ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ ಭೇಟಿ: ಡಿ.ಕೆ.ಶಿವಕುಮಾರ್

ಬೆಂಗಳೂರು:

     ಪೆನ್ನಾರ್ ನದಿ ನೀರು ಹಾಗೂ ಕೋಲಾರ ಭಾಗದಿಂದ ತಮಿಳುನಾಡಿನ ಕಡೆಗೆ ಹರಿಯುವ ನೀರಿನ ವಿವಾದದ ಕುರಿತು ಕೇಂದ್ರ ಜಲಶಕ್ತಿ ಸಚಿವರ ಜತೆ ಚರ್ಚೆ ನಡೆಸಲು ದೆಹಲಿಗೆ ಭೇಟಿ ನೀಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

     ಸದಾಶಿವನಗರದ ನಿವಾಸದ ಬಳಿ ಮಂಗಳವಾರ ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪೆನ್ನಾರ್ ನದಿ ನೀರಿನ ವಿಚಾರವಾಗಿ ಎರಡು ರಾಜ್ಯಗಳ ಪ್ರತಿನಿಧಿಗಳನ್ನು ಸೇರಿಸಿ ನಿಮ್ಮಲ್ಲೇ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವಿತ್ತು. ಆದರೆ ಸೋಮವಾರ ರಾತ್ರಿ ತಮಿಳುನಾಡಿನ ಪ್ರತಿನಿಧಿಗಳು ಬರುವುದಿಲ್ಲ, ಅವರು ಪ್ರತ್ಯೇಕವಾಗಿ ಮನವಿ ಸಲ್ಲಿಸುತ್ತಾರೆ ಎನ್ನುವ ಸಂದೇಶವಿದೆ. ಅಲ್ಲಿಗೆ ಹೋದಾಗ ಇದರ ಸತ್ಯಾಸತ್ಯತೆ ತಿಳಿಯುತ್ತದೆ. ಆದರೆ ನಾನು ಆಹ್ವಾನವನ್ನು ತಿರಸ್ಕರಿಸಬಾರದು ಎಂದು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

     ಜತೆಗೆ ಇತರೆ ಇಲಾಖೆಗಳ ಸಚಿವರು, ಅರಣ್ಯ ಇಲಾಖೆಯ ಸಚಿವರನ್ನು ಸಮಯ ಸಿಕ್ಕರೆ ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. 

    ಕಾಮಗಾರಿ ವೇಳೆ ವಿದ್ಯುತ್ ಕಂಬ ಬಿದ್ದು ಮಹಿಳೆಯರು ಮೃತಪಟ್ಟಿರುವ ವಿಚಾರದ ಬಗ್ಗೆ ಕೇಳಿದಾಗ, ʼಕಾಮಗಾರಿ ಸ್ಥಳಗಳಲ್ಲಿ ಈ ರೀತಿಯ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡುತ್ತೇನೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.