ಬೆಳಗಾವಿ:
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ನಾಯಕತ್ವದ ಗೊಂದಲಗಳ ನಡುವೆ, ಶಾಸಕರ ಬೆಂಬಲದ ಬಲಪ್ರದರ್ಶನ ನಡೆಯುತ್ತಿದೆ ಎಂಬ ಆರೋಪಗಳನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ತಮಗೆ ಅಧಿಕಾರವನ್ನು ಪ್ರದರ್ಶಿಸುವ ಅಗತ್ಯವಿಲ್ಲ ಅಥವಾ ಶಾಸಕರನ್ನು ತಮ್ಮ ಹಿಂದೆ ಒಗ್ಗೂಡಿಸಿ ಬೆಂಬಲ ತೋರಿಸಲು ಪ್ರಯತ್ನಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಯಾವುದೇ ಶಕ್ತಿ ಪ್ರದರ್ಶನವನ್ನು ಮಾಡುತ್ತಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಯಾರೂ ನನ್ನ ಹಿಂದೆ ಬರಬೇಡಿ, ಯಾರೂ ನನ್ನ ಪರವಾಗಿ ಮಾತನಾಡಬೇಡಿ ಎಂದು ಹೇಳುತ್ತೇನೆ ಎಂದರು. ಬಣಗಳ ಬಗ್ಗೆ ಯಾವುದೇ ಚರ್ಚೆ ಮಾಡಬೇಡಿ, ಅಥವಾ ಅಂತಹ ಮಾತುಗಳಿಗೆ ಪ್ರೋತ್ಸಾಹ ಕೊಡಬೇಡಿ ಎಂದು ನಾನೇ ಶಾಸಕರಿಗೆ ಹೇಳುತ್ತೇನೆ ಎಂದರು.
ಮುಖ್ಯಮಂತ್ರಿಯ ಅಧಿಕಾರಾವಧಿಯ ಕುರಿತು ಯತೀಂದ್ರ ಸಿದ್ದರಾಮಯ್ಯ ಅವರ ಪುನರಾವರ್ತಿತ ಹೇಳಿಕೆಗಳಿಗೆ, ಶಿವಕುಮಾರ್ ಅವರು, ನನಗೆ ಆ ಬಗ್ಗೆ ಗೊತ್ತಿಲ್ಲ, ಮುಖ್ಯಮಂತ್ರಿಗಳೇ ಅದಕ್ಕೆ ಉತ್ತರ ಕೊಡುತ್ತಾರೆ ಎಂದರು. ಲೋಕಸಭಾ ಚುನಾವಣೆಯ ಸಮಯದಲ್ಲಿ ದೊಡ್ಡ ಪ್ರಮಾಣದ ಮತ ವಂಚನೆಯ ವಿರುದ್ಧದ ನಾಳೆ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಇಂದು ದೆಹಲಿಗೆ ಹೋಗುತ್ತಿದ್ದೇನೆ ಎಂದರು.
ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿಯೇ ಮತ ಕಳ್ಳತನದ ವಿರುದ್ಧ ಈ ಹೋರಾಟವನ್ನು ಪ್ರಾರಂಭಿಸಿದರು. ನಾವು 2023 ರಲ್ಲಿ ಚಿಲುಮೆ ಹಗರಣದ ಮೂಲಕ ಮತದಾರರ ದತ್ತಾಂಶ ಕಳ್ಳತನವನ್ನು ಬಹಿರಂಗಪಡಿಸಿದ್ದೇವೆ, ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದೇವೆ. ಈಗ ರಾಹುಲ್ ಗಾಂಧಿಯವರು ರಾಷ್ಟ್ರದ ಮುಂದೆ ಪುರಾವೆಗಳನ್ನು ಇಟ್ಟಿದ್ದಾರೆ ಎಂದರು. ಮತಕಳ್ಳತನ ಆರೋಪ ವಿರುದ್ಧ ಪ್ರತಿಭಟನೆ ನಡೆಸಲು ಸಿಎಂ ಸಿದ್ದರಾಮಯ್ಯ ನಾಳೆ ದೆಹಲಿಗೆ ಹೋಗುತ್ತಿದ್ದಾರೆ.
ಚುನಾವಣಾ ಆಯೋಗವು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಸಾಧನವಾಗಿ ಮಾರ್ಪಟ್ಟಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯಾದ್ಯಂತ ನಡೆದ ಅಭಿಯಾನದ ಸಮಯದಲ್ಲಿ 1.43 ಕೋಟಿ ಸಹಿಗಳನ್ನು ಸಂಗ್ರಹಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಡಿ ಕೆ ಶಿವಕುಮಾರ್ ಅಭಿನಂದಿಸಿದರು.
ಸುರಕ್ಷತಾ ಕಾಳಜಿಯನ್ನು ಅನುಸರಿಸಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ, ಸರ್ಕಾರವು ನಗರದ ಖ್ಯಾತಿಯನ್ನು ರಕ್ಷಿಸಲು ಕ್ರಮ ಕೈಗೊಂಡಿದೆ ಎಂದರು.ಭವಿಷ್ಯದಲ್ಲಿ ದುರ್ಘಟನೆಗಳನ್ನು ತಪ್ಪಿಸಲು, ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಅದಕ್ಕೆ ಅನುಗುಣವಾಗಿ ನಾವು ಅನುಮತಿ ನೀಡಿದ್ದೇವೆ ಎಂದು ಹೇಳಿದರು.
ಡಿ’ಕುನ್ಹಾ ಸಮಿತಿಯ ಶಿಫಾರಸುಗಳನ್ನು ಗೌರವಿಸಬೇಕು. ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ವಹಿಸಲಾಗಿದೆ ಎಂದು ಹೇಳಿದರು.ಗೃಹ ಸಚಿವರು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.








