ಹೈಜಾಕ್ ಮಾಡಲು ಹೋಗಿ ಪ್ರಯಾಣಿಕನ ಗುಂಡೇಟಿಗೆ ಬಲಿಯಾದ ದಾಳಿಕೋರ

ಬೆಲೀಜ್

     ಚಾಕು ತೋರಿಸಿ ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪ್ರಯಾಣಿಕರೊಬ್ಬರು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೆಲೀಜ್​ನಲ್ಲಿ ನಡೆದಿದೆ. ಅಮೆರಿಕದ ಪ್ರಜೆಯೊಬ್ಬ ಚಾಕು ತೋರಿಸಿ ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಿದ್ದ ಕೂಡಲೇ ಪ್ರಯಾಣಿಕರೊಬ್ಬರು ಪರವಾನಗಿ ಹೊಂದಿರುವ ಪಿಸ್ತೂಲಿನಿಂದ ಆರೋಪಿಗೆ ಗುಂಡು ಹಾರಿಸಿದ ಪರಿಣಾಮ ಆತ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ.

   ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ಅವರ ಪ್ರಕಾರ, ದಾಳಿಕೋರನನ್ನು ನಂತರ ಅಮೆರಿಕದ ಪ್ರಜೆ ಅಕಿನ್ಯೆಲಾ ಸಾವಾ ಟೇಲರ್ ಎಂದು ಗುರುತಿಸಲಾಯಿತು. ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದಂತೆ, ಕಮಿಷನರ್ ವಿಲಿಯಮ್ಸ್ ಟೇಲರ್ ಮೇಲೆ ಗುಂಡು ಹಾರಿಸಿದ ಪ್ರಯಾಣಿಕನನ್ನು ಹೊಗಳಿ ಹೀರೋ ಎಂದು ಉದ್ಘರಿಸಿದ್ದಾರೆ. ಟೇಲರ್ ವಿಮಾನದೊಳಗೆ ಚಾಕುವನ್ನು ಹೇಗೆ ತರುವಲ್ಲಿ ಯಶಸ್ವಿಯಾದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ನಡೆಯುತ್ತಿರುವ ತನಿಖೆಗೆ ಸಹಾಯಕ್ಕಾಗಿ ಬೆಲೀಜ್ ಅಧಿಕಾರಿಗಳು ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. 

   49 ವರ್ಷದ ದಾಳಿಕೋರ ವಿಮಾನವನ್ನು ದೇಶದಿಂದ ಹೊರಗೆ ಕರೆದೊಯ್ಯಲು ಬಯಸಿದ್ದ. ಸ್ಯಾನ್ ಪೆಡ್ರೊಗೆ ಹೋಗುವ ವಿಮಾನದೊಳಗೆ ಅಕಿನ್ಯೆಲಾ ಸಾವಾ ಟೇಲರ್ ಜನರ ಮೇಲೆ ಏಕಾಏಕಿ ಹಲ್ಲೆ ನಡೆಸಲು ಪ್ರಾರಂಭಿಸಿದ್ದ. ಪ್ರಯಾಣಿಕರೊಬ್ಬರು ಆತನ ಮೇಲೆ ಗುಂಡು ಹಾರಿಸಿದ ಬಳಿಕ ವಿಮಾನವನ್ನು ತುರ್ತಾಗಿ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಷ್ಟೊರೊಳಗೆ ಆತ ಸಾವನ್ನಪ್ಪಿದ್ದ.

   ಈ ವಾರದ ಆರಂಭದಲ್ಲಿ ಆತ ಬೆಲೀಜ್​ಗೆ ಬಂದಿದ್ದ ಎಂದು ವರದಿಯಾಗಿದೆ. ಆದರೆ ವಾರಾಂತ್ಯದಲ್ಲಿ ದೇಶಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಮಧ್ಯ ಅಮೆರಿಕದಲ್ಲಿರುವ ಒಂದು ಸಣ್ಣ ರಾಷ್ಟ್ರವಾದ ಬೆಲೀಜ್‌ನಲ್ಲಿ 2023 ರ ಹೊತ್ತಿಗೆ ಸರಿಸುಮಾರು 410,825 ಜನರು ವಾಸಿಸುತ್ತಿದ್ದಾರೆ. ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು (52.9%) ಜನರು ಮೆಸ್ಟಿಜೊ ಜನಾಂಗದವರಾಗಿದ್ದು, ಸ್ಥಳೀಯ ಮಾಯಾ ಮತ್ತು ಯುರೋಪಿಯನ್ ಮೂಲದವರು.

   ಇನ್ನೂ 24.9% ಕ್ರಿಯೋಲ್‌ಗಳು, 10.6% ಮಾಯಾ ಜನಾಂಗದವರು ಮತ್ತು 6.1% ಗರಿಫುನಾ ಜನಾಂಗದವರು. ಕ್ರಿಶ್ಚಿಯನ್ ಧರ್ಮವು ಪ್ರಬಲ ಧರ್ಮವಾಗಿದ್ದು, ಸುಮಾರು 80% ಜನಸಂಖ್ಯೆಯು ಕ್ರಿಶ್ಚಿಯನ್ನರೆಂದು ಗುರುತಿಸಿಕೊಳ್ಳುತ್ತದೆ. ಬೆಲೀಜ್ ಮಧ್ಯ ಅಮೆರಿಕದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಜನಸಂಖ್ಯೆಯ ಸರಿಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು ಬೆಲೀಜ್ ನಗರದಲ್ಲಿ ವಾಸಿಸುತ್ತಿದ್ದಾರೆ.

Recent Articles

spot_img

Related Stories

Share via
Copy link