ಬೆಳಗಾವಿ
ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ. ಈ ಹಿಂದೆ ಹೇಳಿದ್ದ ಮಾತನ್ನೇ ಪುನರುಚ್ಚರಿಸಿರುವ ಅವರು, ನಾಯಕತ್ವದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಾಯಕತ್ವದ ಬಗ್ಗೆ ಯಾರೂ ಮಾತನಾಡಬೇಡಿ ಎಂದು ಹೈಕಮಾಂಡ್ ಎಚ್ಚರಿಸಿದ್ದರೂ ಯತೀಂದ್ರ ಮತ್ತೆ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಹಿನ್ನೆಲೆಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ, ‘ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಜಗಳ ಇಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ’ ಎಂದು ಘೋಷಿದರು. ಅಧಿವೇಶನ ಆರಂಭವಾದಾಗಿನಿಂದ ಇದು ಮೂರನೇ ಬಾರಿ ಯತೀಂದ್ರ ಅವರು ತಮ್ಮ ತಂದೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಖಚಿತಪಡಿಸುತ್ತಿದ್ದಾರೆ.
ಇದೇ ವೇಳೆಗೆ, ಯತೀಂದ್ರ ಅವರ ಮಾತಿಗೆ ನೇರ ಪ್ರತಿಕ್ರಿಯೆ ಕೊಡುವುದರಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಪ್ಪಿಸಿಕೊಂಡರು. ಅಧಿಕಾರ ಹಂಚಿಕೆ ಕುರಿತು ಚರ್ಚೆ ಇಲ್ಲ ಎಂಬ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ‘ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ಕೊಡುತ್ತಾರೆ’ ಎಂದು ಹೇಳುವ ಮೂಲಕ ಯತೀಂದ್ರ ಅವರ ಹೇಳಿಕೆಯಿಂದ ದೂರ ಉಳಿದರು.
ಇದೇ ವಿಚಾರವಾಗಿ ಸುವರ್ಣಸೌಧದಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್ ಅವರು, ನಾಯಕತ್ವದ ಗೊಂದಲವನ್ನು ತಳ್ಳಿಹಾಕಿದರು. ‘ಯಾವ ಚರ್ಚೆನೂ ಇಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಏನು ಹೇಳುತ್ತೋ ಅದನ್ನು ಫಾಲೋ ಮಾಡುತ್ತೇವೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿಎಂ ಕೂಡ ಹೇಳಿದ್ದಾರೆ’ ಎಂದು ತಿಳಿಸಿದರು.








