ಭಾರತ ದುಬೈನಲ್ಲಿ ಮಾತ್ರ ಆಡುತ್ತಿದೆ ಎಂದು ಟೀಕಿಸಿದವರಿಗೆ ದಾದಾ ತಿರುಗೇಟು!

ನವದೆಹಲಿ:

    ಪಾಕಿಸ್ತಾನಕ್ಕೆ ತೆರಳದೆ ಭಾರತ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಯುಎಇಯ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಡುತ್ತಿರುವುದರ ಬಗ್ಗೆ ಇಂಗ್ಲೆಂಡ್‌ನ ಮಾಜಿ ಆಟಗಾರರಾದ ನಾಸರ್‌ ಹುಸೇನ್‌ ಮತ್ತು ಮೈಕಲ್‌ ಅಥರ್ಟನ್‌ ಟೀಕಿಸಿದ್ದರು. ಒಂದೇ ಕ್ರೀಡಾಂಗಣದಲ್ಲಿ ಆಡುವುದು ಭಾರತ ತಂಡಕ್ಕೆ ಅನುಕೂಲಕರವಾಗಿದೆ ಎಂದು ಆರೋಪ ಮಾಡಿದ್ದರು. ಇದೀಗ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ಮಾಜಿ ಆಟಗಾರರಿಗೆ ತಿರುಗೇಟು ನೀಡಿದ್ದಾರೆ.

   ಭಾರತ ತಂಡ ಲೀಗ್‌ ಹಂತದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಗೆಲುವು ಪಡೆದಿತ್ತು. ಮೂರೂ ಪಂದ್ಯಗಳನ್ನು ಗೆದ್ದ ಬಳಿಕೆ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರರಾದ ಮೈಕಲ್‌ ಅಥರ್ಟನ್‌, ನಾಸರ್‌ ಹುಸೇನ್‌, ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಕರ್‌ ಹಾಗೂ ದಕ್ಷಿಣ ಆಫ್ರಿಕಾ ಬ್ಯಾಟರ್‌ ರಾಸಿ ವ್ಯಾನ್‌ ಡೆರ್‌ ಡುಸೆನ್‌ ಕೂಡ ಆರೋಪ ಮಾಡಿದ್ದರು. ಭಾರತ ತಂಡ ಒಂದೇ ಅಂಗಣದಲ್ಲಿ ಆಡುವುದರಿಂದ ಅವರಿಗೆ ಲಾಭದಾಯಕವಾಗಿದೆ ಎಂದು ಅವರು ದೂರಿದ್ದರು. 

   ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸೌರವ್‌ ಗಂಗೂಲಿ, “ಭಾರತ ತಂಡ ಏನಾದರೂ ಪಾಕಿಸ್ತಾನದಲ್ಲಿ ಆಡಿದ್ದರೆ, ಇನ್ನಷ್ಟು ಹೆಚ್ಚಿನ ರನ್‌ಗಳನ್ನು ಕಲೆ ಹಾಕುತ್ತಿತ್ತು. ದುಬೈ ಕಂಡೀಷನ್ಸ್‌ ನಿಧಾನಗತಿಯಿಂದ ಕೂಡಿದೆ ಹಾಗೂ ಹೆಚ್ಚಿನ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿ ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಳ್ಳದೆ 300 ಕ್ಕೂ ಹೆಚ್ಚಿನ ರನ್‌ಗಳನ್ನುಕಲೆ ಹಾಕಲು ಸಾಧ್ಯವಾಗುತ್ತಿತ್ತು. ಪಾಕಿಸ್ತಾನದಲ್ಲಿನ ಪಿಚ್‌ಗಳು ಅತ್ಯುತ್ತಮವಾಗಿವೆ. ಭಾರತ ತಂಡಲ್ಲಿ ಅಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸುತ್ತಿತ್ತು,” ಎಂದು ಸಿಎಬಿಗೆ ತಿಳಿಸಿದ್ದಾರೆ. 

   ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ರೋಹಿತ್‌ ಶರ್ಮಾ, ಭಾರತ ತಂಡ ಕೇವಲ ದುಬೈ ಅಂಗಣದಲ್ಲಿ ಆಡುತ್ತಿರುವ ಬಗ್ಗೆ ಆರೋಪ ಮಾಡಿದ್ದವರಿಗೆ ತಿರುಗೇಟು ನೀಡಿದ್ದರು.

  “ಸೆಮಿಫೈನಲ್‌ ಪಂದ್ಯದಲ್ಲಿ ಪಿಚ್‌ ಹೇಗೆ ವರ್ತಿಸಲಿದೆ ಎಂದು ನಮಗೆ ಗೊತ್ತಿಲ್ಲ. ಪಂದ್ಯದಲ್ಲಿ ಏನೇ ನಡೆದರೂ ನಾವು ಅದಕ್ಕೆ ಹೊಂದಿಕೊಳ್ಳಬೇಕು ಹಾಗೂ ಏನಾಗಲಿದೆ ಎಂಬುದನ್ನು ನೋಡಬೇಕಾಗುತ್ತದೆ. ನಾವು ಆಡುತ್ತೇವೆ. ಇದು ನಮ್ಮ ತವರು ಅಂಗಣವಲ್ಲ, ಇದು ದುಬೈ. ಹಾಗಾಗಿ ನಾವು ಇಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿಲ್ಲ ಹಾಗೂ ಇದು ನಮ್ಮ ಪಾಲಿಗೆ ಹೊಸತು,” ಎಂದು ರೋಹಿತ್‌ ಶರ್ಮಾ ದುಬೈ ಅಂಗಣದ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದರು. 

   ಮಂಗಳವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕೊನೆಯ ಬಾರಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದಕ್ಕೂ ಮುನ್ನ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ತಂಡ ಸೋಲಿಸಿತ್ತು. ಆದರೆ, ಇದೀಗ ಸ್ಟೀವನ್‌ ಸ್ಮಿತ್‌ ನಾಯತ್ವದ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌, ಮಿಚೆಲ್‌ ಸ್ಟಾರ್ಕ್‌, ಮಿಚೆಲ್‌ ಮಾರ್ಷ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಸೇರಿದಂತೆ ಕೀ ಆಟಗಾರರು ಅಲಭ್ಯರಾಗಿದ್ದಾರೆ.

Recent Articles

spot_img

Related Stories

Share via
Copy link