ನಾನು ಕಾಂಗ್ರೆಸ್‌ನ ಕಾರ್ಯಕರ್ತ, ಅದೇ ನನಗೆ ಶಾಶ್ವತ: ಡಿಕೆ ಶಿವಕುಮಾರ್‌

ಬೆಂಗಳೂರು

     ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ  ಚರ್ಚೆ ನಡೆಯುತ್ತಲೇ ಇದೆ. ಆದರೆ ಕಾಂಗ್ರೆಸ್‌  ಹೈಕಮಾಂಡ್‌ ಅದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬುದೂ ಗೊತ್ತಾಗಿದೆ. ಈ ನಡುವೆ, ಡಿಸಿಎಂ ಡಿಕೆ ಶಿವಕುಮಾರ್‌  ಅವರ ಒಂದು ಹೇಳಿಕೆ ಕುತೂಹಲ ಮೂಡಿಸಿದೆ. ʼನಾನು ಕಾಂಗ್ರೆಸ್‌ ಕಾರ್ಯಕರ್ತ, ಅದೇ ನನಗೆ ಶಾಶ್ವತʼ ಎಂದಿದ್ದಾರೆ ಡಿಕೆಶಿ.

    ಡಿಸಿಎಂ ಡಿಕೆ ಶಿವಕುಮಾರ್ ಆಡಿರುವ ಮಾತಿನ ಹಿಂದೆ ಒಂದು ರೀತಿಯ ವೈರಾಗ್ಯ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. “ಸುಮಾರು 45 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ, ಪೋಸ್ಟರ್ ಕೂಡಾ ಅಂಟಿಸಿದ್ದೇನೆ, ಕಚೇರಿಯಲ್ಲಿ ಕಸವನ್ನೂ ಗುಡಿಸಿದ್ದೇನೆ. ನಾನು ಇಂದು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದರೆ, ಪಕ್ಷಕ್ಕಾಗಿ ಪಟ್ಟ ಪರಿಶ್ರಮ. ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ, ನನಗೆ ಅದೇ ಶಾಶ್ವತ. ನನ್ನ ಹಾಗೇ, ಪ್ರತೀ ಕಾರ್ಯಕರ್ತರು ಪಕ್ಷಕ್ಕಾಗಿ ಬೆವರು ಸುರಿಸುತ್ತಿದ್ದಾರೆ. ನಮ್ಮ ನಡುವೆ ಅಂದು ನಡೆದ ಮಾತುಕತೆಯ ವಿಚಾರವನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲು ಸಾಧ್ಯವಿಲ್ಲ” ಎಂದು ದೆಹಲಿಯ ಕರ್ನಾಟಕ ಭವನದಲ್ಲಿ ಹೇಳಿದ್ದರು.

    ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ದೆಹಲಿಗೆ ಕಳೆದ ತಿಂಗಳಲ್ಲಿ ಹಲವು ಬಾರಿ ಭೇಟಿ ನೀಡಿದ್ದರು. ಆದರೆ, ವಿವಿಧ ಕಾರಣಗಳಿಂದ ರಾಹುಲ್ ಗಾಂಧಿ ಅವರಿಗೆ ಸಮಯಾವಕಾಶವನ್ನು ನೀಡಿರಲಿಲ್ಲ. ಆದರೆ, ಇದರ ಬೆನ್ನಲ್ಲೇ ದೆಹಲಿಗೆ ಹೋಗಿದ್ದ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮತ್ತು ಪ್ರಿಯಾಂಕ್ ಖರ್ಗೆಗೆ, ರಾಹುಲ್ ಭೇಟಿ ಸಾಧ್ಯವಾಗಿತ್ತು. 

   ಹರಿಪ್ರಸಾದ್ ಮತ್ತು ಪ್ರಿಯಾಂಕ್ ಖರ್ಗೆ ಅವರನ್ನು ರಾಹುಲ್ ಗಾಂಧಿ ಕರೆದು ಮಾತನಾಡಿಸುತ್ತಾರೆ. ಆದರೆ, ಡಿಕೆ ಶಿವಕುಮಾರ್’ಗೆ ಅವಕಾಶವನ್ನು ಕೊಡುವುದಿಲ್ಲ. ಈ ವಿದ್ಯಮಾನವನ್ನು ನೋಡಿಯಾದರೂ ಡಿಕೆಶಿ ಕಲಿಯಬೇಕಲ್ಲವೇ? ಸದ್ಯದ ಪರಿಸ್ಥಿತಿಯಲ್ಲಿ ಹೈಕಮಾಂಡ್’ಗೆ ಅವರನ್ನು ಭೇಟಿಯಾಗುವ ಇಚ್ಚೆಯಿಲ್ಲ ಎನ್ನುವುದು ಸಾಬೀತಾಗುವುದಲ್ಲವೇ ಎನ್ನುವ ಮಾತನ್ನು ಕೆಎನ್ ರಾಜಣ್ಣ ಆಡಿದ್ದರು.

   ಇದರ ಬೆನ್ನಲ್ಲೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎಚ್ಚರಿಕೆಯನ್ನು ನೀಡಿದ್ದರು ಎನ್ನುವ ಸುದ್ದಿಯೂ ಇದೆ. ಅಧಿಕಾರ ಹಸ್ತಾಂತರದ ವಿಚಾರಕ್ಕೆ ಸಂಬಂಧಿಸಿದಂತೆ, ನೀವಾಗಲಿ ಅಥವಾ ನಿಮ್ಮ ಬೆಂಬಲಿಗರಾಗಲಿ ಬಹಿರಂಗವಾಗಿ ಹೇಳಿಕೆಯನ್ನು ನೀಡಬಾರದು. ಈ ವಿಚಾರದ ಬಗ್ಗೆ ಯಾರೂ ಮಾತನಾಡಕೂಡದು, ಇದನ್ನು ನಾವು ಸರಿಪಡಿಸುತ್ತೇವೆ. ಅದು ಹೈಕಮಾಂಡ್ ಕೆಲಸ. ಸ್ಥಳೀಯರ ನಾಯಕರು ಇದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎನ್ನುವ ಮಾತನ್ನು ಕೆಸಿ ವೇಣುಗೋಪಾಲ್ ಹೇಳಿದ್ದಾರೆ ಎನ್ನಲಾಗುತ್ತಿದೆ.

   ಕೆಲವು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದಂತೆ, ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಸಮಸ್ಯೆಯಿಲ್ಲ, ಇದೆಲ್ಲಾ ಸ್ಥಳೀಯವಾಗಿ ಹುಟ್ಟು ಹಾಕಲಾಗಿರುವ ಸಮಸ್ಯೆಗಳು. ಇದನ್ನು ಇಲ್ಲಿನ ನಾಯಕರುಗಳೇ ಸರಿ ಮಾಡಿಕೊಳ್ಳಬೇಕು ಎಂದು ಖರ್ಗೆ ಹೇಳಿದ್ದರು. ಆದರೆ, ರಾಹುಲ್ ಗಾಂಧಿ ಏನೂ ಹೇಳುತ್ತಾರೋ ಅದಕ್ಕೆ ನಾನು ಬದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೆಲ್ಲದರ ಪರಿಣಾಮ, ಅಧಿಕಾರ ಹಸ್ತಾಂತರ ಎಂಬುದು ಇನ್ನೂ ಬಗೆಹರಿಯದ ಗೊಂದಲವಾಗಿದೆ.

Recent Articles

spot_img

Related Stories

Share via
Copy link