ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿಕೆಶಿ

ಬೆಂಗಳೂರು: 

     ಇತ್ತೀಚೆಗೆ ಒಡಿಶಾದ ಭುವನೇಶ್ವರದಲ್ಲಿ‌ ನಡೆದ ವಿಶ್ವ ಅಥ್ಲೆಟಿಕ್ಸ್‌ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಗೌಡೇನಹಳ್ಳಿ ಗ್ರಾಮದ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಕುಮಾರಿ ಜಿ.ಕೆ. ಅವರನ್ನು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

    ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಅಥ್ಲೆಟಿಕ್ಸ್‌ನಲ್ಲಿ ನನಗೆ ಹೆಚ್ಚಿನ ಆಸಕ್ತಿ. ಹೀಗಾಗಿ ವಿಜಯಕುಮಾರಿ ಅವರ ಸಾಧನೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಗಮನಿಸಿ ನಮ್ಮ ಮಂಡ್ಯದ ಸಾಧಕಿಗೆ ಅಭಿನಂದಿಸಲಾಗುತ್ತಿದೆ. ಈಕೆಯ ಸಾಧನೆಗೆ ನನ್ನ ಸಂಪೂರ್ಣ ಸಹಕಾರ ನೆರವು ಇರಲಿದೆ ಎಂದರು.

   ಮಂಡ್ಯದ ಹೆಣ್ಣುಮಗಳು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ. ಆಕೆಯ ತರಬೇತಿಗೆ ಬೇಕಾದ ಸಕಲ ವ್ಯವಸ್ಥೆ ಮಾಡಲಾಗುವುದು. ಹಣಕಾಸಿನ ಸಮಸ್ಯೆ ಇದೆ ಎಂದು ತಿಳಿದು ಪಾಲಿಕೆ ವತಿಯಿಂದ 10 ಲಕ್ಷ ರೂ. ಪ್ರೋತ್ಸಾಧನ ನೀಡಲಾಗುವುದು. ಈ ವರ್ಷದ 5 ಲಕ್ಷ ರೂ. ಚೆಕ್ ಅನ್ನು ನೀಡಲಾಗಿದ್ದು ಮುಂದಿನ ವರ್ಷ 5 ಲಕ್ಷ ರೂ. ನೀಡುವುದಾಗಿ ತಿಳಿಸಿದರು.

   ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ವಿಜಯಕುಮಾರಿ, ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಶಾಸಕರಾದ ದಿನೇಶ್ ಗೂಳಿಗೌಡರವರಿಗೆ ಧನ್ಯವಾದಗಳು. ಇದರಿಂದ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿ ಸಿಕ್ಕಂತಾಗಿದೆ ಎಂದರು. 

   ಆರೋಗ್ಯ ಮತ್ತು ಹಣಕಾಸು ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದ ಕ್ರೀಡೆಯಲ್ಲಿ ಉತ್ಸಾಹ ಕಳೆದುಕೊಂಡಿದ್ದೆ. ಆದರೀಗ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಶಾಸಕರಾದ ದಿನೇಶ್ ಗೂಳಿಗೌಡ ಅವರ‌ ಮುಖಾಂತರ ನನ್ನನ್ನು ಸಂಪರ್ಕಿಸಿ ನನ್ನ ಸಾಧನೆಯನ್ನು ಗುರುತಿಸಿ 5 ಲಕ್ಷ ರೂ.ಗಳ ಚೆಕ್ ಅನ್ನು ನೀಡಿ ಗೌರವಿಸಿರುವುದು ನನಗೆ ಮರೆಯಲಾಗದ ಕ್ಷಣ. ಇದರಿಂದ ನನ್ನ ಹುಮ್ಮಸ್ಸು ಮತ್ತಷ್ಟು ಹೆಚ್ಚಾಗಿದೆ ಎಂದು ವಿಜಯಕುಮಾರಿ ಹೇಳಿದರು. 

   ವಿಜಯಕುಮಾರಿ ಅವರ ಸಾಧನೆಯನ್ನು ಮೆಚ್ಚಿದ ಡಿ.ಕೆ.ಶಿವಕುಮಾರ್ ಅವರು ಪಾಲಿಕೆ ವತಿಯಿಂದ 10 ಲಕ್ಷ ರೂ. ನೀಡುವುದಾಗಿ ಘೋಷಿಸಿ 5 ಲಕ್ಷ ರೂ. ಚೆಕ್‌ ಹಸ್ತಾಂತರಿಸಿದರು. ಮುಂದಿನ ವರ್ಷ ಐದು ಲಕ್ಷ ರೂ.ನ ಚೆಕ್ ನೀಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಗೌಡೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ವಿಜಯಕುಮಾರಿ ಅವರು ರಾಜ್ಯದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇವರ ಈ ಸಾಧನೆ ರಾಜ್ಯದ ಇತರೆ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.

    400 ಮೀಟರ್ ಸ್ಪರ್ಧೆಯಲ್ಲಿ 53.40 ಸೆಕೆಂಡ್ ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದಾರೆ. ಕಡುಕಷ್ಟದಲ್ಲಿ ಬೆಳೆದು ಅಪ್ರತಿಮ ಸಾಧನೆ ಮಾಡಿರುವ ವಿಜಯಕುಮಾರಿ ಅವರ ತಂದೆ ಕುಮಾರ ಅವರು ಕೃಷಿಕರಾಗಿದ್ದರೆ. ತಾಯಿ ಪ್ರೇಮ ಗೃಹಿಣಿ. ಪತಿ ತರುಣ್ ಶೇಖರ್ ಕ್ರೀಡಾ ತರಬೇತುದಾರರು.   

   ಶಾಲಾ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿದ್ದ ವಿಜಯಕುಮಾರಿ ಅವರು 16ನೇ ವಯಸಿಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಗೆ ಆಯ್ಕೆಯಾದರು. ಬಳಿಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

    ನಿರಂತರ ಅಭ್ಯಾಸ ಸತತ ಪರಿಶ್ರಮದಿಂದ ಚಿನ್ನದ ಪದಕ ಪಡೆದಿರುವ ವಿಜಯಕುಮಾರಿ ಅವರು ಮುಂದೆ ಕಾಮನ್‌ವೆಲ್ತ್ ಏಷಿಯನ್ ಗೇಮ್ಸ್ ಗೆ ಆಯ್ಕೆಯಾಗಿ ಭಾರತದ ಕೀರ್ತಿ ಪತಾಕೆ ಹಾರಿಸುವ ಇಂಗಿತ ಹೊಂದಿದ್ದಾರೆ.

Recent Articles

spot_img

Related Stories

Share via
Copy link