ಬೆಂಗಳೂರು:
ಚೀಟಿ ಹೆಸರಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿಗೆ ವಂಚಿಸಿ, 40 ಕೋಟಿ ರೂ.ಗಳೊಂದಿಗೆ ದಂಪತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜರಗನಹಳ್ಳಿಯಲ್ಲಿ ನಡೆದಿದೆ. ಸುಧಾ ಮತ್ತು ಸಿದ್ದಿಚಾರಿ ವಂಚನೆ ಮಾಡಿರುವ ದಂಪತಿ. ಇವರು ಚೀಟಿ ಹಣದೊಂದಿಗೆ ಪರಾರಿಯಾಗಿ ಒಂದು ತಿಂಗಳು ಕಳೆದಿದೆ. ಆದರೆ, ಈವರೆಗೂ ಪತ್ತೆಯಾಗಿಲ್ಲ. ಇವರ ಹುಡುಕಾಟಕ್ಕಾಗಿ ಪುಟ್ಟೇನಹಳ್ಳಿ ಠಾಣೆ ಪೊಲೀಸರಿಂದ ಮೂರು ತಂಡ ರಚನೆಯಾಗಿದೆ. ಈ ನಡುವೆ ವಂಚನೆಗೆ ಒಳಗಾದವರು ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಹಿಡಿದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಜರಗನಹಳ್ಳಿಯಲ್ಲಿ ವಾಸವಾಗಿದ್ದ ಸುಧಾ ದಂಪತಿ ಕಳೆದ 20 ವರ್ಷದಿಂದ ಚೀಟಿ ಹಣ ನಡೆಸುತ್ತಿದ್ದರು. ಈ ಕುಟುಂಬ ಸುಮಾರು 600ಕ್ಕೂ ಹೆಚ್ಚು ಜನರಿಂದ ಚೀಟಿ ಹಣ ಕಟ್ಟಿಸಿಕೊಂಡಿದೆ. ಸಾರ್ವಜನಿಕರು 5 ರಿಂದ 10 ಲಕ್ಷ ರೂ.ವರೆಗೂ ಚೀಟಿ ಹಣ ಕಟ್ಟಿದ್ದಾರೆ. ಆದರೆ, ಸುಧಾ ಮತ್ತು ಆಕೆಯ ಪತಿ ಸಿದ್ದಾಚಾರಿ ಕಳೆದ ಒಂದು ವರ್ಷದಿಂದ ಚೀಟಿ ಹಣ ನೀಡದೆ ಸತಾಯಿಸುತ್ತಿದ್ದರು. ಈ ನಡುವೆ ಸುಧಾ ಮತ್ತು ಸಿದ್ದಾಚಾರಿ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ಜೂನ್ 3ರ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾರೆ.
ಮನೆ ಬಿಟ್ಟು ಹೋಗುವ ಮುನ್ನ, ದಂಪತಿ ಬ್ಯಾಂಕ್‌ನಲ್ಲಿದ್ದ ತಮ್ಮ ಚಿನ್ನವನ್ನೆಲ್ಲ ಬಿಡಿಸಿಕೊಂಡಿದ್ದಾರೆ. ಬಳಿಕ, ಮನೆಯಲ್ಲೇ ಮೊಬೈಲ್ ಬಿಟ್ಟು, ಬೇರೆಲ್ಲ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ದಂಪತಿ ಕಾಣೆಯಾದ ಮರುದಿನ ಸುಧಾ ತವರು ಮನೆಯವರು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.
ಚೀಟಿ ಹಣ ಕಟ್ಟಿದವರು ಕೂಡ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಸುಧಾ ಕುಟುಂಬ ಕಳೆದ ಒಂದು ತಿಂಗಳಿಂದ ಪತ್ತೆಯಾಗಿಲ್ಲ. ಮೊಬೈಲ್ ಬಳಸುತ್ತಿಲ್ಲ, ಸಂಬಂಧಿಕರ ಸಂಪರ್ಕಕ್ಕೂ ಸಿಗದೆ ಸುಧಾ ಕುಟುಂಬ ಭೂಗತವಾಗಿದೆ. ಪುಟ್ಟೇನಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
