ದ.ಕೋರಿಯಾ : 16 ವರ್ಷದ ನಂತರ ಬಯಲಾಯ್ತು ರಹಸ್ಯ

ದ.ಕೋರಿಯಾ :

   ಇತ್ತೀಚಿಗೆ ಬೆಳಕಿಗೆ ಬಂದ ಪ್ರಕರಣವೊಂದರಲ್ಲಿ ದಕ್ಷಿಣ ಕೊರಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಂದು ಆಕೆಯ ದೇಹವನ್ನು ತನ್ನ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಸಿಮೆಂಟ್ ಅಡಿಯಲ್ಲಿ ಹಾಕಿದ್ದ. ಮಹಿಳೆ ಕಾಣೆಯಾದ 16 ವರ್ಷಗಳ ನಂತರ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ.

   58 ವರ್ಷದ ವ್ಯಕ್ತಿಯನ್ನು ಬಂಧಿಸಿ ಕೊಲೆ ಆರೋಪ ಹೊರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕೊಲೆ ಪ್ರಕರಣವು 2008 ರಲ್ಲಿ ಸಂಭವಿಸಿತು. ತೀವ್ರ ವಾಗ್ವಾದದ ಸಮಯದಲ್ಲಿ ಆರೋಪಿ 30 ರ ಹರೆಯದ ತನ್ನ ಆಗಿನ ಗೆಳತಿಗೆ ಮೊಂಡಾದ ವಸ್ತುವಿನಿಂದ ಹೊಡೆದಿದ್ದ. ಸೂಟ್‌ಕೇಸ್‌ನಲ್ಲಿ ಆಕೆಯ ದೇಹವನ್ನು ಬಚ್ಚಿಟ್ಟು ನಂತರ ಶವವನ್ನು ತನ್ನ ಫ್ಲಾಟ್‌ನ ಬಾಲ್ಕನಿಯಲ್ಲಿಟ್ಟು ಅದರ ಮೇಲೆ ಇಟ್ಟಿಗೆ ಮತ್ತು ಸಿಮೆಂಟ್ ಹಾಕಿ ಮುಚ್ಚಿದ್ದ.

   ಇಟ್ಟಿಗೆಗಳಿಗೆ ಹಸಿರು ಬಣ್ಣ ಹೊಡೆದಿದ್ದರಿಂದ ಆ ಜಾಗ ಬಾಲ್ಕನಿ ರಚನೆಯ ಭಾಗವೆಂದು ಭಾವಿಸಲಾಗಿತ್ತೆಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಇತ್ತೀಚಿಗೆ ಫ್ಲಾಟ್ ನ ಮಾಲೀಕರು ನೀರಿನ ಸೋರಿಕೆಯನ್ನು ಸರಿಪಡಿಸಲು ಕಾರ್ಮಿಕನನ್ನು ಕರೆಸಿ ನೀರು ಸೋರಿಕೆಯ ಮೂಲ ಹುಡುಕುತ್ತಿದ್ದಾಗ ಆಗಸ್ಟ್ ನಲ್ಲಿ ಶವ ಸಿಕ್ಕಿತ್ತು.

   ಜಿಯೋಂಗ್ನಮ್ ಪ್ರಾಂತೀಯ ಪೊಲೀಸ್ ಮತ್ತು ಜಿಯೋಜೆ ಪೊಲೀಸ್ ಠಾಣೆಯ ಪ್ರಕಾರ ಮಹಿಳೆಯ ದೇಹದ ಮೇಲೆ ಪುರುಷ 10-ಸೆಂಟಿಮೀಟರ್ ಸಿಮೆಂಟ್ ಪದರವನ್ನು ಹಾಕಿದ್ದ. ಇದರಿಂದಾಗಿ ಆಕೆಯ ಶವ ಹೆಚ್ಚು ಕೊಳೆತಿರಲಿಲ್ಲ. ನಂತರ ಪೊಲೀಸರು ಬೆರಳಚ್ಚು ಮತ್ತು ಡಿಎನ್‌ಎ ಪರೀಕ್ಷೆಯ ಮೂಲಕ ಮಹಿಳೆಯನ್ನು ಗುರುತಿಸಿದ್ದಾರೆ.2008 ರ ಅಕ್ಟೋಬರ್‌ನಲ್ಲಿ ಕೊಲೆಯಾದ ಮೂರು ವರ್ಷಗಳ ನಂತರದವರೆಗೂ ಮಹಿಳೆಯ ಕಾಣೆಗೆ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಆಕೆ ತನ್ನ ಕುಟುಂಬದೊಂದಿಗೆ ಸಂಪರ್ಕ ಹೊಂದಿರದೇ ಇದ್ದ ಕಾರಣ ದೂರು ದಾಖಲಾಗಿರಲಿಲ್ಲ.