ಹೆಚ್ಚುವರಿ ಡಿಸಿಎಂ ಬೇಕಿದ್ದರೆ ಹೈಕಮಾಂಡ್‌ ಹತ್ತಿರ ಮಾತನಾಡಿ : ಡಿ ಕೆ ಶಿವಕುಮಾರ್‌

ಬೆಂಗಳೂರು:

   ಇನ್ನೂ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ರಚಿಸಬೇಕು ಎನ್ನುವವರು ಹೈಕಮಾಂಡ್ ಬಳಿ ಮಾತನಾಡಲಿ. ಮಾಧ್ಯಮಗಳ ಮುಂದೆ ಚರ್ಚಿಸುವುದರಿಂದ ಯಾವುದೇ “ಪರಿಹಾರ” ಸಿಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ತಿರುಗೇಟು ನೀಡಿದ್ದಾರೆ.

   ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೆಲವು ಸಚಿವರು ಪಟ್ಟು ಹಿಡಿದಿದ್ದಾರೆ. ಸದ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದ ಶಿವಕುಮಾರ್ ಮಾತ್ರ ಉಪಮುಖ್ಯಮಂತ್ರಿಯಾಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಮಾಧ್ಯಮಗಳ ಮುಂದೆ ಮಾತನಾಡುವವರು ಹೈಕಮಾಂಡ್ ಬಳಿ ಹೋಗಿ ಮಾತನಾಡಲಿ, ಏನು ಬೇಕಾದರೂ ಪರಿಹಾರ ಪಡೆದುಕೊಂಡು ಬರಲಿ. ಮಾಧ್ಯಮದ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮಾಧ್ಯಮದವರು ಪರಿಹಾರ ಕೊಡುವುದಿಲ್ಲ. ಮಾಧ್ಯಮದವರು ಪ್ರಚಾರ ಕೊಡುತ್ತಾರೆ ಅಷ್ಟೇ. ಏನೇ ಇದ್ದರೂ ಹೈಕಮಾಂಡ್ ಮುಂದೆ ಹೋಗಿ ಮಾತನಾಡಿ ಪರಿಹಾರ ತೆಗೆದುಕೊಂಡು ಬರಲಿ” ಎಂದರು. 

    ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ, ಡಿಸಿಎಂ, ಬಹಳ ಸಂತೋಷ, ಟೈಮ್ ವೇಸ್ಟ್ ಮಾಡಬಾರದು. ಏನೇನು ಬೇಕು ಹೈಕಮಾಂಡ್ ಮುಂದೆ ಹೋಗಿ ಪರಿಹಾರ ಪಡೆಯಲಿ. ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಹೋಗಿ ಪರಿಹಾರ ಪಡೆಯಲಿ. ಡಾಕ್ಟರ್ ಬಳಿ ಹೋದರೆ ಔಷಧಿ ಕೊಡುತ್ತಾರೆ. ಲಾಯರ್ ಬಳಿ ಹೋದರೆ ನ್ಯಾಯ, ಪರಿಹಾರ ಕೊಡುತ್ತಾರೆ. ಎಲ್ಲೆಲ್ಲಿ ಹೋಗಬೇಕು ಅಲ್ಲಿಗೆ ಹುಡುಕಿಕೊಂಡು ಹೋಗಲಿ. ಯಾರು ಬೇಕಾದರು ಹೋಗಲಿ. ನನ್ನದೇನು ಅಭ್ಯಂತರ ಇಲ್ಲ” ಎಂದರು.

    ಡಿಸಿಎಂ ಬೇಡಿಕೆ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಸಚಿವ ಕೆ.ಎನ್.ರಾಜಣ್ಣ ಅವರೊಂದಿಗೆ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿದ್ದು, ಇನ್ನು ಮುಂದೆ ಈ ಕುರಿತು ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕ ಹೇಳಿಕೆಗಳಿಂದ ಸರ್ಕಾರ ಮತ್ತು ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap