಿದೆ. ಬಳಿಕ ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಮಿತಿಯನ್ನು ರಚಿಸಲಾಯಿತು. ನಾವು ಶಿಫಾರಸುಗಳನ್ನು ಪರಿಶೀಲಿಸಿ ಚರ್ಚಿಸಿದ್ದೇವೆ. ಆದರೆ, ನಾವು ಇನ್ನೂ ಮುಖ್ಯಮಂತ್ರಿಗೆ ವಿವರಣೆ ನೀಡಿಲ್ಲ ಎಂದರು.’ನಾವು ಅವರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿದ ನಂತರ, ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇವೆ ಮತ್ತು ನಂತರ ಸಾರ್ವಜನಿಕರೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತೇವೆ’ ಎಂದು ಶಿವಕುಮಾರ್ ಹೇಳಿದರು.

 

Recent Articles

spot_img

Related Stories

Share via
Copy link