ದಿಡೀರ್‌ ಮುಂಬಯಿಯಲ್ಲಿ ಡಿಕೆ ಶಿವಕುಮಾರ್‌; ದಿಲ್ಲಿ ಭೇಟಿ ಇಲ್ಲ

ಬೆಂಗಳೂರು

     ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಅಧಿಕಾರ ಹಂಚಿಕೆಯ  ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರು ದಿಡೀರ್‌ ಎಂದು ಮುಬಯಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೈಕಮಾಂಡ್‌ ಭೇಟಿಯಾಗಲು ದೆಹಲಿಗೆ  ತೆರಳಲಿದ್ದಾರೆ ಎಂಬ ಸುದ್ದಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ನನ್ನನ್ನು ಹೈಕಮಾಂಡ್ ಆಗಲಿ ಅಥವಾ ದೆಹಲಿಯ ಯಾವ ನಾಯಕರೇ ಆಗಲಿ ಅಲ್ಲಿಗೆ ಬರುವಂತೆ ಕರೆದಿಲ್ಲ. ಇದೆಲ್ಲವೂ ಕೇವಲ ಊಹಾಪೋಹ,” ಎಂದು ನೇರವಾಗಿ ಸ್ಪಷ್ಟಪಡಿಸಿದರು. ಈ ಮೂಲಕ ಶನಿವಾರ ಅವರು ದೆಹಲಿಗೆ ಹಾರಲಿದ್ದಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿದರು.

    ದೆಹಲಿ ಪ್ರವಾಸ ಇಲ್ಲ ಎಂದರೂ, ಡಿಕೆಶಿ ಗುರುವಾರ ಸಂಜೆ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಿದರು. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಅದರಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಸಂಜೆ ಹೋಗಿ ರಾತ್ರಿಯೇ ವಾಪಸ್ ಬೆಂಗಳೂರಿಗೆ ಮರಳಲಿದ್ದೇನೆ ಎಂದು ಮಾಹಿತಿ ನೀಡಿದರು. ಈ ದಿಢೀರ್ ಮುಂಬೈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

    ಶುಕ್ರವಾರ ತಾವು ಬೆಂಗಳೂರಿನಲ್ಲೇ ಇರುವುದಾಗಿ ಡಿಕೆಶಿ ತಿಳಿಸಿದ್ದಾರೆ. “ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರು ಜಾರಿಗೆ ತಂದಿದ್ದ ಮಹತ್ವದ ಅಂಗನವಾಡಿ ಯೋಜನೆಗೆ ನಾಳೆ 50 ವರ್ಷ ತುಂಬುತ್ತಿದೆ. ಈ ಐತಿಹಾಸಿಕ ಕ್ಷಣದ ಅಂಗವಾಗಿ ಹಮ್ಮಿಕೊಳ್ಳಲಾದ ವಿಶೇಷ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿದ್ದೇನೆ,” ಎಂದು ತಮ್ಮ ಮುಂದಿನ ದಿನದ ಕಾರ್ಯಸೂಚಿಯನ್ನು ವಿವರಿಸಿದರು.

    ಒಂದೆಡೆ ಡಿಕೆಶಿ ತಮಗೆ ಬುಲಾವ್ ಬಂದಿಲ್ಲ ಎನ್ನುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ನಿಂದ ಕರೆ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶನಿವಾರ ಸಿಎಂ ಮತ್ತು ಡಿಸಿಎಂ ಇಬ್ಬರೂ ದೆಹಲಿಯಲ್ಲಿ ವರಿಷ್ಠರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ, ಅದರಲ್ಲಿ ನಾಯಕತ್ವ ಅಥವಾ ಸಂಪುಟಕ್ಕೆ ಸಂಬಂಧಿಸಿದ ಚರ್ಚೆ ನಡೆಯಲಿದೆ ಎಂದು ಸುದ್ದಿಯಾಗಿತ್ತು. ಸದ್ಯಕ್ಕೆ ಡಿಕೆಶಿ ಹೇಳಿಕೆ ಈ ಚರ್ಚೆಗೆ ತಾತ್ಕಾಲಿಕ ವಿರಾಮ ಹಾಕಿದೆ. ಆದರೂ, ತೆರೆಮರೆಯಲ್ಲಿ ಏನೋ ಮಹತ್ವದ ಬೆಳವಣಿಗೆ ನಡೆಯುತ್ತಿದೆ ಎಂಬ ಅನುಮಾನ ಮಾತ್ರ ಹಾಗೆಯೇ ಉಳಿದಿದೆ.

Recent Articles

spot_img

Related Stories

Share via
Copy link