ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಪಂದ್ಯಗಳಿಗೆ ಅನುಮತಿ ನೀಡಲು ಕ್ರಮ: ಡಿ ಕೆ ಶಿವಕುಮಾರ್‌

ಬೆಳಗಾವಿ: 

   ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್  ಭರವಸೆಯನ್ನು ನೀಡಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು  ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ  ಚಾಂಪಿಯನ್‌ ಆದ ಬಳಿಕ, ಈ ಕ್ರೀಡಾಂಗಣದಲ್ಲಿ ಅಭಿನಂದನೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ವೇಳೆ ನಿರೀಕ್ಷೆಗೂ ಮೀರಿದ ಜಜ ಸಾಗರ ಹರಿದು ಬಂದಿದ್ದರಿಂದ ನೂಕು ನುಗ್ಗುಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ 12 ಮಂದಿ ಮೃತಪಟ್ಟಿದ್ದರು. ಅಂದಿನಿಂದ ಈ ಅಂಗಣದಲ್ಲಿ ಪಂದ್ಯಗಳು ನಡೆಯುತ್ತಿಲ್ಲ.

   ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ತಮ್ಮನ್ನು ಭೇಟಿ ಮಾಡಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. “ನಮಗೆ ಕ್ರಿಕೆಟ್ ಟೂರ್ನಿಗಳನ್ನು ನಿಲ್ಲಿಸಬೇಕು ಎನ್ನುವ ಯಾವುದೇ ಉದ್ದೇಶವಿಲ್ಲ. ಆದರೆ ಜನಜಂಗುಳಿಯ ನಿಯಂತ್ರಣ ಕ್ರಮಗಳ ಬಗ್ಗೆ ಆಲೋಚಿಸಬೇಕು. ಜೊತೆಗೆ ಮೈಕಲ್ ಡಿ ಕುನ್ಹಾ ಸಮಿತಿ ನೀಡಿರುವ ಸಲಹೆಗಳನ್ನು ಹಂತ, ಹಂತವಾಗಿ ಪಾಲನೆ ಮಾಡುವುದು ನಮ್ಮ ಆಲೋಚನೆ. ಇದನ್ನು ವೆಂಕಟೇಶ್ ಪ್ರಸಾದ್ ಅವರು ಕೂಡ ಒಪ್ಪಿಕೊಂಡಿದ್ದಾರೆ,” ಎಂದರು.

   “ನಮ್ಮ ರಾಜ್ಯದ ಗೌರವ, ಸ್ವಾಭಿಮಾನಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಐಪಿಎಲ್ ಸೇರಿದಂತೆ ಯಾವುದೇ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ. ಒಗ್ಗೂಡಿ ‌ಕೆಲಸ ಮಾಡೋಣ ಎಂದು ತಿಳಿಸಿದ್ದೇನೆ. ನೂತನ ಸ್ಟೇಡಿಯಂಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದರ ಬಗ್ಗೆಯೂ ಚರ್ಚೆ ನಡೆಸಲಾಗುವುದು,” ಎಂದು ಮಾಹಿತಿ ನೀಡಿದ್ದಾರೆ.

   “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದೆ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಬೇಕು ಎಂದು ನೂತನವಾಗಿ ಕೆಎಸ್ ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತು ತಂಡದವರು ಮುಖ್ಯಮಂತ್ರಿಯವರು ಹಾಗೂ ನನ್ನನ್ನು ಭೇಟಿ ಮಾಡಿ ಸರ್ಕಾರದ ಸಹಕಾರ ಕೋರಿದ್ದಾರೆ,” ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

    “ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅವರ ಬೆಂಬಲ ಹೊಂದಿರುವ ಹಾಗೂ ನೂತನ ಜವಾಬ್ದಾರಿ ಹೊತ್ತಿರುವ ವೆಂಕಟೇಶ್ ಪ್ರಸಾದ್ ಅವರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.‌ ಇವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದೇನೆ,” ಎಂದರು.

Recent Articles

spot_img

Related Stories

Share via
Copy link